ಕೆಯುಡಿಎ ಬಡಾವಣೆಗೆ ಸೌಲಭ್ಯ ಕಲ್ಪಿಸಲು ಗಡುವು

KannadaprabhaNewsNetwork |  
Published : Jun 15, 2024, 01:10 AM IST
೧೪ಕೆಎಲ್‌ಆರ್-೪ಕೋಲಾರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶ್ರೀ ದೇವರಾಜ ಅರಸು ಬಡಾವಣೆಯ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ವೆಂಕಟೇಶ್ ಮಾತನಾಡಿದರು. | Kannada Prabha

ಸಾರಾಂಶ

ಸುಮಾರು ೧೨೦ ಎಕರೆ ವಿಸ್ತೀರ್ಣತೆ ಹೊಂದಿರುವ ಈ ಬಡಾವಣೆಯಲ್ಲಿ ಕನಿಷ್ಟ ನೀರು, ಬೀದಿ ದೀಪ, ರಸ್ತೆ, ಯು.ಜಿ.ಡಿ. ಚರಂಡಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಕೆ.ಯು.ಡಿ.ಎ ವಿಫಲವಾಗಿದೆ. ಕಳೆದ ೩೦ ವರ್ಷಗಳಲ್ಲಿ ಅನೇಕ ಸರ್ಕಾರಗಳು ಬಂದುಹೋದರೂ ಪರಿಸ್ಥಿತಿ ಸುಧಾರಿಸಿಲ

ಕನ್ನಡಪ್ರಭ ವಾರ್ತೆ ಕೋಲಾರ ಟಮಕಾದ ಶ್ರೀ ದೇವರಾಜ ಅರಸ್ ಬಡಾವಣೆ ನಿರ್ಮಿಸಿ ಸುಮಾರು ೩೦ ವರ್ಷವಾದ್ದರೂ ಸಹ ಕನಿಷ್ಠ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ಕೋಲಾರ ನಗರಾಭಿವೃದ್ದಿ ಪ್ರಾಧಿಕಾರ ವಿಫಲವಾಗಿದೆ. ಜೂ.೨೧ರೊಳಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸದ್ದಲ್ಲಿ ಕೆ.ಯು.ಡಿ.ಎ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಶ್ರೀ ದೇವರಾಜ ಅರಸು ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ವೆಂಕಟೇಶ್ ತಿಳಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ೧೯೯೦ ರಲ್ಲಿ ನಾವುಗಳು ಕೋಲಾರ ಉಪನಗರವನ್ನಾಗಿ ಅಭಿವೃದ್ದಿಪಡಿಸುವ ಹಿತದೃಷ್ಠಿಯಿಂದ ನಮ್ಮ ಜಮೀನುಗಳನ್ನು ನೀಡಿದ್ದೇವು. ಆದರೆ ನಾವು ನೀಡಿದ್ದ ಉದ್ದೇಶವು ಈವರೆಗೆ ಈಡೇರಿಲ್ಲ ಎಂದರು.

30 ವರ್ಷ ಕಳೆದರೂ ಸೌಲಭ್ಯ ಇಲ್ಲ

ಸುಮಾರು ೧೨೦ ಎಕರೆ ವಿಸ್ತೀರ್ಣತೆ ಹೊಂದಿರುವ ಈ ಬಡಾವಣೆಯಲ್ಲಿ ಕನಿಷ್ಟ ನೀರು, ಬೀದಿ ದೀಪ, ರಸ್ತೆ, ಯು.ಜಿ.ಡಿ. ಚರಂಡಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಕೆ.ಯು.ಡಿ.ಎ ವಿಫಲವಾಗಿದೆ. ಕಳೆದ ೩೦ ವರ್ಷಗಳಲ್ಲಿ ಅನೇಕ ಸರ್ಕಾರಗಳು ಆಡಳಿತಗಳು ನಡೆಸಿತು, ಅನೇಕರು ಕೆ.ಯು.ಡಿ.ಎ. ಆಡಳಿತ ಮಂಡಳಿಗೆ ನೇಮಕವಾದರೂ ಯಾವುದೇ ರೀತಿ ಪ್ರಗತಿ ಕಾಣದೆ ಪ್ರಯೋಜನ ಇಲ್ಲದಂತಾಗಿದೆ ಎಂದು ವಿಷಾದಿಸಿದರು,

