ಕನ್ನಡಪ್ರಭ ವಾರ್ತೆ ಹೊನ್ನಾಳಿ
ಕರ್ನಾಟಕ ರಾಜ್ಯ ರೈತ ಸಂಘ, ಮತ್ತು ಹಸಿರು ಸೇನೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟಗಳ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕು ಘಟಕಗಳ ವತಿಯಿಂದ ರೈತರು ಬೆಳೆದ ಮೆಕ್ಕೆಜೋಳ, ರಾಗಿ ಹಾಗೂ ಭತ್ತದ ಖರೀದಿ ಕೇಂದ್ರ ತೆರೆದು ಬೆಳೆ ಗಳಿಗೆ ಬೆಂಬಲ ಬೆಲೆ ನೀಡಿ ಖರೀದಿಗೆ ಚಾಲನೆ ನೀಡಬೇಕು ಎಂದು ಒತ್ತಾಯಿಸಿ ಶುಕ್ರವಾರ ಪ್ರತಿಭಟನೆ ನಡೆಸಿ ನಂತರ ಸರ್ಕಾರಕ್ಕೆ ಉಪ ವಿಭಾಗಾಧಿಕಾರಿ ಎಚ್.ಬಿ.ಚನ್ನಪ್ಪಮತ್ತು ತಹಸೀಲ್ದಾರ್ ರಾಜೇಶ್ ಕುಮಾರ್ ಮೂಲಕ ಮನವಿ ಪತ್ರ ಸಲ್ಲಿಸಿದರು.
ಶುಕ್ರವಾರ ಬೆಳಗ್ಗೆ ರೈತ ಸಂಘ ಮತ್ತು ಹಸಿರು ಸೇನೆ ಮುಖಂಡರು, ಪದಾಧಿಕಾರಿಗಳು, ರೈತರು ಪಟ್ಟಣದ ಟಿ.ಬಿ.ಸರ್ಕಲ್ ನ ಕನಕದಾಸವೃತ್ತದಿಂದ ಸರ್ಕಾರಗಳ ವಿರುದ್ಧ ಘೋಷಣೆ ಕೂಗುತ್ತ ತಾಲೂಕು ಕಚೇರಿಗೆ ಮೆರವಣಿಗೆ ಮೂಲಕ ಆಗಮಿಸಿ ನಂತರ ಮಾತನಾಡಿದರು.ರೈತರು ಬೆಳೆದ ಮೆಕ್ಕೆಜೋಳ, ರಾಗಿ ಹಾಗೂ ಭತ್ತದ ಬೆಳೆಗಳು ಕಟಾವು ನಡೆಯುತ್ತಿದ್ದು, ಬೆಂಬಲ ಬೆಲೆಗೆ ಖರೀದಿ ಕೇಂದ್ರ ಆರಂಭಿಸುವಂತೆ ಅನೇಕ ಬಾರಿ ರೈತ ಸಂಘಟನೆಗಳು ಮನವಿ ಮಾಡಿದ್ದರೂ ಕೂಡ ಸರ್ಕಾರ ಈ ಬಗ್ಗೆ ಜಾಣ ಕಿವುಡಾಗಿದ್ದು, ಕೂಡಲೇ ರೈತರ ಅನೇಕ ಬೇಡಿಕೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಡೇರಿಸಲು ಮುಂದಾಗಬೇಕೆಂದು ಒತ್ತಾಯಪಡಿಸಿದರು.
ನೂರಾರು ರೈತರು ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ತಮ್ಮ ಬೇಡಿಕೆಗಳನ್ನು ಆಲಿಸಲು ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸಬೇಕು ಎಂದು ಪಟ್ಟು ಹಿಡಿದು ನಂತರ ಸ್ಥಳಕ್ಕೆ ಉಪವಿಭಾಗಾಧಿಕಾರಿ ಎಚ್.ಬಿ. ಚನ್ನಪ್ಪ ಹಾಗೂ ತಹಸೀಲ್ದಾರ್ ರಾಜೇಶ್ ಕುಮಾರು ಅಗಮಿಸಿ ರೈತರ ಬೇಡಿಕೆಗಳನ್ನು ಆಲಿಸಿ ಅವರ ಮನವಿ ಪತ್ರ ಸ್ವೀಕರಿಸಿದರು.ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಸಿ.,ಬಸಪ್ಪ,ನ್ಯಾಮತಿ ಘಟಕದ ಅಧ್ಯಕ್ಷ ಉಮೇಶ್ ಬೆಳಗುತ್ತಿ, ಶಿವಮೊಗ್ಗದ ರೈತ ಸಂಘದ ಅಧ್ಯಕ್ಷ ಬಸವರಾಜ್ ಸಂಭೋಳ್, ಸುಂಕದಕಟ್ಟೆ ಕರಿಬಸಪ್ಪ, ನ್ಯಾಮತಿ ಮಲ್ಲಿಕಾರ್ಜುನ್ ಇತರರು ಮಾತನಾಡಿದರು.