ಲಭ್ಯತೆ ಗಮನದಲ್ಲಿಟ್ಟು ತಮಿಳುನಾಡಿಗೆ ನೀರು ನಿರ್ಧಾರ: ಸಿಎಂ ಶಿವಕುಮಾರ್‌

KannadaprabhaNewsNetwork |  
Published : Aug 18, 2026, 03:00 AM IST
ಭಾಗಮಂಡಲದಲ್ಲಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿಶೇಷ ಪೂಜೆ ಸಲ್ಲಿಸಿದರು. | Kannada Prabha

ಸಾರಾಂಶ

ರಾಜ್ಯದ ಜಲಾಶಯಗಳು ಇನ್ನೂ ಸಂಪೂರ್ಣವಾಗಿ ತುಂಬಿಲ್ಲ. ನಮ್ಮ ರೈತರನ್ನು ಬದುಕಿಸುವ ಸವಾಲಿನ ಜೊತೆಗೆ ಕಾನೂನನ್ನೂ ಕಾಪಾಡಬೇಕು. ಎರಡೂ ಬಹಳ ಮುಖ್ಯ. ಕಾವೇರಿ ವಿಚಾರದಲ್ಲಿ ರೈತರ ಹಿತ ಕಾಯುವುದು ನನ್ನ ಕರ್ತವ್ಯ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಹೇಳಿದರು.

ಮಡಿಕೇರಿ: ರಾಜ್ಯದ ಜಲಾಶಯಗಳು ಇನ್ನೂ ಸಂಪೂರ್ಣವಾಗಿ ತುಂಬಿಲ್ಲ. ನಮ್ಮ ರೈತರನ್ನು ಬದುಕಿಸುವ ಸವಾಲಿನ ಜೊತೆಗೆ ಕಾನೂನನ್ನೂ ಕಾಪಾಡಬೇಕು. ಎರಡೂ ಬಹಳ ಮುಖ್ಯ. ಕಾವೇರಿ ವಿಚಾರದಲ್ಲಿ ರೈತರ ಹಿತ ಕಾಯುವುದು ನನ್ನ ಕರ್ತವ್ಯ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಹೇಳಿದರು.

ಭಾಗಮಂಡಲ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದರು. ಕುಡಿಯುವ ನೀರು, ಕೃಷಿಗೆ ಜಲಾಶಯಗಳಲ್ಲಿನ ನೀರಿನ ಲಭ್ಯತೆ ಗಮನದಲ್ಲಿಟ್ಟುಕೊಂಡೇ ನಾವು ನಿರ್ಧಾರ ಕೈಗೊಳ್ಳಬೇಕು.‌ ಉತ್ತಮ ಮಳೆಯಾಗಿ ಬೆಳೆ ಸಮೃದ್ಧಿಯಾಗಬೇಕು, ರೈತರಿಗೆ ಅನ್ನ ಸಿಗಬೇಕು ಎಂಬುದು ನಮ್ಮ ಆಶಯ ಎಂದು ತಿಳಿಸಿದರು.

ನಮ್ಮ ರಾಜ್ಯದ ಒಳಗೆ ಯಾವುದೇ ಅಣೆಕಟ್ಟು ಕಟ್ಟಲು ಅಭ್ಯಂತರವಿಲ್ಲ ಎಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ‌. ಕೇಂದ್ರ ಸರ್ಕಾರ ಕೂಡ ತಮಿಳುನಾಡಿನ ಸಂಸದರಿಗೆ ಉತ್ತರ ನೀಡುವಾಗಲೂ ಈ ಕುರಿತು ಸ್ಪಷ್ಟಪಡಿಸಿದೆ. ಮೇಕೆದಾಟು ನಿರ್ಮಾಣದಿಂದ ತಮಿಳುನಾಡಿಗೆ ನಿಗದಿಯಾಗಿರುವ 177.25 ಟಿಎಂಸಿ ನೀರಿನ ಹಂಚಿಕೆಗೆ ತೊಂದರೆಯಾಗುವುದಿಲ್ಲ. ಸಂಕಷ್ಟದ ಸಂದರ್ಭದಲ್ಲಿ ನೀರು ಹಂಚಿಕೆಗೆ ಪ್ರತ್ಯೇಕ ನಿಯಮಗಳಿವೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವೂ ಈ ಬಗ್ಗೆ ಅಗತ್ಯ ನಿರ್ದೇಶನಗಳನ್ನು ನೀಡಿದೆ. ನಮ್ಮ ಡ್ಯಾಮ್‌ಗಳಲ್ಲಿ ನೀರಿನ ಲಭ್ಯತೆ ಕಡಿಮೆಯಾದರೆ ಅನಗತ್ಯ ಸಂಕಷ್ಟ ಎದುರಾಗಬಹುದು. ಆ ಪರಿಸ್ಥಿತಿ ಬರಬಾರದು. ನಾವು ಕಾನೂನು ಪಾಲಿಸದಿದ್ದರೆ ಅಣೆಕಟ್ಟು ನಿಯಂತ್ರಣವನ್ನು ಕೇಂದ್ರ ಸರ್ಕಾರಕ್ಕೆ ಕೊಡಬೇಕಾದ ಪರಿಸ್ಥಿತಿ ಎದುರಾಗಬಹುದು ಎಂದರು‌.

