ಮಂಡ್ಯ : ಮಂಡ್ಯ ಜಿಲ್ಲೆಯ ಜನರ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ವಿವಿಧ ಸಂಘಟನೆಗಳ ಕಾರ್‍ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಸೇರಿದ ರೈತ ಸಂಘ, ಕನ್ನಡಸೇನೆ, ಬಿಜೆಪಿ ಕಾರ್‍ಯಕರ್ತರು, ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು. ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡ ಸೇನೆ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಬೆಂಗಳೂರಿನಲ್ಲಿ ನಡೆಯುತ್ತಿದ್ದ ಸಮಾವೇಶದಲ್ಲಿ ಡಿ.ಕೆ.ಶಿವಕುಮಾರ್ ಅವರು ಮಂಡ್ಯ ಜಿಲ್ಲೆಯ ಜನರ ಬಗ್ಗೆ ಅವಹೇಳನಕಾರಿ, ಅಪಮಾನ ಮಾಡುವ ರೀತಿಯಲ್ಲಿ ಜಿಲ್ಲೆಯ ಜನರ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಕಿಡಿಕಾರಿದರು.
ಡಿ.ಕೆ.ಶಿವಕುಮಾರ್ ಅವರು ಮಂಡ್ಯದ ಜನರೊಟ್ಟಿಗೆ ಅತಿ ಹೆಚ್ಚು ನಂಟನ್ನು ಹೊಂದಿದ್ದಾರೆ. ಆದರೂ ಜಿಲ್ಲೆಯ ಜನರ ಬಗ್ಗೆ ಲಘುವಾಗಿ ಮಾತನಾಡಿರುವುದು ಅತೀವ ನೋವು ತಂದಿದೆ. ಮಂಡ್ಯದ ಜನರ ಛತ್ರಿ ಆಟ ನೋಡಿದ್ದೇನೆ ಎನ್ನುವಂತಹ ಕ್ಷುಲ್ಲಕವಾಗಿ ಮಾತನಾಡಿರುವುದು ನಮಗೆ ತೀವ್ರ ಬೇಸರ ಮೂಡಿಸಿದೆ ಎಂದು ದೂರಿದರು.
ಡಿ.ಕೆ.ಶಿವಕುಮಾರ್ ಅವರು ತಕ್ಷಣ ಮಂಡ್ಯ ಜಿಲ್ಲೆಯ ಜನರ ಕ್ಷಮೆಯಾಚನೆ ಮಾಡಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡುವ ಜೊತೆಗೆ ಮಾ.22ರಂದು ನಡೆಯುವ ಕರ್ನಾಟಕ ಬಂದ್ ವೇಳೆ ಡಿ.ಕೆ.ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೂ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಕಾವೇರಿ ಸಂಕಷ್ಟ ಬಂದಾಗಲೆಲ್ಲಾ ಹೋರಾಟ ಮಾಡುವ ಮಂಡ್ಯ ಜಿಲ್ಲೆಯ ಜನರ ಪರವಾಗಿ ಎಷ್ಟು ಬಾರಿ ಹೋರಾಟ ಮಾಡಿದ್ದೀರಿ. ಅದೇ ಬೆಂಗಳೂರಿಗೆ ಕಾವೇರಿ ನೀರು ಕೊಡಲೆಂದು 5 ಹಂತಗಳ ಯೋಜನೆ ಮಾಡಿದ್ದೂ ಅಲ್ಲದೇ, ಇದೀಗ 6ನೇ ಹಂತದ ಯೋಜನೆ ಮಾಡುತ್ತಿದ್ದೀರಿ. ಅಧಿಕಾರಕ್ಕೆ ಬರುವಾಗ ಮಂಡ್ಯದವರು ಬೇಕು. ಈಗ ಮಾತ್ರ ಬೇಕಿಲ್ಲವೇ ಎಂದು ಪ್ರಶ್ನಿಸಿದರು.
ರೈತ ಸಂಘದ ಮುಖಂಡ ಶಿವಳ್ಳಿ ಚಂದ್ರಶೇಖರ್ ಮಾತನಾಡಿ, ಮಂಡ್ಯ ಜಿಲ್ಲೆಯ ಜನರ ಬಗ್ಗೆ ಹಗುರವಾಗಿ ಮಾತನಾಡಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಕ್ಷಣ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯ ಬಗ್ಗೆ ವಿಶೇಷವಾದ ಗೌರವ ಇದೆ. ಮಂಡ್ಯ ಎಂದರೆ ಇಂಡಿಯಾ ಎಂಬ ವಾಕ್ಯವಿದೆ. ಎಸ್.ಎಂ. ಕೃಷ್ಣ, ಕೆ.ವಿ.ಶಂಕರಗೌಡ, ಎಚ್.ಡಿ. ಚೌಡಯ್ಯ, ಪುಟ್ಟಣ್ಣಯ್ಯ ಸೇರಿದಂತೆ ಹಲವಾರು ಮಹನೀಯರು ಜಿಲ್ಲೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.
ಮಂಡ್ಯದವರು ರಾಜಕೀಯವಾಗಿ ಯಾವ ನಿರ್ಧಾರ ಕೈಗೊಳ್ಳುತ್ತಾರೋ ಅದು ರಾಜ್ಯಕ್ಕೇ ಅನ್ವಯವಾಗುತ್ತದೆ. ಈಗಾಗಲೇ ಹಲವು ಬಾರಿ ಸಾಭೀತಾಗಿದೆ. ಇದನ್ನು ಡಿ.ಕೆ.ಶಿಕುಮಾರ್ ಮರೆತಂತಿದೆ. ಮಂಡ್ಯದ ಬಗ್ಗೆ ಮಾತನಾಡುವಾಗ ನಾಲಿಗೆ ಹದ್ದು ಬಸ್ತಿನಲ್ಲಿಟ್ಟುಕೊಂಡು ಮಾತನಾಡಬೇಕು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಕೀಳಘಟ್ಟ ನಂಜುಂಡಯ್ಯ, ಸಿ.ಟಿ.ಮಂಜುನಾಥ್, ಮಹಂತಪ್ಪ ಸೇರಿದಂತೆ ಹಲವಾರು ಭಾಗವಹಿಸಿದ್ದರು.