ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ತೊರವಿಯ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ 19ನೇ ಅಂತರ್ ಮಹಿಳಾ ಮಹಾವಿದ್ಯಾಲಯಗಳ ಯುವ ಜನೋತ್ಸವ ಶಕ್ತಿ ಸಂಭ್ರಮ-2024 ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲರೂ ನನ್ನನ್ನು ಸ್ತ್ರೀವಾದಿ ಎನ್ನುತ್ತಾರೆ. ನಾನು ಅಭಿಮಾನದಿಂದ ಹೇಳುತ್ತೇನೆ ಸ್ತ್ರೀವಾದಿ ಎಂದು. ಇಂದು ಮಹಿಳೆ ಸಾಧನೆ ಮಾಡದಿರುವ ಯಾವ ಕ್ಷೇತ್ರವೂ ಉಳಿದಿಲ್ಲ. ಸ್ಪರ್ಧಾತ್ಮಕತೆ ಹೆಚ್ಚಾಗಿದೆ. ಒಂದು ಕಾಲದಲ್ಲಿ ಹೆಣ್ಣು ಹುಟ್ಟಿದರೆ ತೊಟ್ಟಿಲು ತೂಗಲು ಮಾತ್ರ ಎನ್ನುವಂತಿತ್ತು. ಆದರೆ ಇದೀಗ ಹೆಣ್ಣು ಹುಟ್ಟಿದರೆ ಇಡಿ ಮನೆಯವರೆಲ್ಲ ಸಂಭ್ರಮಿಸುವ ಕಾಲ ಬಂದಿದೆ ಎಂದು ಹೇಳಿದರು.
ನಾನು ಖಾನಾಪುರ ಕ್ಷೇತ್ರದ ಚಿಕ್ಕ ಹಳ್ಳಿಯಿಂದ ಬಂದವಳು. ವಿದ್ಯಾರ್ಥಿ ಜೀವನದಲ್ಲಿ ನಾನು ಸಹ ಕೆಂಪು ಬಸ್‌ನಲ್ಲಿ ಹೋಗಿ ಶಾಲೆ ಕಲಿತವಳು. ಏನಾದರೂ ಸಾಧಿಸಬೇಕು ಎಂದು ಆಗಲೇ ನನಗೆ ಇದ್ದ ಛಲ ಇಂದಿಗೂ ಇದೆ. ನಾನು ಕಷ್ಟ ಬಂದಾಗ ಸ್ವೀಕರಿಸಿ ಮುನ್ನಡೆದಿದ್ದು, ಯಾವತ್ತೂ ಹಿಂದೆ ಸರಿದಿಲ್ಲ. ರೈತನ ಮಗಳಾಗಿ, ತಾಯಿಯಾಗಿ ಸಾಕಷ್ಟು ಸಾಧನೆ ಮಾಡಿದ್ದೇನೆ. ನಾಡಿನ ಏಳೂವರೆ ಕೋಟಿ ಜನರಲ್ಲಿ ಒಬ್ಬಳೆ ಮಹಿಳೆ ಮಂತ್ರಿಯಾಗಿದ್ದು ಕೂಡ ಒಂದು ಸಾಧನೆ ಎಂದು ನನಗನಿಸುತ್ತಿದೆ ಎಂದರು.ಜೀವನದಲ್ಲಿ ಗುರಿ ಇರಬೇಕು, ಅದನ್ನು ಸಾಧಿಸಲು ಹೋರಾಟ ಮಾಡಬೇಕು. ಅಲ್ಲದೆ 2013ರಲ್ಲಿ ಮೌಂಟ್ ಎವರೆಸ್ಟ್ ಏರಿದ ಮೊದಲ ವಿಕಲಚೇತನ ಮಹಿಳಾ ಸಾಧಕಿ ಅರುಣಿಮಾ ಸಿನ್ಹಾ ಹಾಗೂ ಕೌಟುಂಬಿಕ ಸಂಕಷ್ಟದಲ್ಲಿಯೇ ಪಶ್ಚಿಮ ಬಂಗಾಳದಲ್ಲಿ ಕ್ವಿನ್ಸ್ ಬೇಕರಿ ನಡೆಸುವ ಮೂಲಕ ವಾರ್ಷಿಕ ₹ 80ಕೋಟಿ ಆದಾಯ ಗಳಿಸುತ್ತಿರುವ ಸುಪ್ರಿಯಾ ರಾಯ್ ಅವರ ಬಗ್ಗೆ ಉದಾಹರಿಸಿ, ಮಹಿಳೆ ಎಂದರೆ ಸಾಧನೆ, ಸಾಧನೆ ಎಂದರೆ ಮಹಿಳೆ ಎಂಬಂತಾಗಬೇಕು. ಜಾತಿ, ಕುಲ, ಧರ್ಮವನ್ನು ಬಿಟ್ಟು ಎಲ್ಲರೂ ಮಹಿಳೆಯರು ಒಂದಾಗಬೇಕಿದೆ ಎಂದು ಕಿವಿಮಾತು ಹೇಳಿದರು.
ವಿವಿಯಲ್ಲಿ ಹಾಡಿದ ಮಹಿಳಾ ಗೀತೆ, ಎಲ್ಲ ಮಹಿಳಾ ಕಾರ್ಯಕ್ರಮಗಳಲ್ಲೂ ಮೊಳಗಬೇಕು. ಮಕ್ಕಳಿಗಾಗಿ ಶಂ.ಗು.ಬಿರಾದಾರ ಬರೆದಿರುವ ನಾವು ಎಳೆಯರು, ನಾವು ಗೆಳೆಯರು ಎಂಬ ಗೀತೆಯನ್ನು ಮಕ್ಕಳ ಗೀತೆ ಘೋಷಣೆ ಮಾಡಬೇಕು ಎಂದರು. ಅಲ್ಲದೆ ಮಹಿಳಾ ವಿವಿಗೆ ₹ 100 ಕೋಟಿ ಅನುದಾನ ಕೊಡುಸುವಂತೆ ಸಚಿವೆಗೆ ಮನವಿ ಮಾಡಿದರು.
ಈ ವೇಳೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ ಸೇರಿ ಗಣ್ಯರನ್ನು ಸನ್ಮಾನಿಸಿ ಗೌರವ ಸಲ್ಲಿಸಲಾಯಿತು. ಆರಂಭದಲ್ಲಿ ನಾಡಗೀತೆ ಹಾಗೂ ಮಹಿಳಾಗೀತೆ ಮೊಳಗಿದವು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರೇ ವಿವಿಧ ಕಲಾತಂಡಗಳ ವೇಷ ಧರಿಸಿ, ವಾದ್ಯಮೇಳಗಳ ಮೂಲಕ ಗಣ್ಯರನ್ನು ಸ್ವಾಗತಿಸಿದರು.
ಎರಡೂ ಸದನದಲ್ಲಿ ಮಹಿಳಾ ಮೀಸಲು ಬಿಲ್‌ನ್ನು ಪಾಸ್ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಯಾಕೆಂದರೆ ರಾಜಕೀಯ ಕ್ಷೇತ್ರದಲ್ಲೂ ಮಹಿಳೆಯರು ಮುನ್ನುಗ್ಗುವ ಕಾಲ ಬಂದಿದೆ. ಕಾರ್ಯಕ್ರಮದಲ್ಲಿ ನೆರೆದಿರುವ ನಿಮ್ಮಲ್ಲಿ ಕಡಿಮೆ ಎಂದರು 10 ಜನರು ಲಕ್ಷ್ಮೀ ಹೆಬ್ಬಾಳ್ಕರ ಆಗಬೇಕು ಎಂಬುದು ನನ್ನ ಆಸೆ.