ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಸರ್ಕಾರದ ಗಮನಕ್ಕೆ ತರದೆ ಸರ್ಕಾರವನ್ನೇ ವಂಚಿಸಿ ಇಕ್ಕಟ್ಟಿಗೆ ಸಿಲುಕಿಸಿ ನಿಯಮ ಮೀರಿದ ಆದೇಶ ಹೊರಡಿಸಿರುವ ಚಾ.ನಗರ ಡಿಡಿಪಿಐ ಈಗ ಇಲಾಖೆ ಮುಂದೆ ಅಪರಾಧಿ ಸ್ಥಾನದಲ್ಲಿದ್ದಾರೆ ಎಂದು ಶಾಸಕ ಕೃಷ್ಣಮೂರ್ತಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಅಬ್ದುಲ್ ಕಲಾಂ ಸಂಸ್ಥೆ ಎಂಬ ನಕಲಿ ಸಂಸ್ಥೆಗೆ ಯೋಗ, ಗಣಕಯಂತ್ರ ತರಬೇತಿಗೆ ಫಲಾನುಭವಿಗಳ ಆಯ್ಕೆಗೆ ಆದೇಶ ನೀಡಿ ಅಕ್ರಮಕ್ಕೆ ಸಹಕಾರ ನೀಡಿದ್ದು ಈ ಪ್ರಕರಣ ಸರ್ಕಾರದ ಹಂತದಲ್ಲಿ ವಿಚಾರಣೆಯಲ್ಲಿರುವಾಗಲೇ ಜಿಲ್ಲೆಯ 4 ಬಿಇಒಗಳಿಗೆ ನೋಟಿಸ್ ನೀಡಿರುವ ಕ್ರಮ ಸರಿಯಲ್ಲ. ಇದರಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದರು.ಜಿಲ್ಲೆಯ ಹಲವು ಬಿಇಒಗಳಿಗೆ ನಕಲಿ ಸಂಸ್ಥೆಗೆ ಸಂಬಂಧಿಸಿದಂತೆ ನೇಮಕಾತಿ ವಿಚಾರದಲ್ಲಿ ಸಮಜಾಯಿಸಿ ನೀಡುವಂತೆ ಮಾ.18ರಂದು ನೋಟಿಸ್ ಜಾರಿಗೊಳಿಸಿದ್ದಾರೆ. ಇವರ ವಿರುದ್ಧವೇ ಮಾ.19ರಂದು ವಿಚಾರಣೆ ನಡೆಯುತ್ತಿದ್ದು ಈ ಹಂತದಲ್ಲಿ ಆರೋಪಿ ಸ್ಥಾನದಲ್ಲಿರುವ ಇವರಿಗೆ ನೋಟಿಸ್ ಜಾರಿಗೊಳಿಸಿರುವ ಕ್ರಮ ಸರಿಯಲ್ಲ, ಸರ್ಕಾರಿ ಅಧಿಕಾರಿಯಾಗಿ ನಿಯಮ ಮೀರಿ, ಸರ್ಕಾರದ ಗಮನಕ್ಕೆ ತರದೆ ಕರ್ತವ್ಯ ಲೋಪ ಎಸಗಿದ್ದಾರೆ. ಇದು ನಿಜಕ್ಕೂ ಖಂಡನೀಯ ವಿಚಾರ.
ಈ ಹಂತದಲ್ಲಿ ನೋಟಿಸ್ ಜಾರಿಗೊಳಿಸುವ ಅಧಿಕಾರ ನೀಡಿದ್ದು ಯಾರು ಎಂದು ಶಾಸಕರು ಪ್ರಶ್ನಿಸಿದರು. ಈ ಸಂಬಂಧ ಪ್ರಕರಣದ ಬಗ್ಗೆ ಸಚಿವರು, ಆಯುಕ್ತರ ಜೊತೆ ಚರ್ಚಿಸಿ ಡಿಡಿಪಿಐ ನೋಟಿಸ್ ನೀಡಿದ ಪ್ರತಿಯ ದಾಖಲೆ ಪ್ರದರ್ಶಿಸುವೆ ಎಂದರು. ಡಿಡಿಪಿಐ ಆದೇಶ, ಕಲಾಂ ಸಂಸ್ಥೆ ನಂಬಿ ಮೋಸ ಹೋಗಿದ್ದೇನೆ, ನ್ಯಾಯ ದೊರಕಿಸಿಕೊಡಿ ಎಂದು ನೊಂದ ಮಹಿಳೆಯೊಬ್ಬಳು ತಮ್ಮ ಅಳಲು ತೋಡಿಕೊಂಡಿದ್ದಾರೆ.ನಮ್ಮ ಬಳಿ ದಾಖಲೆಗಳಿವೆ, ನ್ಯಾಯ ಒದಗಿಸಿ:
ಜಂಟಿ ನಿರ್ದೇಶಕರ ಮುಂದೆ ಮಹಿಳೆಯರ ದೂರುಡಿಡಿಪಿಐ ಆದೇಶ ನಂಬಿ ಕಲಾಂ ಸಂಸ್ಥೆಯ ಪದಾಧಿಕಾರಿಗಳಿಗೆ ಹಣ ನೀಡಿ ನಾವು ಮೋಸ ಹೋಗಿದ್ದು ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಹಣ ನೀಡಿ ವಂಚನೆಗೊಳಗಾದ 6 ಮಂದಿ ಮಹಿಳೆಯರು ಶಿಕ್ಷಣ ಇಲಾಖೆಯ ವಿಭಾಗೀಯ ಜಂಟಿ ನಿರ್ದೇಶಕ ಪಾಂಡುರಂಗರಿಗೆ ಲಿಖಿತ ದೂರು ನೀಡಿದ್ದಾರೆ.