ಈ ಸಂಬಂಧವಾಗಿ ಶಾಸಕರಿಗೆ, ಸಚಿವರಿಗೆ, ಜಿಲ್ಲಾಧಿಕಾರಿಗಳಿಗೆ ಸೇರಿದಂತೆ ಸಂಬಂಧಪಟ್ಟ ಎಲ್ಲ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಅನೇಕ ಮನವಿ ಪತ್ರಗಳನ್ನು ಸಲ್ಲಿಸಿದರೂ ಯಾವುದೇ ರೀತಿ ಸ್ಪಂದಿಸುತ್ತಿಲ್ಲ. ಸುಮಾರು ೧೫೦೦ ಮನೆಗಳು, ನಿವೇಶಗಳು ನಮ್ಮ ಬಡಾವಣೆಯಲ್ಲಿದ್ದು ಏನೊಂದು ಸೌಲಭ್ಯಗಳಿಲ್ಲದೆ ವಂಚಿತರಾಗಿ ಅನಾಥ ಸ್ಥಿತಿಯನ್ನು ಅನುಭವಿಸುವಂತಾಗಿದೆ ಎಂದರು.ಮಳೆ ಬಂದಾಗ ಎಲ್ಲ ಅವ್ಯವಸ್ಥೆ

ಮಳೆ ಬಂದರೆ ಆಚೆ ಬರಲು ಸಾಧ್ಯವಾಗದಂತೆ ಮಣ್ಣಿನ ಹಳ್ಳ, ಕೊಳ್ಳಗಳಿಂದ ಕೂಡಿದೆ. ರಸ್ತೆಗಳಿಗೆ ಡಾಂಬರು ಇಲ್ಲ, ಸಿಮೆಂಟ್ ಇಲ್ಲದೆ ಬುರದೆ ಮಣ್ಣಿನಿಂದ ಹೊರಗೆ ಕಾಲಿಟ್ಟರೆ ಅರ್ಧ ಅಡಿ ಮಣ್ಣಿನಲ್ಲಿ ಹೊತು ಹೋಗುವ ಪರಿಸ್ಥಿತಿ ಇರುತ್ತದೆ, ಸಮರ್ಪಕವಾದ ಬೀದಿ ದೀಪಗಳಿಲ್ಲದೆ ರಾತ್ರಿ ವೇಳೆ ಮಹಿಳೆಯರು, ಮಕ್ಕಳು ಹೊರಗೆ ಬಾರದಂತ ಪರಿಸ್ಥಿತಿ ಇದೆ. ಸಮರ್ಪಕವಾದ ಸ್ವಚ್ಚತೆ ಇಲ್ಲದೆ ರಸ್ತೆಬದಿಯ ಚರಂಡಿಗಳ ನಿರ್ವಾಹಣೆ ಇಲ್ಲದಂತಾಗಿದೆ ಎಂದರು. ಕೆ.ಯು.ಡಿ.ಎಯಲ್ಲಿ ೨ ಬಾರಿ ಬೋರ್‌ವೆಲ್‌ಗಳನ್ನು ಕೊರೆದಿದ್ದಾರೆ. ನೀರು ಸಿಕ್ಕಿದೆ. ಟ್ಯಾಂಕ್ ನಿರ್ಮಿಸಿದ್ದಾರೆ. ಪೈಪುಗಳ ಕಾಮಗಾರಿಯೂ ಅಲ್ಪಸ್ವಲ್ಪ ಮಾಡಿ ಪೂರ್ಣಗೊಳಿಸದೆ ಅರ್ಧಕ್ಕೆ ಕಾಮಗಾರಿಗಳನ್ನು ನಿಲ್ಲಿಸಿದ್ದಾರೆ. ನೀರು ಪೂರೈಸಲು ಟ್ಯಾಂಕರ್ ಮಾಫೀಯಾಗೆ ಅನುವು ಮಾಡಿ ಕೊಟ್ಟಿದ್ದಾರೆ. ರಸ್ತೆಗಳು ಸಹ ಅಪೂರ್ಣವಾಗಿದೆ. ವಿಶ್ವವಿದ್ಯಾಲಯಕ್ಕೆ ಹೋಗುವ ರಸ್ತೆಯೊಂದನ್ನು ಹೊರತುಪಡಿಸಿ ಬಡಾವಣೆಯಲ್ಲಿ ಯಾವುದೇ ಸಿಮೆಂಟ್, ಡಾಂಬರ್ ರಸ್ತೆಗಳು ಇಲ್ಲ. ಬೀದಿ ದೀಪಗಳು ಸಮರ್ಪಕವಾಗಿಲ್ಲ. ಯು.ಜಿ.ಡಿಯನ್ನು ಕೇಳಲೇ ಬೇಡಿ ಎಂದು ಅಸಮಾಧನ ವ್ಯಕ್ತಪಡಿಸಿದರು.