ಕಾವೇರಿ ನದಿಗೆ ಹಾಗೂ ಕನ್ನಂಬಾಡಿ ಕಟ್ಟೆ ಅನ್ನದ ತಟ್ಟೆ. ನಮ್ಮ ರೈತರು ಬೆಳೆ ತೆಗೆಯಲಿ, ಅವರು ಉಳಿಯಲಿ ಎಂದು ತಾಯಿ ಕಾವೇರಿಗೆ ಪ್ರಾರ್ಥನೆ ಸಲ್ಲಿಸಿದ್ದೇನೆ. ಮೇಕೆದಾಟು ಹೋರಾಟ ನಮ್ಮ ನೀರು, ನಮ್ಮ ಹಕ್ಕು ಸಂದರ್ಭದಲ್ಲಿ ಕಾವೇರಿ ತಾಯಿಗೆ ಪ್ರಾರ್ಥನೆ ಸಲ್ಲಿಸಿದ್ದೆ. ಮೂರು ವರ್ಷಕ್ಕೊಮ್ಮೆ ಇಂತಹ ನೀರಿನ ಸಮಸ್ಯೆ ಎದುರಾಗುವುದು ಪ್ರಕೃತಿಯ ನಿಯಮ ಎಂದು ಹೇಳಿದರು.

ರಾಜ್ಯದ ಜನತೆ, ಪಕ್ಷದ ನಾಯಕರು ಹಾಗೂ ಗುರುಗಳ ಆಶೀರ್ವಾದದಿಂದ ಕಳೆದ 45 ವರ್ಷಗಳಿಂದ ನಾನು ನಡೆಸಿದ ಹೋರಾಟಕ್ಕೆ ಫಲ. ಪ್ರಾರ್ಥನೆಗೆ ಫಲ ಸಿಕ್ಕಿದೆ ಎಂದರು. ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಪಿ.ಎಂ.ನರೇಂದ್ರ ಸ್ವಾಮಿ, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ ಇತರರು ಇದ್ದರು.

ಭಗಂಡೇಶ್ವರ ದೇವಾಲಯಕ್ಕೆ ಸಿಎಂ ಭೇಟಿ, ವಿಶೇಷ ಪೂಜೆ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮುಖ್ಯಮಂತ್ರಿ ಅವರ ಪತ್ನಿ ಉಷಾ ಶಿವಕುಮಾರ್ ಅವರು ಪುಣ್ಯಕ್ಷೇತ್ರ ಭಾಗಮಂಡಲ ಭಗಂಡೇಶ್ವರ ದೇವಾಲಯಕ್ಕೆ ಭಾನುವಾರ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.ಮೊದಲಿಗೆ ಭಾಗಮಂಡಲದ ತ್ರಿವೇಣಿ ಸಂಗಮಕ್ಕೆ ಭೇಟಿ ನೀಡಿ ಪ್ರಾರ್ಥಿಸಿದ ಮುಖ್ಯಮಂತ್ರಿ ಅವರು, ನಂತರ ಭಗಂಡೇಶ್ವರ ದೇವಾಲಯದಲ್ಲಿ ಹೆಚ್ಚಿನ ಮಳೆ, ಬೆಳೆಯಾಗಿ ನಾಡಿನಲ್ಲಿ ಶಾಂತಿ, ನೆಮ್ಮದಿ ಮತ್ತು ಸಮೃದ್ಧಿ ತರುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ, ವಿಶೇಷ ಪೂಜೆ ಸಲ್ಲಿಸಿದರು. ಶ್ರೀ ಮಹಾಗಣಪತಿ, ಶ್ರೀ ಮಹಾವಿಷ್ಣು, ಶ್ರೀ ಸುಬ್ರಹ್ಮಣ್ಯ ದೇವರಿಗೆ ಪೂಜೆ ಸಲ್ಲಿಸಿದರು. ಜಿಲ್ಲಾ ಉಸ್ತುವಾರಿ ಸಚಿವರಾದ ಪಿ.ಎಂ.ನರೇಂದ್ರಸ್ವಾಮಿ, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ, ಕ್ರೀಡಾ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷರಾದ ಅರುಣ್ ಮಾಚಯ್ಯ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ವಿಧಾನ‌ ಪರಿಷತ್ ಮಾಜಿ ಸದಸ್ಯರಾದ ವೀಣಾ ಅಚ್ವಯ್ಯ, ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರು ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಚಿವ ಬಿ.ನಾಗೇಂದ್ರ ವಜಾಕ್ಕೆ ಆಗ್ರಹ
ರೋಗ ನಿರೋಧಕ ಶಕ್ತಿ ವೃದ್ಧಿಗೆ ಇಮ್ಯೂನಿಟಿ ಬೂಸ್ಟರ್ ಕಿಟ್‌ ಬಳಸಿ