ಅಂಜಲಿ ಸೇರಿದಂತೆ ನೊಂದ 6 ಮಹಿಳೆಯರು ನಾವು ಡಿಡಿಪಿಐ ಹೊರಡಿಸಿದ ಆದೇಶವನ್ನು ನಂಬುವಂತಾಯಿತು. ಕಲಾಂ ಸಂಸ್ಥೆ ಪದಾಧಿಕಾರಿಗಳು ಇದನ್ನೆ ಮಾನದಂಡವನ್ನಾಗಿಸಿಕೊಂಡು ನಮಗೆ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗಕೊಡಿಸುತ್ತೇವೆ ಎಂದು ನಂಬಿ ನಮ್ಮಿಂದ 1.30 ಲಕ್ಷ ಪಡೆದುಕೊಂಡಿದ್ದು ಹಣವನ್ನು ನೀಡಿಲ್ಲ, ನಾವು ಕೆಲಸ ಮಾಡಿದ್ದಕ್ಕೆ ಸಂಬಳವನ್ನು ನೀಡಿಲ್ಲ, ನಾವು ಕೆಲವರು ಪೋನ್ ಪೇ ಮೂಲಕ ಹಣ ನೀಡಿದ್ದೇವೆ, ಇನ್ನು ಕೆಲವರು ಹಣ ನೀಡಿದ್ದಕ್ಕೆ ಪೋಟೊ, ವಿಡಿಯೋ ದಾಖಲೆ ಇಟ್ಟಕೊಂಡಿದ್ದೇವೆ, ನಮ್ಮಂತೆ ನೂರಾರು ಮಂದಿ ವಂಚನೆಗೊಳಗಾಗಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.ಈ ವೇಳೆ ಹೇಳಿಕೆ ಪಡೆದ ಜಂಟಿ ನಿರ್ದೇಶಕರು ನೀವು ಯಾರು ಮೋಸ ಹೋಗಿದ್ದೀರಿ, ಹಣ ನೀಡಿದ್ದಕ್ಕೆ ದಾಖಲೆ ಸಲ್ಲಿಸಿದರೆ ಸಂಸ್ಥೆ ಹಾಗೂ ಇದಕ್ಕೆ ಕಾರಣರಾದವರ ವಿರುದ್ಧ ಸರ್ಕಾರಕ್ಕೆ ವರದಿ ಸಲ್ಲಿಸಿ, ನ್ಯಾಯ ಕೊಡಿಸುವುದಾಗಿ ಭರವೆಸ ನೀಡಿದರು.ಶಿಕ್ಷಣ ಇಲಾಖೆಯ ಮೈಸೂರು ವಿಭಾಗೀಯ ಜಂಟಿ ನಿರ್ದೇಶಕ ಪಾಂಡುರಂಗರಿಗೆ ಡಿಡಿಪಿಐ ಆದೇಶ ನಂಬಿ ಕಲಾಂ ಸಂಸ್ಥೆಗೆ ಹಣ ನೀಡಿ ವಂಚನೆಗೊಳಗಾಗಿದ್ದೇವೆ ನ್ಯಾಯ ದೊರಕಿಸಿ ಕೊಡಿ ಎಂದು ನೊಂದ ಮಹಿಳೆಯರು ಲಿಖಿತ ದೂರು ಸಲ್ಲಿಸಿ ಮನವಿ ಮಾಡಿದರು.