ಕಾಮಗಾರಿಗಳು ಅಪೂರ್ಣ

ಉಪಾಧ್ಯಕ್ಷೆ ವಿ.ಗೀತಾ ಮಾತನಾಡಿ, ಈ ಹಿಂದೆ ಜಿಲ್ಲಾಧಿಕಾರಿ ಬಡಾವಣೆಗೆ ಭೇಟಿ ನೀಡಿ ಬಡಾವಣೆಯ ಸಮಸ್ಯೆ ವೀಕ್ಷಿಸಿ ೨ ಬೋರ್‌ವೇಲ್ ಮಂಜೂರು ಮಾಡಿದವರು ಮತ್ತೆ ಇತ್ತ ತಲೆ ಹಾಕಲಿಲ್ಲ. ಬಡಾವಣೆಯ ಕಾಮಗಾರಿಗಳನ್ನು ಟೆಂಡರ್ ಪಡೆದವರು ಕಾಮಗಾರಿಗಳು ಪೂರ್ಣಗೊಳಿಸದೆ ನಾಪತ್ತೆಯಾಗಿದ್ದರೂ ಕೇಳುವವರೇ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವರೇ ನಗರಾಭಿವೃದ್ದಿ ಸಚಿವರಾಗಿದ್ದರೂ ನಮ್ಮ ಜಿಲ್ಲೆಯಲ್ಲಿ ಏನೂ ಉದ್ದಾರ ಆಗಿಲ್ಲ ಎಂದು ಟೀಕಿಸಿದರು.

21ರಂದು ಪ್ರತಿಭಟನೆ

ಇಲ್ಲಿಯ ಸಮಸ್ಯೆಗಳನ್ನು ಜಿಲ್ಲಾಮಟ್ಟದ ಅಧಿಕಾರಿಗಳ ಗಮನಕ್ಕೂ ತಂದಿದ್ದರೂ ಪ್ರಯೋಜನವಾಗಿಲ್ಲ, ಜನಪ್ರತಿನಿಧಿಗಳ ಮಾತಿಗೆ ಅಧಿಕಾರಿಗಳ ಕಿಮ್ಮತ್ತಿನ ಬೆಲೆಯೂ ನೀಡುತ್ತಿಲ್ಲ. ಹೀಗಾಗಿ ಪ್ರತಿಭಟನೆಯೇ ಅನಿರ್ವಾಯವಾಗಿದೆ. ಅದಕ್ಕೂ ಸ್ಪಂದಿಸದಿದ್ದಲ್ಲಿ ಜೂ.೨೧ರಂದು ಉಗ್ರ ಹೋರಾಟ ಹಮ್ಮಿ ಕೊಳ್ಳಲಾಗುವುದು ಎಂದು ತಿಳಿಸಿದರು.ಸಂಘದ ಪದಾಧಿಕಾರಿಗಳಾದ ಶ್ರೀನಿವಾಸ್, ತಿಮ್ಮರಾಜ್, ಗಣೇಶ್ ಭಟ್, ಹರೀಶ್, ಶಂಕರ್ ಸಂಪತ್, ಮುರಳೀಧರ್ ಇದ್ದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