ಇಂದು ನಡೆಯಲಿರುವ ಬಿಜೆಪಿ ಪ್ರತಿಭಟನೆ ವಿರುದ್ಧ ಶಾಸಕ ನಾರಾಯಣಸ್ವಾಮಿ ಟೀಕೆ ಕನ್ನಡಪ್ರಭ ವಾರ್ತೆ ಬಂಗಾರಪೇಟೆ ಸಂಸದ ಎಸ್.ಮುನಿಸ್ವಾಮಿ ಮಾಡಿರುವ ತಪ್ಪುಗಳನ್ನು ಮುಚ್ಚಿಡಲು ಅ.3ರಂದು ಜಿಲ್ಲಾಧಿಕಾರಿ ಹಾಗೂ ಎಸ್‌ಪಿ ವಿರುದ್ದ ಪ್ರತಿಭಟನೆ ಮಾಡುತ್ತಿರುವುದು ಹೊಸ ನಾಟವೆಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಟೀಕಿಸಿದರು. ಪಟ್ಟಣದ ಕಾಂಗ್ರೆಸ್ ಭವನದಲ್ಲಿ ನಡೆದ ಮಹಾತ್ಮ ಗಾಂಧಿ ಜಯಂತಿ ಕಾರ‍್ಯಕ್ರಮದಲ್ಲಿ ಗಾಂಧಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಸಂಸದ ಎಸ್.ಮುನಿಸ್ವಾಮಿ ಒಬ್ಬ ರೌಡಿ ಶೀಟರ್ ಆಗಿದ್ದು ಅವರು ಅನೇಕ ಕಾನೂನು ಬಾಹಿರ ತಪ್ಪುಗಳನ್ನು ಮಾಡಿದ್ದಾರೆ ಎಂದರು. ಜನರ ಅನುಕಂಪ ಗಿಟ್ಟಿಸಲು ಪ್ರತಿಭಟನೆ ಇದನ್ನೆಲ್ಲ ಜನರಿಂದ ಮರೆ ಮಾಚಿಸಿ ಜನರ ಅನುಕಂಪ ಗಿಟ್ಟಿಸಿಕೊಳ್ಳಲು ಪ್ರಾಮಾಣಿಕ ಅಧಿಕಾರಿಗಳಾದ ಜಿಲ್ಲಾಧಿಕಾರಿ,ಹಾಗೂ ಕೋಲಾರ ಎಸ್‌ಪಿ ಯಾವುದೇ ತಪ್ಪು ಹಾಗೂ ಪಕ್ಷಾತೀತವಾಗಿ ನಡೆದುಕೊಳ್ಳದಿದ್ದರೂ ಸಹ ಅವರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಅ.೩ರಂದು ಕೋಲಾರದಲ್ಲಿ ಬಿಜೆಪಿವತಿಯಿಂದ ಪ್ರತಿಭಟನೆ ಹಮ್ಮಿಕೊಂಡಿರುವುದು ಹಾಸ್ಯಸ್ಪದವಾಗಿದೆ ಎಂದರಲ್ಲದೆ ಇಬ್ಬರು ಅಧಿಕಾರಿಗಳ ಪರ ಕಾಂಗ್ರೆಸ್ ನಿಲ್ಲಲಿದೆ ಎಂದು ಎಚ್ಚರಿಕೆ ನೀಡಿದರು. ಕೋಲಾರದಲ್ಲಿ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ನಡೆದ ಜನತಾ ದರ್ಶನದಲ್ಲಿ ಸಂಸದರು ಮನವಿ ನೀಡಿದ ನಂತರ ಭೂಗಳ್ಳರನ್ನು ಅಕ್ಕಪಕ್ಕ ಕೂರಿಸಿಕೊಂಡು ನೀವು ಏನು ನ್ಯಾಯಕೊಡುವಿರಿ ಎಂದು ಪ್ರಶ್ನಿಸಿ ರೌಡಿಯಂತೆ ವರ್ತಿಸಿದರು. ಅಂದು ಎಸ್‌ಪಿ ನಾರಾಯಣ್ ಸಮಯ ಪ್ರಜ್ಙೆಯಿಂದ ಸಂಸದರು ರೌಡಿಯಂದು ತಿಳಿದು ಅವರನ್ನು ಸಭೆಯಿಂದ ಹೊರ ಹಾಕದೇ ಇದ್ದಿದ್ದರೆ ದೊಡ್ಡ ಅನಾಹುತ ನಡೆಯುತ್ತಿತ್ತು. ಅದನ್ನು ಅವರು ತಪ್ಪಿಸಿದ್ದಾರೆಂದು ಎಸ್‌ಪಿರನ್ನು ಅಭಿನಂಧಿಸಿದರು. ಭೂ ಹಗರಣ ಸಾಬೀತು ಮಾಡಲಿ ಪದೇ ಪದೇ ಸಂಸದ ಎಸ್.ಮುನಿಸ್ವಾಮಿ ನನ್ನನ್ನು ಭೂಗಳ್ಳ ಎಂದು ಆರೋಪಿಸುವ ಬದಲು ತಾಕತ್ತಿದ್ದರೆ ಸಾಬೀತು ಮಾಡಲಿ. ಆಗ ತಲೆ ಬಾಗುವೆ ಎಂದು ಪಂಥಾಹ್ವಾನ ನೀಡಿದರು. ನಾನು ಎಲ್ಲಾ ವ್ಯವಹಾರಗಳನ್ನು ಪಾರದರ್ಶಕವಾಗಿ ಮಾಡುತ್ತಿರುವೆ. ಸಂಸದರೇ ರೌಡಿಸಂ ದಬ್ಬಾಳಿಕೆ ಮಾಡಲು ಇದು ವೈಟ್ ಪೀಲ್ಡ್‌ಲ್ಲ, ಲೋಕಸಭೆ ಚುನಾವಣೆಯಲ್ಲಿ ಜನರೇ ನಿಮಗೆ ಉತ್ತರ ನೀಡುತ್ತಾರೆ ಎಂದು ಹೇಳಿದರು. ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗೋಪಾಲಗೌಡ,ಕೆ.ವಿ.ನಾಗರಾಜ್,ಕೆಪಿಸಿಸಿ ಸದಸ್ಯ ಎಸ್.ಎ.ಪಾರ್ಥಸಾರಥಿ, ಡಿಸಿಸಿ ಬ್ಯಾಂಕಿನ ನಿದೇರ್ಶಕ ಗೋವಿಂದರಾಜು, ಭೂ ಬ್ಯಾಂಕಿನ ಅಧ್ಯಕ್ಷ ಎಚ್.ಕೆ.ನಾರಾಯಣಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷ ಶಂಷುದ್ದಿನ್ ಬಾಬು, ಫರ್ಜಾನ,ಸದಸ್ಯರಾದ ಪ್ರಭಾಕರ್, ವೆಂಕಟೇಶ್, ಪ್ರಶಾಂತ್, ಮುಖಂಡ ನಂಜಪ್ಪ, ರಂಗರಾಮಯ್ಯ ಮತ್ತಿತರರು ಇದ್ದರು.