ಹಾವೇರಿ: ರಾಜ್ಯ ಸರ್ಕಾರದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಪಂಚಮಸಾಲಿ ಸಮಾಜದವರು ಧರ್ಮ ಕಾಲಂನಲ್ಲಿ ಏನೆಂದು ನಮೂದಿಸಬೇಕೆಂಬ ಗೊಂದಲ ನಿವಾರಣೆಗಾಗಿ ಸೆ. 17ರಂದು ಬೆಂಗಳೂರಿನಲ್ಲಿ ಸಭೆ ನಡೆಸಿ ನಿರ್ಣಯಿಸಲಾಗುವುದು ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ತಿಳಿಸಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದು ಜಾತಿ ಪುನರ್ ಗಣತಿಯಾಗಿದ್ದು, ಇದನ್ನು ಮಾಡುತ್ತಿರುವುದಕ್ಕೆ ಸರ್ಕಾರವನ್ನು ಶ್ಲಾಘಿಸುತ್ತೇವೆ. ಈ ಕುರಿತು ವಿವಿಧ ಮಠಾಧೀಶರು, ಸಮುದಾಯದ ಹಲವರು ವಿವಿಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಪಂಚಮಸಾಲಿ ಸಮಾಜದವರು ಈ ರೀತಿಯ ಯಾರದೇ ಮಾತು ಕೇಳಬೇಕಾದ ಅವಶ್ಯಕತೆ ಇಲ್ಲ. ನಾವು ಈಗಾಗಲೇ ರಾಜ್ಯದ 14 ಜಿಲ್ಲೆಗಳಲ್ಲಿ ಸಮಾಜದವರ ಜತೆ ಸಭೆ ಸೇರಿ ಅಭಿಪ್ರಾಯ ಪಡೆದುಕೊಂಡಿದ್ದೇವೆ. ಹಾವೇರಿ 15ನೇ ಜಿಲ್ಲೆಯಾಗಿದ್ದು, ಸೆ. 16ರಂದು ಹರಿಹರದಲ್ಲಿ ಸಭೆ ಸೇರಿ ಸಮಗ್ರ ಚಿಂತನೆ ನಡೆಸಲಿದ್ದೇವೆ ಎಂದರು.ಇನ್ನು ಹಿಂದುಳಿದ ಸಮುದಾಯಗಳ ಪುನರ್ ಗಣತಿ ನಡೆಯುತ್ತಿದ್ದು, ಅದರಲ್ಲಿ ಈಗಾಗಲೇ 1561 ಜಾತಿಗಳಿವೆ ಎಂದು ತಿಳಿಸಿದ್ದಾರೆ. ಇದರಲ್ಲಿ 3 ಕಡೆ ಪಂಚಮಸಾಲಿ ಪದ ಬಳಕೆಯಾಗಿದೆ. ಒಂದು ಕಡೆ ಜೈನ ಪಂಚಮಸಾಲಿ ಅಂತಾ ನಮೂದು ಮಾಡಿದ್ದಾರೆ. ಲಿಂಗಾಯತ ಪಂಚಮಸಾಲಿ ಮತ್ತು ವೀರಶೈವ ಪಂಚಮಸಾಲಿ ಅಂತಾ ಇದೆ. ಜೈನ ಪಂಚಮಸಾಲಿ ಬಗ್ಗೆ ಯಾವುದೇ ಸಮಸ್ಯೆಯಿಲ್ಲ. ಉಳಿದ ಎರಡು ಪದ ಬಳಕೆಯಲ್ಲಿ ನಾವು ಯಾವುದನ್ನು ಬರೆಸಬೇಕು ಎಂಬುದರ ಕುರಿತು ಸಮಾಜದ ಜನರನ್ನು ಸೇರಿಸಿ ಸಭೆ ನಡೆಸಿ ತೀರ್ಮಾನಿಸಿ ಸೆ. 17ರಂದೇ ಘೋಷಿಸಲಿದ್ದೇವೆ.
ಸಭೆಯಲ್ಲಿ ಸಮಾಜದ ಎಲ್ಲಾ ಮೂರು ಪೀಠಗಳ ಜಗದ್ಗುರುಗಳು, 80ಕ್ಕೂ ಹೆಚ್ಚು ಮಠಾಧೀಶರು ಪಾಲ್ಗೊಳ್ಳಲಿದ್ದಾರೆ. ಸಭೆಯಲ್ಲಿ ಸ್ಪಷ್ಟ ನಿರ್ಧಾರ ಕೈಗೊಂಡು ಒಂದು ನಿರ್ಣಯಕ್ಕೆ ಬರಲಿದ್ದೇವೆ. ಅದಕ್ಕೆ ಪಂಚಮಸಾಲಿ ಸಮಾಜದವರು ಪೂರ್ಣ ಪ್ರಮಾಣದ ಸಹಕಾರ ನೀಡಬೇಕೆಂದು ಕೋರಿದರು.2002ಕ್ಕೂ ಮುಂಚೆ ಸರ್ಕಾರದ ಯಾವುದೇ ದಾಖಲೆಗಳಲ್ಲಿ ವೀರಶೈವ ಎಂಬ ಪದವೇ ಇರಲಿಲ್ಲ. ನಂತರದಲ್ಲಿ ದಿ. ಭೀಮಣ್ಣ ಖಂಡ್ರೆ ಮತ್ತು ದಿ. ಎಂ.ಪಿ. ಪ್ರಕಾಶ ನೇತೃತ್ವದಲ್ಲಿ ಇದು ಸರ್ಕಾರದ ದಾಖಲೆಗೆ ಸೇರಿಕೊಂಡಿದೆ. ಪಂಚಮಸಾಲಿ ಎಂಬ ಪದ ಕೂಡ ಯಡಿಯೂರಪ್ಪ ಅವರು ಸೇರಿಸಿದ್ದರು. ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಹಿಂದೂ ಎಂತಲೇ ಬರೆಯುತ್ತೇವೆ. ಪ್ರತ್ಯೇಕ ಧರ್ಮ ಆಗುವವರೆಗೂ ಹಿಂದೂ ಧರ್ಮವನ್ನೇ ಬರೆಯುತ್ತೇವೆ. ಈ ಬಗ್ಗೆ ಹಲವು ಸಮಾದಾಯದ ಮಠಾಧೀಶರು ವಿಭಿನ್ನ ಹೇಳಿಕೆ ನೀಡುತ್ತಿದ್ದು, ಅವುಗಳಿಗೂ ನಮಗೂ ಸಂಬಂಧವಿಲ್ಲ ಎಂದರು.ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷ ಸೋಮನಗೌಡ ಮಾಲಿಪಾಟೀಲ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಅಗಡಿ, ರಾಜ್ಯ ಉಪಾಧ್ಯಕ್ಷ ಶಂಕರ ಬಿಸನಹಳ್ಳಿ, ಮಹೇಶ ಹಾವೇರಿ, ಜಗದೀಶ ಕನವಳ್ಳಿ, ಮಲ್ಲಿಕಾರ್ಜುನ ಹಾವೇರಿ, ಮಾಲತೇಶ ಸೊಪ್ಪಿನ, ಸಿದ್ದಣ್ಣ ಚಿಕ್ಕಬಿದರಿ, ವಸಂತಾ ಹುಲ್ಲತ್ತಿ, ನಾಗರತ್ನಾ ಗುಡಿಹಳ್ಳಿ, ಗೀತಾ ಜಂಬಗಿ ಇತರರು ಇದ್ದರು.