ದಶಕದಿಂದ ನಿವೇಶನ ನೀಡುವುದು ವಿಳಂಬ, ಬ್ಯಾಡಗಿ ಪುರಸಭೆಗೆ ಮುತ್ತಿಗೆ

KannadaprabhaNewsNetwork | Published : Dec 11, 2024 12:48 AM

ಸಾರಾಂಶ

ದಶಕವಾದರೂ ನಿವೇಶನ ನೀಡದೇ ಬಡವರಿಗೆ ಅನ್ಯಾಯ ಮಾಡುತ್ತಿರುವ ಪುರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರಹಾಕಿದ ಆಶ್ರಯ ಸಮಿತಿ ಹೋರಾಟಗಾರರು ಮಂಗಳವಾರ ಪುರಸಭೆಗೆ ಮುತ್ತಿಗೆ ಹಾಕಿ ೪ ತಾಸಿಗೂ ಅಧಿಕ ಸಮಯ ಪ್ರತಿಭಟನೆ ನಡೆಸಿದರು.

ಬ್ಯಾಡಗಿ: ದಶಕವಾದರೂ ನಿವೇಶನ ನೀಡದೇ ಬಡವರಿಗೆ ಅನ್ಯಾಯ ಮಾಡುತ್ತಿರುವ ಪುರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರಹಾಕಿದ ಆಶ್ರಯ ಸಮಿತಿ ಹೋರಾಟಗಾರರು ಮಂಗಳವಾರ ಪುರಸಭೆಗೆ ಮುತ್ತಿಗೆ ಹಾಕಿ ೪ ತಾಸಿಗೂ ಅಧಿಕ ಸಮಯ ಪ್ರತಿಭಟನೆ ನಡೆಸಿದರು.ಪಟ್ಟಣದ ಹಳೆ ಪುರಸಭೆಯಿಂದ ಆರಂಭವಾದ ಪ್ರತಿಭಟನೆ ಮೆರವಣಿಗೆ ಬೀರೇಶ್ವರ ದೇವಸ್ಥಾನ ಹಂಸಬಾವಿ ರಸ್ತೆ ಮೂಲಕ ಪುರಸಭೆಯನ್ನು ತಲುಪಿತು. ನಂತರ ಪುರಸಭೆಯ ಮುಖ್ಯದ್ವಾರಕ್ಕೆ ಬೀಗ ಜಡಿದು ಪ್ರತಿಭಟನೆ ಆರಂಭಿಸಿದ ಹೋರಾಟಗಾರರು ಸರ್ಕಾರ ಹಾಗೂ ಜನಪ್ರತಿನಿಧಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.ಅನ್ಯಾಯಕ್ಕೆ ಮಿತಿ ಇಲ್ಲವೇ: ಈ ಸಂದರ್ಭದಲ್ಲಿ ಮಾತನಾಡಿದ, ಆಶ್ರಯ ಹೋರಾಟ ಸಮಿತಿಯ ಅಧ್ಯಕ್ಷ ಸುರೇಶ ಚಲವಾದಿ ೧೨ ವರ್ಷಗಳಿಂದ ನಿವೇಶನಕ್ಕಾಗಿ ಹೋರಾಟ ಮಾಡುತ್ತ ಬಂದಿದ್ದೇವೆ. ಮೂರು ಸರಕಾರ, ಮೂವರು ಶಾಸಕರು ಬಂದು ಹೋದರು ಸಹ ಬಡವರಿಗೆ ನಿವೇಶನ ಹಂಚಿಕೆ ಮಾಡಲು ಸಾಧ್ಯವಾಗಿಲ್ಲ. ಇದು ನಾಚಿಕೆಯ ಸಂಗತಿ, ಭೂಮಿ ಖರೀದಿ ಮಾಡಿ ೯ ವರ್ಷ ಕಳೆದರೂ ಸಹ ಇಲ್ಲಿಯವರೆಗೂ ನಿವೇಶನ ನೀಡಲು ಮುಂದಾಗದಿರುವ ಆಶ್ರಯ ಸಮಿತಿ ಸದಸ್ಯರು ಹಾಗೂ ಪುರಸಭೆ ಅಧಿಕಾರಿಗಳು ಬಡವರಿಗೆ ನಿರಂತರವಾಗಿ ಅನ್ಯಾಯ ಮಾಡುತ್ತಾ ಬಂದಿದ್ದಾರೆ ಎಂದು ದೂರಿದರು.ಇದೀಗ ಪಟ್ಟಣದ ಜನತೆಗೆ ಖಾಲಿ ಜಾಗದಲ್ಲಿ ನಿವೇಶನ ನೀಡಲು ಹಿಂದೆ ಮುಂದೆ ನೋಡುತ್ತಿರುವ ಅಧಿಕಾರಿಗಳು ಮಾಜಿ ಶಾಸಕರು ಹಾಗೂ ಗಣ್ಯ ವ್ಯಕ್ತಿಗಳಿಗೆ ೧೮ ಎಕರೆ ಜಾಗವನ್ನು ಬಸವೇಶ್ವರ ನಗರದಲ್ಲಿ ಉಚಿತವಾಗಿ ನೀಡಿ ಹಲವು ದಶಕಗಳು ಕಳೆದಿದೆ. ಅಲ್ಲಿ ಒಬ್ಬೊಬ್ಬ ಶ್ರೀಮಂತರು ೪ರಿಂದ ೫ ಗುಂಟೆ ಜಾಗದಲ್ಲಿ ಮನೆ ಕಟ್ಟಿಕೊಂಡು ಅರಾಮ ಆಗಿ ಇದ್ದಾರೆ. ಹಾಗಾದರೇ ಬಡವರಿಗೆ ಒಂದು ನ್ಯಾಯ ಶ್ರೀಮಂತರಿಗೆ ಒಂದು ನ್ಯಾಯವೇ? ಅಲ್ಲಿ ಖಾಲಿ ಉಳಿದಿರುವ ಜಾಗವನ್ನೂ ಸಹ ಬಡವರಿಗೆ ಹಂಚಿಕೆ ಮಾಡಿ ಎಂದು ಆಗ್ರಹಿಸಿದರು.ಬಂಗಾರ ಒತ್ತಿ ಇಟ್ಟೇವಿ: ಫರೀದಾಬಾನು ನದಿಮುಲ್ಲಾ ಮಾತನಾಡಿ, ಎಸಿ, ಡಿಸಿ, ಮುಖ್ಯಮಂತ್ರಿಗಳು ಹಾಗೂ ರಾಜ್ಯಪಾಲರಿಗೂ ಸಹ ಮನವಿ ಪತ್ರ ಬರೆದಿದ್ದೇವೆ, ಇಷ್ಟಾದರೂ ಸಹ ನಮ್ಮ ಮೇಲೆ ಯಾರಿಗೂ ಕನಿಕರ ಬಂದಿಲ್ಲ, ಹಾಗಾದರೇ ಸಾಮಾಜಿಕ ನ್ಯಾಯ ಎಲ್ಲಿದೇ.? ಬಂಗಾರ ಅಡವಿಟ್ಟು ಬಡ್ಡಿಯಂತೆ ದುಡ್ಡು ತಂದು ಪುರಸಭೆಗೆ ವಂತಿಕೆ ಹಣ ತುಂಬಿದ್ದೇವೆ. ನಮ್ಮ ಕಣ್ಣಿರ ಶಾಪ ನಿಮಗೆ ತಟ್ಟದೇ ಇರಲ್ಲ ಎಂದು ನೋವು ತೋಡಿಕೊಂಡರು.

