ಬಂಟ್ವಾಳ ನೀರು ಶುದ್ಧೀಕರಣ ಘಟಕ ಸ್ವಚ್ಛತೆಗೆ ಗಡುವು

KannadaprabhaNewsNetwork |  
Published : Nov 03, 2026, 02:45 AM IST
ಎರಡು ದಿನಗಳಲ್ಲಿ ಕುಡಿಯುವ ನೀರಿನ ಶುದ್ಧೀಕರಣ ಘಟಕ ಸ್ವಚ್ಛಗೊಳಿಸಿ: ಶಾಸಕ ರಾಜೇಶ್ ನಾಯ್ಕ್ ತಾಕೀತು*  *ಅಧಿಕಾರಿಗಳು ಸ್ಪಂದಿಸದಿದ್ದರೆ ಸಾರ್ವಜನಿಕರೊಂದಿಗೆ ನಾನೇ ಸ್ವಚ್ಛತಾ ಕಾರ್ಯಕ್ಕೆ ಇಳಿಯುತ್ತೇನೆ: ಎಚ್ಚರಿಕೆ* | Kannada Prabha

ಸಾರಾಂಶ

ಪುರಸಭಾ ವ್ಯಾಪ್ತಿಯ ಜನರಿಗೆ ಕುಡಿಯುವ ನೀರು ಪೂರೈಸುವ ಶುದ್ಧೀಕರಣ ಘಟಕದಲ್ಲಿ ಕಸ, ಕೆಸರು ಹಾಗೂ ಪಾಚಿ ತುಂಬಿಕೊಂಡು, ಅಶುದ್ಧ ನೀರು ಸರಬರಾಜಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಪುರಸಭಾ ವ್ಯಾಪ್ತಿಯ ಜನರಿಗೆ ಕುಡಿಯುವ ನೀರು ಪೂರೈಸುವ ಶುದ್ಧೀಕರಣ ಘಟಕದಲ್ಲಿ ಕಸ, ಕೆಸರು ಹಾಗೂ ಪಾಚಿ ತುಂಬಿಕೊಂಡು, ಅಶುದ್ಧ ನೀರು ಸರಬರಾಜಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಶುದ್ಧೀಕರಣ ಘಟಕದ ದುಃಸ್ಥಿತಿ ಕಂಡು ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಜನರ ಆರೋಗ್ಯದ ವಿಚಾರದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುವುದನ್ನು ಸಹಿಸಲು ಸಾಧ್ಯವಿಲ್ಲ. ಕುಡಿಯುವ ನೀರು ಪ್ರತಿಯೊಬ್ಬರ ಮೂಲಭೂತ ಅಗತ್ಯವಾಗಿದ್ದು, ಜನರಿಗೆ ಶುದ್ಧ ಹಾಗೂ ಸುರಕ್ಷಿತ ನೀರು ಒದಗಿಸುವುದು ಸಂಬಂಧಪಟ್ಟ ಇಲಾಖೆಯ ಮೊದಲ ಆದ್ಯತೆಯಾಗಬೇಕು ಎಂದು ಹೇಳಿದರು.

ಘಟಕದ ಒಳಭಾಗದಲ್ಲಿ ಕಸ, ಕೆಸರು ಹಾಗೂ ಪಾಚಿ ಸಂಗ್ರಹವಾಗಿರುವುದರಿಂದ ನೀರಿನ ಗುಣಮಟ್ಟದ ಬಗ್ಗೆ ಗಂಭೀರ ಆತಂಕ ಉಂಟಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನೀರನ್ನು ಶುದ್ಧೀಕರಿಸಿ ಜನರಿಗೆ ಪೂರೈಸಲಾಗುತ್ತಿದೆಯೇ ಎಂಬ ಪ್ರಶ್ನೆ ಎದುರಾಗಿದೆ. ಈ ನೀರನ್ನು ಕುಡಿಯುವ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾದರೆ ಅದಕ್ಕೆ ಯಾರು ಹೊಣೆ? ಜನರಿಗೆ ರೋಗ ಹರಡುವ ಪರಿಸ್ಥಿತಿ ನಿರ್ಮಾಣವಾಗುವ ಮೊದಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ತಾಕೀತು ಮಾಡಿದರು.ಈ ಕುರಿತು ಜಿಲ್ಲಾಧಿಕಾರಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅವರು, ಪುರಸಭಾ ವ್ಯಾಪ್ತಿಯಲ್ಲಿ ಅಶುದ್ಧ ನೀರು ಪೂರೈಕೆಯಾಗುತ್ತಿರುವ ಬಗ್ಗೆ ಗಮನಕ್ಕೆ ತಂದರು. ಶುದ್ಧೀಕರಣ ಘಟಕದ ಸಂಪೂರ್ಣ ಸ್ವಚ್ಛತೆ ಹಾಗೂ ಅಗತ್ಯ ನಿರ್ವಹಣಾ ಕಾರ್ಯವನ್ನು ತಕ್ಷಣ ಕೈಗೊಳ್ಳುವಂತೆ ತಿಳಿಸಿ, ಎರಡು ದಿನಗಳ ಗಡುವು ನೀಡುವಂತೆ ಸೂಚಿಸಿದರು.ಪುರಸಭಾ ಮುಖ್ಯಾಧಿಕಾರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ ಶಾಸಕರು, ಎರಡು ದಿನಗಳೊಳಗೆ ಘಟಕವನ್ನು ಸಮರ್ಪಕವಾಗಿ ಸ್ವಚ್ಛಗೊಳಿಸಿ, ಕುಡಿಯುವ ನೀರಿನ ಶುದ್ಧೀಕರಣ ವ್ಯವಸ್ಥೆಯನ್ನು ಸುಸ್ಥಿತಿಗೆ ತರಬೇಕು. ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡಲು ಅವಕಾಶ ನೀಡುವುದಿಲ್ಲ. ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು ಎಂದು ಎಚ್ಚರಿಸಿದರು.

