ಆರೋಗ್ಯ ಕೇಂದ್ರ ನಿರ್ಮಾಣ ಪೂರ್ಣಗೊಳಿಸಲು ಗಡುವು

KannadaprabhaNewsNetwork |  
Published : Jan 19, 2024, 01:47 AM IST
೧೭ಕೆಎಲ್‌ಆರ್-೩ಕೋಲಾರ ತಾಲ್ಲೂಕಿನ ನರಸಾಪುರ ೧೨.೪೦ ಕೋಟಿ ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಶಾಸಕ ಕೊತ್ತೂರು ಮಂಜುನಾಥ್ ಶಂಕುಸ್ಥಾಪನೆ ನೆರವೇರಿಸಿದರು. | Kannada Prabha

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ತಕ್ಷಣವೇ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ, ನರಸಾಪುರ ಹೋಬಳಿ ಕೇಂದ್ರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಜಿಲ್ಲೆಗೆ ಮಾದರಿಯಾಗುವಂತೆ ಅಭಿವೃದ್ಧಿಪಡಿಸಲಾಗುತ್ತದೆ

ಕನ್ನಡಪ್ರಭ ವಾರ್ತೆ ಕೋಲಾರ

ಅಧಿಕಾರಿಗಳ ಜೊತೆ ಪ್ರೀತಿಯಿಂದ ಮಾತನಾಡುತ್ತೇನೆ. ಹಾಗೆಂದ ಮಾತ್ರಕ್ಕೆ ಅದನ್ನು ದುರುಪಯೋಗಪಡಿಸಿಕೊಂಡರೆ ಏನು ಮಾಡಬೇಕೆಂಬುದು ನನಗೆ ಗೊತ್ತಿದೆ. ಈ ಅಧಿಕಾರಿ ಇಲ್ಲದಿದ್ದರೆ ಮತ್ತೊಬ್ಬ ಅಧಿಕಾರಿಯನ್ನು ನಿಯೋಜಿಸಲಾಗುವುದು ಎಂದು ಶಾಸಕ ಕೊತ್ತೂರು ಮಂಜುನಾಥ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ತಾಲೂಕಿನ ನರಸಾಪುರದಲ್ಲಿ ಬುಧವಾರ ೧೨.೪೦ ಕೋಟಿ ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿ, ಅಧಿಕಾರಿಗಳ ಜೊತೆ ಪರ್ಸೆಂಟೇಜ್ ವ್ಯವಹಾರ ಮಾಡುವವರು ನಾವಲ್ಲ, ತಾಳ್ಮೆಯಿಂದ ಇರುತ್ತೇನೆ, ತಾಳ್ಮೆ ಕಳೆದುಕೊಂಡರೆ ಪರಿಣಾಮ ಎದುರಿಸಲು ಸಿದ್ಧರಾಗಿ ಎಂದರು.

ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಗಡುವು

ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ೧೧ ತಿಂಗಳು ಗಡುವು ನೀಡಲಾಗಿದೆ, ಒಂದು ತಿಂಗಳು ವ್ಯತ್ಯಾಸವಾಗಬಹುದು. ಅಷ್ಟರಲ್ಲಿ ಮುಗಿಸಬೇಕು. ಮುಂದಿನ ಜನವರಿಗೆ ಉದ್ಘಾಟನೆ ಮಾಡಬೇಕು. ತುರ್ತು ಕೇರ್ ಸೆಂಟರ್ ನಿರ್ಮಿಸುವಂತೆ ಜನರು ಕೋರಿದ್ದಾರೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಜೊತೆ ಮಾತನಾಡಿ ಆ ಸೌಲಭ್ಯ ಕಲ್ಪಿಸಲಾಗುವುದು. ಕಟ್ಟಡದ ಸುತ್ತ ಕಾಂಪೌಂಡ್ ನಿರ್ಮಿಸಲು ಎಂಜಿನಿಯರ್‌ಗಳು ಕ್ರಮ ವಹಿಸಬೇಕು ಎಂದು ಹೇಳಿದರು.

ನರಸಾಪುರವು ಬೆಳೆಯುತ್ತಿದ್ದು, ಬೆಂಗಳೂರಿಗೆ ಸನಿಹದಲ್ಲಿದೆ. ಕೈಗಾರಿಕೆಗಳು ಹೆಚ್ಚುತ್ತಿವೆ. ಮುಂದಿನ ದಿನಗಳಲ್ಲಿ ದೊಡ್ಡ ಆಸ್ಪತ್ರೆಯನ್ನೇ ನಿರ್ಮಿಸಬೇಕಿದೆ. ಇಎಸ್‌ಐ ಆಸ್ಪತ್ರೆ ನಿರ್ಮಿಸಲು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾಪ ಹೋಗಿದೆ. ಈ ಬಗ್ಗೆ ಮಾತುಕತೆ ನಡೆಯುತ್ತಿದ್ದು, ಸದ್ಯದಲ್ಲೇ ನಿರ್ಮಾಣವಾಗಲಿದೆ. ಎಂದು ತಿಳಿಸಿದರು.

ಆರೋಗ್ಯ, ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ

ಎಂಎಲ್‌ಸಿ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ತಕ್ಷಣವೇ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ, ನರಸಾಪುರ ಹೋಬಳಿ ಕೇಂದ್ರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಜಿಲ್ಲೆಗೆ ಮಾದರಿಯಾಗುವಂತೆ ಅಭಿವೃದ್ಧಿಪಡಿಸಲಾಗುತ್ತದೆ. ನರೇಗಾ ಯೋಜನೆಯಡಿ ಆಸ್ಪತ್ರೆಯ ಕಾಂಪೌಂಡ್ ನಿರ್ಮಿಸಲು ಕ್ರಮವಹಿಸಲಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಗದೀಶ್ ಮಾತನಾಡಿ, ನರಸಾಪುರ ಹೋಬಳಿಯಲ್ಲಿ ಸುಮಾರು ೪೫ ಸಾವಿರದ ಜನಸಂಖ್ಯೆಯಿದ್ದು, ಇಲ್ಲಿ ನಿರ್ಮಾಣವಾಗುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ೫ ವೈದ್ಯರು, ೩೦ ಹಾಸಿಗೆಗಳನ್ನು ಒಳಗೊಂಡಿದೆ ಎಂದರು.

ತಾಲೂಕು ಆರೋಗ್ಯ ಅಧಿಕಾರಿ ನಾರಾಯಣಸ್ವಾಮಿ, ಇಂಜಿನಿಯರ್ ವಿಶ್ವನಾಥ್, ಮುಖಂಡರಾದ ನಾಗನಾಳ ಸೋಮಣ್ಣ, ಖಾಜಿಕಲ್ಲಹಳ್ಳಿ ಮುನಿರಾಜು, ಸೀಸಂದ್ರ ಗೋಪಾಲಗೌಡ, ಮೈಲಾಂಡಹಳ್ಳಿ ಮುರಳಿ, ಸಿಎಂಎಂ ಮಂಜುನಾಥ್, ಬೆಳ್ಳೂರು ವೆಂಕಟಸ್ವಾಮಿ, ಕೃಷ್ಣಪ್ಪ, ಜನಪನಹಳ್ಳಿ ನವೀನ್, ಶಿವಕುಮಾರ್, ನಾರಾಯಣಪ್ಪ, ಕುಮಾರ್ ಎಂಟಿಬಿ ಶ್ರೀನಿವಾಸ್, ಪರ್ಜೇನಹಳ್ಳಿ ನಾಗೇಶ್ ಇದ್ದರು.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