ಕನ್ನಡಪ್ರಭ ವಾರ್ತೆ ಕೊಲ್ಹಾರ
ಪಟ್ಟಣದ ಗುರುಸಿದ್ದಬಸವ ಶಿವಾಚಾರ್ಯರ ಜನ್ಮಶತಮಾನೋತ್ಸವ, ಹೊಸ ಕೊಲ್ದಾರ ರಜತ ಮಹೋತ್ಸವ, ಮೊಸರ ನಾಡೋತ್ಸವ, ನೂತನ ಪಟ್ಟದೇವರ ಹಿರೇಮಠ ಲೋಕಾರ್ಪಣೆ, ಪಟ್ಟದೇವರ ಹಿರೇಮಠದ ಧರ್ಮಾಧಿಕಾರಿ ಮುರುಘೇಂದ್ರ ಸ್ವಾಮಿಗಳ ಷಷ್ಠಬ್ಧಿ ಸಮಾರಂಭ, ವಿವಿಧ ಸರ್ಕಾರಿ ಕಾಮಗಾರಿಗಳ ಲೋಕಾರ್ಪಣಾ ಕಾರ್ಯಕ್ರಮದ ಪ್ರಯುಕ್ತ ಮೇ 23 ರಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕೊಲ್ಹಾರಕ್ಕೆ ಆಗಮಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಿ.ಭೂಬಾಲನ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುವ ಸ್ಥಳ ಪರಿಶೀಲನೆ ನಡೆಯಿತು. ಜೊತೆಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆಸಿದರು.ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಆಗಮನ, ನಿರ್ಗಮನ, ವಾಸ್ತವ್ಯ, ಖಾಸಗಿ ಹಾಗೂ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಜೊತೆಗೆ ಶಿಷ್ಟಾಚಾರ ಅನುಸರಿಸುವ ಕುರಿತು ಜಿಲ್ಲಾಧಿಕಾರಿಗಳು ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಟಿ.ಭೂಬಾಲನ್, ಉಪಮುಖ್ಯಮಂತ್ರಿಗಳು ಧಾರ್ಮಿಕ ಕಾರ್ಯಕ್ರಮ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆಗಾಗಿ ಕೊಲ್ಹಾರಕ್ಕೆ ಆಗಮಿಸುವ ನಿರೀಕ್ಷೆ ಇದೆ. ಹೀಗಾಗಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಮೇ 21 ರಿಂದ ಮೇ 24 ರವರೆಗೆ ನಾಲ್ಕು ದಿನಗಳ ಕಾಲ ಕೊಲ್ಹಾರದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು ಮೇ 23 ರಂದು ಜರುಗುವ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿಗಳು ಸಾಕ್ಷಿಯಾಗಲಿದ್ದಾರೆ. ಆ ಹಿನ್ನೆಲೆಯಲ್ಲಿ ಎಲ್ಲ ಪರಿಶೀಲನೆ ನಡೆಸಲಾಗುತ್ತಿದೆ ಎಂದು ವಿವರಿಸಿದರು.ಈ ವೇಳೆ ಯುಕೆಪಿ ಮಹಾವ್ಯವಸ್ಥಾಪಕ ಮಾಧವ ವಿಠಲರಾವ್ ಗಿಡ್ಡೆ, ಯುಕೆಪಿ ವಿಶೇಷ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಉಪ ವಿಭಾಗಧಿಕಾರಿ ಗುರುನಾಥ ಗಡೇದ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಂಪತ್ ಗುಣಾರಿ, ತಹಶೀಲ್ದಾರ್ ಎಸ್.ಎಸ್ ನಾಯಕಲಮಠ, ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಬಿ.ಎಂ ಸೌಧಾಗರ, ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ್ ಮದ್ದಿನ, ಸಿಪಿಐ ಅಶೋಕ ಚವ್ಹಾಣ, ಟಿಹೆಚ್‌ಒ ಕವಿತಾ ದೊಡಮನಿ, ಸಿಡಿಪಿಒ ಶಿಲ್ಪಾ ಹಿರೇಮಠ, ಪಪಂ ಮುಖ್ಯಾಧಿಕಾರಿ ವಿರೇಶ್ ಹಟ್ಟಿ, ಎಂ.ಬಿ ನಾಗಠಾಣ, ಕೆಬಿಜೆಎನ್ಎಲ್ ಇಇ ಎಸ್.ಐ ಶೀಲವಂತ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಲಕ್ಷ್ಮೀ ತೆಲ್ಲೂರ, ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ, ಕಲ್ಲು ದೇಸಾಯಿ, ಪ.ಪಂ ಅಧ್ಯಕ್ಷ ಸಿ.ಎಸ್.ಗಿಡ್ಡಪ್ಪಗೋಳ ಹಾಗೂ ಇನ್ನಿತರರು ಇದ್ದರು.