ಪುರಸಭೆಯಲ್ಲಿ ಶುದ್ದೀಕರಣ ಘಟಕ ಶುಚಿಗೊಳಿಸಲು ಹಣದ ಕೊರತೆ ಇದ್ದರೆ ಹೇಳಲಿ, ನಾನೇ ಸಾರ್ವಜನಿಕರೊಂದಿಗೆ ಶುಚಿಗೊಳಿಸುವ ಕಾರ್ಯ ಮಾಡುತ್ತೇನೆ. ಅಧಿಕಾರಿಗಳು ನಿಗದಿತ ಅವಧಿಯೊಳಗೆ ಸ್ವಚ್ಛತಾ ಕಾರ್ಯ ಕೈಗೊಳ್ಳದಿದ್ದಲ್ಲಿ, ಅಧಿಕಾರಿಗಳ ಸಮ್ಮುಖದಲ್ಲೇ ಪುರಸಭಾ ವ್ಯಾಪ್ತಿಯ ಸಾರ್ವಜನಿಕರನ್ನು ಒಗ್ಗೂಡಿಸಿ ನಾನೇ ಖುದ್ದಾಗಿ ಶುದ್ಧೀಕರಣ ಘಟಕದ ಸ್ವಚ್ಛತಾ ಕಾರ್ಯಕ್ಕೆ ಮುಂದಾಗುತ್ತೇನೆ ಎಂದು ಎಚ್ಚರಿಸಿದರು.ಜನರ ತೆರಿಗೆ ಹಣದಿಂದ ನಡೆಯುವ ವ್ಯವಸ್ಥೆಯಲ್ಲಿ ಜನರಿಗೆ ಕನಿಷ್ಠ ಶುದ್ಧ ಕುಡಿಯುವ ನೀರನ್ನಾದರೂ ಒದಗಿಸಲು ಸಾಧ್ಯವಾಗದಿದ್ದರೆ ಅಂತಹ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಶಾಸಕರು ಖಡಕ್ ಎಚ್ಚರಿಕೆ ನೀಡಿದರು.

ಪುರಸಭಾ ಮಾಜಿ ಸದಸ್ಯರಾದ ಎ. ಗೋವಿಂದ ಪ್ರಭು, ಗಂಗಾಧರ ಪೂಜಾರಿ, ವಿದ್ಯಾವತಿ ಪ್ರಮೋದ್, ರೇಖಾ ಪೈ, ಹರಿಪ್ರಸಾದ್, ಪ್ರಮುಖರಾದ ವಿಕಾಸ್ ಪುತ್ತೂರು, ಶಿವಪ್ರಸಾದ್ ಶೆಟ್ಟಿ, ರಾಮ್‌ದಾಸ್ ಬಂಟ್ವಾಳ, ಸುರೇಶ್ ಕುಲಾಲ್, ಜನಾರ್ದನ ಬೊಂಡಾಲ, ಪುರುಷೋತ್ತಮ ಶೆಟ್ಟಿ ವಾಮದಪದವು, ಗಣೇಶ್ ದಾಸ್, ಪ್ರಣಾಮ್ ಅಜ್ಜಿಬೆಟ್ಟು, ವಸಂತ ಭಂಡಾರಿ ಹಾಗೂ ನಗರ ಮಹಾಶಕ್ತಿ ಕೇಂದ್ರದ ಸದಸ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

8 ರು. ಹಾಲಿನ ದರ ಏರಿಕೆಯ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ
ಅಡ್ಡಂಡ ಕಾರ್ಯಪ್ಪಗೆ ಮಸಿ: 2 ಕೇಸ್‌ ದಾಖಲು