೨೦೨೫ರ ಮಾರ್ಚ್‌ ಒಳಗೆ ನಿವೇಶನ ಹಂಚಿಕೆ:ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಆಶ್ರಯ ಸಮಿತಿ ಅಧ್ಯಕ್ಷ ಮುನಾ ಫಸಾಬ್ ಏರೆಶಿಮಿ, ಸಮಿತಿ ಸದಸ್ಯರು ಹಾಗೂ ಮುಖ್ಯಾಧಿಕಾರಿ ವಿನಯಕುಮಾರ, ಪ್ರತಿಭಟನಕಾರರಿಗೆ ನಿವೇಶನ ಹಂಚಿಕೆ ಮಾಡಲು ಎದುರಾಗಿರುವ ಸಮಸ್ಯೆಗಳನ್ನ ವಿವರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುನಾಫ್ ಸಾಬ ಏರೇಶಿಮಿ ಸ್ಥಳೀಯ ಶಾಸಕ ಬಸವರಾಜ ಶಿವಣ್ಣನವರು ಹಾಗೂ ಆಶ್ರಯ ಸಮಿತಿ ಈಗಾಗಲೇ ನಿವೇಶನ ಹಂಚಿಕೆಯಲ್ಲಿ ಆಗಿರುವ ಸಮಸ್ಯೆ ಪರಿಹರಿಸಲು ಮುಂದಾಗಿದ್ದೇವೆ, ಎಲ್ಲರಿಗೂ ಒಟ್ಟು ೨೦ ಎಕರೆ ಜಾಗ ಖರೀದಿ ಮಾಡಿ ೧೨೦೦ ನಿವೇಶನ ನೀಡಲು ಸಿದ್ಧತೆ ನಡೆದಿದೆ, ಯಾರು ಆತಂಕಪಡುವ ಅಗತ್ಯವಿಲ್ಲ, ೨೦೨೫ ಮಾರ್ಚ ಒಳಗೆ ಎಲ್ಲರಿಗೂ ನಿವೇಶನ ಹಂಚಿಕೆ ಮಾಡುವ ಭರವಸೆ ನೀಡಿದ ನಂತರ ಪ್ರತಿಭಟನೆ ವಾಪಸ್ ಪಡೆಯಲಾಯಿತು.ಈ ಸಂದರ್ಭದಲ್ಲಿ ಪಾಂಡುರಂಗ ಸುತಾರ, ಶಿವು ಕಲ್ಲಾಪುರ, ಈಶ್ವರ ಮಠದ ಸೇರಿದಂತೆ ಆಶ್ರಯ ಸಮಿತಿ ಸದಸ್ಯರಾದ ದುರ್ಗೆಶ ಗೋಣೆಮ್ಮನವರ, ಗಿರೀಶ ಇಂಡಿಮಠ, ಮಜೀದ ಮುಲ್ಲಾ ಸೇರಿದಂತೆ ನಿವೇಶನ ರಹಿತ ನೂರಾರು ಮಹಿಳೆಯರು ಉಪಸ್ಥಿತರಿದ್ದರು.

Share this article