ಅರಣ್ಯದಂಚಿನಲ್ಲಿ ಆನೆ ಕಂದಕ ನಿರ್ಮಾಣಕ್ಕೆ ನಿರ್ಣಯ

KannadaprabhaNewsNetwork |  
Published : Jul 17, 2025, 12:30 AM IST
ಚಿತ್ರ : 16ಎಂಡಿಕೆ3 : ಕರಿಕೆ ಭಾಗದಲ್ಲಿ ಕಾಡಾನೆ ಹಾವಳಿಯಿಂದ ಬೆಳೆ ಹಾಳಾಗಿರುವುದು.  | Kannada Prabha

ಸಾರಾಂಶ

ಆನೆಗಳು ಕಾಡಿನಿಂದ ಕೃಷಿ ಜಮೀನಿಗೆ ಬಂದು ರೈತರು ಬೆಳೆದ ತೆಂಗು, ಅಡಕೆ, ಬಾಳೆ ಫಸಲುಗಳನ್ನು ನಾಶಪಡಿಸುತ್ತಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗಿನ ಗಡಿ ಭಾಗದ ಕರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆನೆಪಾರೆ, ಬಿಟಿಯಾಡಿ, ಮಡೆಕಾನ, ಫಾರೆಸ್ಟ್ ಐಬಿ, ಪಚ್ಚೆಪಿಲಾವ್ ಮುಂತಾದ ಪ್ರದೇಶಗಳಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಕಾಡಾನೆಗಳ ದಾಳಿಯನ್ನು ತಡೆಯಲು ಸೂಕ್ತ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ಗ್ರಾ.ಪಂ ಅಧ್ಯಕ್ಷ ಬಾಲಚಂದ್ರನ್ ನಾಯರ್ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ಸಾರ್ವಜನಿಕರ ಸಭೆ ನಡೆಸಲಾಯಿತು.

ಭಾಗಮಂಡಲ ವಲಯ ಅರಣ್ಯಾಧಿಕಾರಿ ರವೀಂದ್ರ ಹಾಗೂ ವನ್ಯಜೀವಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ ಅವರು ಗ್ರಾಮಸ್ಥರ ಅಹವಾಲು ಸ್ವೀಕರಿಸಿದರು.

ಆನೆಗಳು ಕಾಡಿನಿಂದ ಕೃಷಿ ಜಮೀನಿಗೆ ಬಂದು ರೈತರು ಬೆಳೆದ ತೆಂಗು, ಅಡಕೆ, ಬಾಳೆ ಫಸಲುಗಳನ್ನು ನಾಶಪಡಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಮತ್ತು ಕೃಷಿ ಕೂಲಿ ಕಾರ್ಮಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದರು.

ಅರಣ್ಯದಂಚಿನಲ್ಲಿ ಕಂದಕವನ್ನು ನಿರ್ಮಿಸಿದರೆ ಆನೆಗಳ ಹಾವಳಿಯನ್ನು ತಡೆಯಲು ಸಾಧ್ಯ. ಈ ಬಗ್ಗೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದರು.

ಅರಣ್ಯ ಅಧಿಕಾರಿಗಳು ಮಾತನಾಡಿ, ಕಂದಕ ನಿರ್ಮಾಣ ಮಾಡಲು ನಮ್ಮ ಅಭ್ಯಂತರವಿಲ್ಲ, ಆದರೆ ಕರಿಕೆ ಗ್ರಾಮ ಬೆಟ್ಟಗುಡ್ಡಗಳಿಂದ ಕೂಡಿರುವ ಪ್ರದೇಶವಾಗಿದ್ದು, ಭೂ ಕುಸಿತವಾಗುವ ಸಂಭವವಿರಬಹುದು ಎಂದು ಸಭೆಯ ಗಮನ ಸೆಳೆದರು.

ಗ್ರಾಮಸ್ಥರು ಮಾತನಾಡಿ, ಈ ಹಿಂದೆ ಕರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆನೆ ಕಂದಕವನ್ನು ತೆಗೆಯಲಾಗಿದ್ದು, ಇಲ್ಲಿಯವರೆಗೆ ಯಾವುದೇ ಭೂ ಕುಸಿತ ಸಂಭವಿಸಿಲ್ಲ. ಕಂದಕದಿಂದ ಭೂಕುಸಿತ ಉಂಟಾಗುವುದಿಲ್ಲ, ಆದ್ದರಿಂದ ಕಂದಕ ನಿರ್ಮಾಣವೇ ಸೂಕ್ತ ಪರಿಹಾರ ಎಂದರು.

ಅರಣ್ಯ ಪ್ರವಾಸಿ ಮಂದಿರದಿಂದ ಕೇರಳದ ಗಡಿಯವರೆಗೂ, ಬಿಟಿಯಾಡಿ, ಮಡೆಕಾನ, ಕೊಳಂಗಾರೆ, ಅಂಬೇಡ್ಕರ್ ಕಾಲೋನಿ, ಪಚ್ಚೆಪಿಲಾವ್, ಆಲತ್ತಿಕಡವ್ ಮುಂತಾದ ಕಡೆಗಳಲ್ಲಿ ಆನೆಗಳ ಉಪಟಳ ಹೆಚ್ಚಾಗಿರುವುದರಿಂದ ಈ ಪ್ರದೇಶದಲ್ಲಿ ಆನೆ ಕಂದಕಗಳನ್ನು ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಚಂದ್ರನ್ ನಾಯರ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಡಾನೆಗಳ ಉಪಟಳವನ್ನು ತಡೆಯಲು ಶೀಘ್ರ ಕಂದಕಗಳನ್ನು ನಿರ್ಮಿಸಬೇಕು. ವನ್ಯಜೀವಿಗಳು ರೈತರ ಫಸಲನ್ನು ನಾಶಮಾಡಿದರೆ ಅರಣ್ಯ ಅಧಿಕಾರಿಗಳು ಜಮೀನುಗಳಿಗೆ ಖುದ್ದು ಭೇಟಿ ನೀಡಿ ಪರಿಹಾರ ಮೊತ್ತವನ್ನು ತಕ್ಷಣ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದರು.

ಗ್ರಾ.ಪಂ. ಉಪಾಧ್ಯಕ್ಷರಾದ ಕಲ್ಪನಾ ಜಗದೀಶ್, ಸರ್ವ ಸದಸ್ಯರು, ಮಡಿಕೇರಿ ತಾಲೂಕು ಕೆಡಿಪಿ ಸದಸ್ಯ ಜಯನ್, ಅರಣ್ಯ ಇಲಾಖೆಯ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು.

PREV

Latest Stories

ನಗರದಲ್ಲಿ ಶೀಘ್ರ ಟೋಯಿಂಗ್ ವ್ಯವಸ್ಥೆ ಮರು ಜಾರಿ:ಪರಂ
ದೇಶದಲ್ಲೇ ಫಸ್ಟ್‌ ಟೈಂ ಜನರ ಮನೆ ಬಾಗಿಲಿಗೆ ಪೊಲೀಸ್ : ಪರಂ
ನೀರುಗಾಲುವೆಗಳಲ್ಲಿ ಟೆಕ್‌ ಪಾರ್ಕ್‌ ನಿರ್ಮಾಣದಿಂದ ಪ್ರವಾಹ