ಕನ್ನಡಪ್ರಭವಾರ್ತೆ ಪಾವಗಡ
ಶಿರಾ ರಸ್ತೆಯಲ್ಲಿರುವ ಆಶ್ರಯ ಬಡಾವಣೆಗೆ ವೆಂಕಟರಮಣಪ್ಪ ಬಡಾವಣೆ ಎಂದು 2009 ರಲ್ಲಿ ನಾಮಕರಣಗೊಳಿಸಿ ಪುರಸಭೆಯಿಂದ ಅನುಮೋದನೆಗೊಳಿಸಲಾಗಿದೆ. ಖಾಸಗಿ ವ್ಯಕ್ತಿಗಳ ವಿವಾದದಿಂದ ರಸ್ತೆಗೆ ವೆಂಕಟರಮಣಪ್ಪ ಬಡಾವಣೆ ಎಂದು ಹೆಸರು ನಾಮಕರಣಗೊಳಿಸುವ ಕಾರ್ಯ ವಿಳಂಬವಾಗಿತ್ತು. ರಸ್ತೆಗೆ ನಾಮಫಲಕ ಆಳವಡಿಕೆಗೆ ಮುಂದಾದ ವೇಳೆ ಜೆಡಿಎಸ್ ಪಕ್ಷದವರು ತಗಾದೆ ತೆಗೆಯುತ್ತಿರುವುದು ರಾಜಕೀಯದಿಂದ ಕೂಡಿದೆ ಎಂದು ಪುರಸಭೆ ಅಧ್ಯಕ್ಷ ಸುದೇಶ್ ಬಾಬು ಆರೋಪಿಸಿದ್ದಾರೆ.ವೆಂಕಟರಮಣಪ್ಪ ಬಡಾವಣೆ ನಾಮಕರಣ ವಿಚಾರವಾಗಿ ಜೆಡಿಎಸ್ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಮುಷ್ಕರದ ಬೆನ್ನಲ್ಲೇ ಬುಧವಾರ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಸುದ್ದಿ ಗೋಷ್ಠಿ ನಡೆಸಿ ಜೆಡಿಎಸ್ ನಡೆಸುತ್ತಿರುವ ನಡೆಸುತ್ತಿರುವ ಧರಣಿ ವಿಚಾರವಾಗಿ ದಾಖಲೆ ಸಮೇತ ಟಕ್ಕರ್ ನೀಡಿದರು.
ಪಟ್ಟಣದ ಹೊರವಲಯ ಶಿರಾರಸ್ತೆ ಪಕ್ಕದಲ್ಲಿ ಆಗಿನ ಶಾಸಕರಾಗಿದ್ದ 2004 ವೆಂಕಟರಮಣಪ್ಪ ಅವರು 10.2 ಎಕರೆ ಜಮೀನು ಗುರ್ತಿಸಿ ಮಾಲೀಕರಿಂದ ಖರೀದಿಸುವ ಮೂಲಕ 390 ಫಲಾನುಭಗಳಿಗೆ ನಿವೇಶನ ಹಾಗೂ ವಸತಿ ಸೌಲಭ್ಯ ಕಲ್ಪಿಸಿಕೊಟ್ಟಿದ್ದರು. 2007ರಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ ಬಡಾವಣೆ ಉದ್ಘಾಟನೆಗೂ ಒಂದು ದಿನ ಮುನ್ನ ಪುರಸಭೆಯಿಂದ ನಾಮಕರಣ ಮಾಡಿದರು. 2009ರಲ್ಲಿ ಪುರಸಭೆಯ ಸದಸ್ಯರ ಸಭೆ ನಡೆಸಿ ವೆಂಕಟರಮಣಪ್ಪ ಬಡಾವಣೆ ಎಂದು ಪುನಃ ನಾಮಕರಣಗೊಳಿಸಿದರು. ಈ ಸಂಬಂಧ ದಾಖಲೆಗಳಿವೆ.ಬಡಾವಣೆ ಪ್ರಗತಿಗೆ ಇದುವರೆವಿಗೆ ಪುರಸಭೆಯಿಂದ 2.14ಕೋಟಿ ವಿನಿಯೋಗಿಸಿ ಕುಡಿಯುವ ನೀರು ವಿದ್ಯುತ್ ರಸ್ತೆ ಇತರೆ ಮೂಲಭೂತ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಿದ್ದೇವೆ.ಇನ್ನೂ ಎರಡು ಮೂರು ತಿಂಗಳಲ್ಲಿ, ಮನೆ ಮನೆಗೆ ತುಂಗಭದ್ರಾ ಯೋಜನೆಯ ಶುದ್ಧ ನೀರು ಪೂರೈಕೆ ಮಾಡಲಿದ್ದೇವೆ. ಇದನ್ನು ಸಹಿಸದ ಜೆಡಿಎಸ್ ರಾಜಕೀಯ ಪಿತೂರಿ ನಡೆಸುವ ಮೂಲಕ ಇಲ್ಲ ಸಲ್ಲದ ಆರೋಪಕ್ಕೆ ಮುಂದಾಗಿರುವುದು ದುರಂತ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪುರಸಭೆಯ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅಭಿವೃದ್ಧಿ ಸಹಿಸಲು ಸಾಧ್ಯವಾಗದೇ ವಿನಾ ಕಾರಣ ಆರೋಪಕ್ಕೆ ಜೆಡಿಎಸ್ ಮುಂದಾಗಿದೆ. ಪಟ್ಟಣದ ಜನತೆ ಎಲ್ಲವನ್ನು ಗಮನಿಸುತ್ತಿದ್ದಾರೆ. ಬಡಾವಣೆ ವಿಚಾರದಲ್ಲಿ ನಮ್ಮ ನಿರ್ಧಾರ ಕೈಬಿಡುವುದಿಲ್ಲ ಎಂದು ತಿಳಿಸಿದರು.ಹಿರಿಯ ಮುಖಂಡ ಪ್ರಮೋದ್ ಕುಮಾರ್,ಮಾಜಿ ಪುರಸಭೆಯ ಅಧ್ಯಕ್ಷರಾದ ಭೋವಿ ಕಾಲೋನಿಯ ರಾಮಾಂಜಿನಪ್ಪ,ವೇಲುರಾಜು ಪುರಸಭೆ ಸದಸ್ಯರಾದ ತೆಂಗಿನಕಾಯಿ ರವಿ,ವಿಜಯಕುಮಾರ್,ಗೊರ್ತಿ ನಾಗರಾಜು,ಮೊಹಮ್ಮದ್,ಇಮ್ರಾನ್,ಕುಮಾರ್,ನಾಗಭೂಷಣ್ ರೆಡ್ಡಿ,ಬಾಲ ಸುಬ್ರಮಣ್ಯಂ ಹಾಗೂ ಇತರೆ ಅನೇಕ ಮಂದಿ ಉಪಸ್ಥಿತರಿದ್ದರು.