ಹೊಸದುರ್ಗದಲ್ಲಿ ಡಿಡಿಪಿಐ ಸೂಚನೆಗೆ ಕಿಮ್ಮತ್ತೇ ಇಲ್ಲ

KannadaprabhaNewsNetwork |  
Published : May 11, 2025, 01:23 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್ | Kannada Prabha

ಸಾರಾಂಶ

ಹೊಸದುರ್ಗ ತಾಲೂಕಲ್ಲಿ ಶಿಕ್ಷಣದ ಅಂಗಡಿಗಳು ತೆರೆದಿದ್ದು, ಭರಪೂರ ವ್ಯಾಪಾರಕ್ಕೆ ಸಜ್ಜಾಗಿವೆ. ಆದರೆ ಎಲ್ಲಿಯೂ ರೇಟ್ ಲಿಸ್ಟ್ ಇಲ್ಲ. ಹಾಗೆಯೇ ಬಾಯಿ ಮಾತು, ಬಿಳಿ ಚೀಟಲ್ಲಿ ವ್ಯಾಪಾರ ಸಾಗಿದೆ.

ವಿಶ್ವನಾಥ ಶ್ರೀರಾಂಪುರ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಹೊಸದುರ್ಗ ತಾಲೂಕಲ್ಲಿ ಶಿಕ್ಷಣದ ಅಂಗಡಿಗಳು ತೆರೆದಿದ್ದು, ಭರಪೂರ ವ್ಯಾಪಾರಕ್ಕೆ ಸಜ್ಜಾಗಿವೆ. ಆದರೆ ಎಲ್ಲಿಯೂ ರೇಟ್ ಲಿಸ್ಟ್ ಇಲ್ಲ. ಹಾಗೆಯೇ ಬಾಯಿ ಮಾತು, ಬಿಳಿ ಚೀಟಲ್ಲಿ ವ್ಯಾಪಾರ ಸಾಗಿದೆ. ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷಕ್ಕೆ ಖಾಸಗಿ ವಲಯದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ವಿದ್ಯಾರ್ಥಿಗಳ ಪ್ರವೇಶಕ್ಕೆ ಸಜ್ಜಾಗಿದ್ದು, ಶಿಕ್ಷಣ ಇಲಾಖೆಯ ಸೂಚನೆಗಳು ಎಲ್ಲಿಯೂ ಪಾಲನೆಯಾಗಿಲ್ಲ. ಪ್ರತಿ ಶಾಲೆಯ ನೋಟಿಸ್ ಬೋರ್ಡ್‌ನಲ್ಲಿ ಶುಲ್ಕದ ಪ್ರಮಾಣ ಪ್ರಕಟಿಸಬೇಕೆಂಬ ಬಿಗಿ ನಿರ್ದೇಶನವಿದ್ದರೂ ಯಾರೂ ಕಿವಿಗೊಟ್ಟಿಲ್ಲ. ಡಿಡಿಪಿಐ ಸೂಚನೆಗೆ ಯಾರೂ ಕ್ಯಾರೇ ಅಂದಿಲ್ಲ. ಅಷ್ಟರ ಮಟ್ಟಿಗೆ ಶಿಕ್ಷಣದ ಕಿತಾಬ್‌ನಲ್ಲಿ ರಾಮಕೃಷ್ಣ ಲೆಕ್ಕದಾಟ ನಡೆದಿದೆ. ತಾಲೂಕಿನಲ್ಲಿ ಸರ್ಕಾರಿ ಶಾಲೆಗಳಲ್ಲಿನ ಗುಣಮಟ್ಟದ ಶಿಕ್ಷಣದ ಕೊರತೆ ಹಾಗೂ ಕಳಪೆ ಫಲಿತಾಂಶ ಖಾಸಗಿ ಶಾಲೆಗಳ ಹೆಚ್ಚಳ ಹಾಗೂ ಶುಲ್ಕದ ಹೆಸರಲ್ಲಿ ಸುಲಿಗೆ ಮಾಡಲು ಕಾರಣವಾಗಿದೆ. ತಾಲೂಕಿನಲ್ಲಿ ಒಟ್ಟು 90 ಅನುದಾನಿತ ಹಾಗೂ ಅನುದಾನ ರಹಿತ ಖಾಸಗಿ ಶಾಲೆಗಳಿದ್ದು, ಬಹುತೇಕ ಶಾಲೆಗಳಲ್ಲಿ ಮಕ್ಕಳಿಗೆ ಬೇಕಾದ ಮೂಲ ಸೌಕರ್ಯ ಹಾಗೂ ಶಿಕ್ಷಕರು ಇಲ್ಲ. ಆದರೆ ಕಂಪ್ಯೂಟರ್‌ನಲ್ಲಿ ನೀಟಾಗಿ ಡಿಸೈನ್ ಮಾಡಿ ತಮ್ಮ ಶಿಕ್ಷಣ ಸಂಸ್ಥೆಗಳ ಯೋಜನೆಗಳನ್ನು ಆಕರ್ಷಕ ರೀತಿಯಲ್ಲಿ ಫ್ಲೆಕ್ಸ್ ಗಳಲ್ಲಿ ಮುದ್ರಿಸುವ ಮೂಲಕ ಪೋಷಕರನ್ನು ಹಾಗೂ ಮಕ್ಕಳ ತನ್ನೆಡೆಗೆ ಸೆಳೆಯುತ್ತಿವೆ. ದಾಖಲಾತಿ ಶುಲ್ಕ ಎಂಬುದು ಆಯಾ ಶಾಲೆಗಳ ವ್ಯಾಪ್ತಿಗೆ ಬಿಟ್ಟಿದೆ. ಪೋಷಕರಲ್ಲಿನ ಕಾನ್ವೆಂಟ್‌ ಸಂಸ್ಕೃತಿ, ಆಂಗ್ಲ ಮಾಧ್ಯಮದ ವ್ಯಾಮೋಹ, ನಮ್ಮ ಮಕ್ಕಳು 100ಕ್ಕೆ 100 ತೆಗೆಯಬೇಕೆಂಬ ಹಂಬಲ ಇವು ಖಾಸಗಿ ಶಿಕ್ಷಣ ಸಂಸ್ಥೆಗಳ ವಸೂಲಿ ದಂಧೆಗೆ ಪ್ರೇರೇಪಣೆಯಾಗುತ್ತಿದೆ. ಗ್ರಾಮೀಣ ಸೇರಿದಂತೆ ನಗರದಲ್ಲಿನ ಹೆಚ್ಚು ಶುಲ್ಕ ಪಡೆಯುವ ಶಿಕ್ಷಣ ಸಂಸ್ಥೆಗಳಲ್ಲಿನ ಶಿಕ್ಷಕರು ತಾವು ಬೋಧಿಸುವ ಪಠ್ಯಕ್ರಮದ ಬಗ್ಗೆ ಅರ್ಹತೆಯೇ ಇರುವುದಿಲ್ಲ. ಕಡಿಮೆ ಸಂಬಳಕ್ಕೆ ಅನರ್ಹರನ್ನು ಸೇರಿಸಿಕೊಳ್ಳುವ ಶಿಕ್ಷಣ ಸಂಸ್ಥೆಗಳು ಈ ಬಗ್ಗೆ ಶಿಕ್ಷಣ ಇಲಾಖೆಗೆ ಸರಿಯಾದ ಮಾಹಿತಿಯನ್ನೇ ನೀಡುವುದಿಲ್ಲ. ಅನೇಕ ಶಾಲೆಗಳಲ್ಲಿ ಶಿಕ್ಷಕರುಗಳಿಗೆ ಸಂಬಳವನ್ನೇ ಸರಿಯಾಗಿ ನೀಡುತ್ತಿಲ್ಲ ಎನ್ನುವ ಆರೋಪವೂ ಕೇಳಿ ಬರುತ್ತಿವೆ. ಶಿಕ್ಷಕರಿಗೆ ಬ್ಯಾಂಕಿನ ಮೂಲಕವೇ ವೇತನ ಪಾವತಿ ಮಾಡಬೇಕೆಂಬ ನಿಯಮವಿದ್ದರೂ ಕೆಲ ಶಾಲೆಗಳಲ್ಲಿ ಕೂಲಿ ಕಾರ್ಮಿಕರಿಗೆ ನೀಡು ರೀತಿ ಶಾಲೆಗಳಲ್ಲಿಯೇ ಸಹಿ ಪಡೆದು ಸಂಬಳ ನೀಡಲಾಗುತ್ತಿದೆ. ವರ್ಷಕ್ಕೊಮ್ಮೆ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಆಡಳಿತ ಮಂಡಳಿ ಸಭೆ ಮಾಡುವ ಬಿಇಓ, ಮಾಹಿತಿ ನೀಡಿ ನೋಟಿಸ್‌ ಕೊಟ್ಟು ಸುಮ್ಮನಾಗುತ್ತಾರೆ. ವಾರ್ಷಿಕ ಪರೀಕ್ಷಾ ಫಲಿತಾಂಶದ ಆಧಾರದ ಮೇಲೆ ಶಾಲೆಗಳ ಪ್ರಗತಿ ನೋಡುವ ಪೋಷಕರು ದುಬಾರಿ ಶುಲ್ಕದ ಕಡೆ ಗಮನ ಹರಿಸುತ್ತಿಲ್ಲ. ಇದು ಸುಲಿಗೆ ಮಾಡುವವರಿಗೆ ಹಬ್ಬದ ವಾತಾವರಣ ಸೃಷ್ಟಿಸಿದೆ. ನಮ್ಮಲಿ ಕರಾಟೆ, ಸ್ಕೇಟಿಂಗ್ ಕಲಿಸುತ್ತೇವೆ. ಈಜುಕೊಳವಿದ್ದು ಸ್ವಿಮ್ಮಿಂಗ್‌ ಕಲಿಸುತ್ತೇವೆ, ಅಬಕಾಸ್‌ ಶಿಕ್ಷಣ ನೀಡುತ್ತೇವೆ ಎಂದೆಲ್ಲ ಪೋಷಕರ ಮುಂದೆ ಹೊಸ ಕನಸುಗಳ ಹರವಿ ಹೆಚ್ಚುವರಿ ಶುಲ್ಕ ಕಟ್ಟಿಸಿಕೊಳ್ಳುತ್ತಿವೆ. ಶಿಕ್ಷಣ ಸಂಸ್ಥೆಗಳು ಅದಾವುದನ್ನೂ ಕಲಿಸುವ ಉಸಾಬರಿಗೆ ಹೋಗುತ್ತಿಲ್ಲ. ಪ್ರಶ್ನೆ ಮಾಡಿದರೆ ನಮ್ಮ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಾರೋ ಇಲ್ಲವ ಎಂಬ ಆತಂಕ ಪೋಷಕರಲ್ಲಿದೆ. ಸರ್ಕಾರದ ನಿರ್ದೇಶನದಂತೆ ಖಾಸಗಿ ಶಾಲೆಗಳು ತಾವು ತೆಗೆದುಕೊಳ್ಳುವ ಶುಲ್ಕಗಳ ಬಗ್ಗೆ ನೋಟಿಸ್‌ ಬೋರ್ಡ್‌ನಲ್ಲಿ ಪ್ರದರ್ಶೀಸಬೇಕು. ಪೋಷಕರು ಮಕ್ಕಳನ್ನು ಶಾಲೆಗೆ ಸೇರಿಸಲು ಬಂದಾಗ ಆಡಳಿತ ಮಂಡಳಿ ದಾಖಲಾತಿ ಶುಲ್ಕವನ್ನು ಮಾತ್ರ ಹೇಳುತ್ತಾರೆ. ನಂತರ ತಮ್ಮ ವರಸೆಯನ್ನು ಪ್ರಾರಂಭಿಸಿ ಪುಸ್ತಕ, ಯೂನಿಫಾಂ, ಗ್ರಂಥಾಲಯ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ ಅಂತ ಶುಲ್ಕದ ಪಟ್ಟಿ ಉದ್ದವಾಗುತ್ತಾ ಹೋಗುತ್ತದೆ. ಖಾಸಗಿ ಶಾಲೆಗಳು ದಾಖಲಾತಿ ಸಮಯದಲ್ಲಿ ಶುಲ್ಕದ ಪ್ರಮಾಣವ ನೋಟಿಸ್‌ ಬೋರ್ಡ್‌ನಲ್ಲಿ ಪ್ರದರ್ಶಿಸುವಂತೆ ಸೂಚಿಸಲಾಗಿದೆ. ಇದು ಸರ್ಕಾರ ರೂಪಿಸಿದ ನಿಯಾವಳಿಯಾಗಿದ್ದು, ಪಾಲನೆ ಮಾಡದಿದ್ದರೆ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ. ಶುಲ್ಕ ವಸೂಲು ಮಾಡುವ ಮುನ್ನ ಇಲಾಖೆ ಗಮನಕ್ಕೆ ತರಬೇಕು. ಈ ಬಗ್ಗೆ ಮತ್ತೆ ಬಿಗಿ ನಿರ್ದೇಶ ನೀಡಲಾಗುವುದು.

-- ಸಯ್ಯದ್‌ ಮೋಸೀನ್‌, ಬಿಇಓ ಹೊಸದುರ್ಗ

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