ಕನ್ನಡಪ್ರಭ ವಾರ್ತೆ ಮಳವಳ್ಳಿ
ನೈಸ್ ಕಂಪನಿ ಪರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಕಾಲತ್ತು ವಹಿಸಿರುವುದನ್ನು ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಎನ್.ಎಲ್.ಭರತ್ ರಾಜ್ ಖಂಡಿಸಿದರು.ಪಟ್ಟಣದ ಸಂಘದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಮೇಲಿನ ದೌರ್ಜನ್ಯ, ದಬ್ಬಾಳಿಕೆ, ಭ್ರಷ್ಟಾಚಾರ ಮೂಲಕ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿರುವ ನೈಸ್ ಕಂಪನಿ ಸುಪ್ರೀಂಕೋರ್ಟ್ ಹಾಗೂ ಸದನ ಸಮಿತಿಯಿಂದ ಛೀಮಾರಿಗೆ ಹಾಕಿಸಿಕೊಂಡಿದೆ. ಇಂತಹ ನೈಸ್ ಕಂಪನಿಯ ದೌರ್ಜನ್ಯ ಮತ್ತು ಹಗರಣಗಳಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಬಲಕ್ಕೆ ನಿಲ್ಲುವ ಮೂಲಕ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ನಂತರ ನೈಸ್ ಯೋಜನೆ ಅಪ್ರಸ್ತುತವಾಗಿದೆ. ನೈಸ್ ಕಂಪನಿ ಭೂ ಸ್ವಾಧೀನದಿಂದ ರೈತರಿಗೆ ಸಾಕಷ್ಟು ಅನ್ಯಾಯವಾಗಿದೆ. ಇಂಥ ರೈತರ ನೆರವಿಗೆ ಸರ್ಕಾರ ಬೆಂಬಲವಾಗಿ ನಿಲ್ಲಬೇಕಿತ್ತು. ನೈಸ್ ಕಂಪನಿ ಬೆಂಬಲಕ್ಕೆ ನಿಂತಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರೈತರ ಕ್ಷಮೆ ಕೋರಬೇಕು. ಟಿ.ಬಿ.ಜಯಚಂದ್ರ ಅವರ ಅಧ್ಯಕ್ಷತೆಯ ಸದನ ಸಮಿತಿ ಶಿಪಾರಸುಗಳನ್ನು ಕೂಡಲೇ ಜಾರಿ ಮಾಡಬೇಕೆಂದು ಆಗ್ರಹಿಸಿದರು.ಚಾಮರಾಜನಗರ, ಮೈಸೂರು, ಬೆಂಗಳೂರು ನಡುವೆ ಇಂಟರ್ಸಿಟಿ ರೈಲು ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು. ಸತ್ಯಮಂಗಲ, ಚಾಮರಾಜನಗರ, ಕೊಳ್ಳೇಗಾಲ, ಮಳವಳ್ಳಿ, ಕನಕಪುರ ರೈಲು ಮಾರ್ಗ ಕಾಮಗಾರಿಯನ್ನು ಆರಂಭಿಸಿ ತ್ವರಿತಗತಿಯಲ್ಲಿ ಮುಗಿಸುವ ಮೂಲಕ ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ಸಂಪರ್ಕ ಕಲ್ಪಿಸಿ ವ್ಯಾಪಾರ, ವಹಿವಾಟು ಹೆಚ್ಚಳಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.
ದಶಪಥ ರಸ್ತೆಯಿಂದ ಮಂಡ್ಯ- ಮೈಸೂರು - ರಾಮನಗರ ಜಿಲ್ಲೆಗಳ ರೈತರು ಭೂಮಿ ಕಳೆದುಕೊಂಡರು. ಅದರ ಜೊತೆಗೆ ಐದಾರು ಸಾವಿರ ವ್ಯಾಪಾರಸ್ಥರು ಅಂಗಡಿ, ಹೋಟೆಲ್ ಮತ್ತು ಚನ್ನಪಟ್ಟಣದ ಗೊಂಬೆ ವ್ಯಾಪಾರವನ್ನು ಸ್ಥಗಿತಗೊಳಿಸಿ ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಎಂದು ವಿಷಾದಿಸಿದರು.ನೈಸ್ ರಸ್ತೆ ಮಾಡಲು ಹೊರಟಿರುವ ಕ್ರಮ ಅದು ರೈತರ ಭೂಮಿಯನ್ನು ಲೂಟಿ ಹೊಡೆಯುವ ತಂತ್ರಗಾರಿಕೆಯೇ ವಿನ: ಇದರಲ್ಲಿ ಯಾವುದೇ ಅಭಿವೃದ್ಧಿ ಕಂಡುಬರುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಯೋಜನೆಯನ್ನು ರದ್ದು ಪಡಿಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಎನ್.ಲಿಂಗರಾಜಮೂರ್ತಿ, ಮುಖಂಡರಾದ ಮರಿಲಿಂಗೇಗೌಡ, ಚಿಕ್ಕಸ್ವಾಮಿ, ಹಿಪ್ಜುಲ್ಲಾ, ಎ.ಎಲ್.ಶಿವಕುಮಾರ್ ಇದ್ದರು.