ರಾಣಿಬೆನ್ನೂರು: ರಾಜ್ಯದ ಖಾಸಗಿ ಅನುದಾನಿತ ಶಾಲಾ- ಕಾಲೇಜುಗಳ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನುದಾನಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಒಕ್ಕೂಟದ ವತಿಯಿಂದ ಶಾಲಾ- ಕಾಲೇಜುಗಳನ್ನು ಅನಿರ್ದಿಷ್ಟ ಅವಧಿಗೆ ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ಒಕ್ಕೂಟದ ಉಪಾದ್ಯಕ್ಷ ಡಾ. ಆರ್.ಎಂ. ಕುಬೇರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಕುರಿತು ಅವರು ನೀಡಿರುವ ಪ್ರಕಟಣೆಯಲ್ಲಿ, ಹಾವೇರಿ ಜಿಲ್ಲಾ ಅನುದಾನಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಒಕ್ಕೂಟ ಕಳೆದ ಹಲವಾರು ವರ್ಷಗಳಿಂದ ಸಮಸ್ಯೆಗಳನ್ನು ಬಗೆಹರಿಸಲು ನಿರಂತರ ಪ್ರಯತ್ನ ಮಾಡುತ್ತಾ ಬಂದಿದೆ. ಆದರೆ ಆಳುವ ಎಲ್ಲ ಪಕ್ಷದ ಸರ್ಕಾರಗಳು ಅನುದಾನಿತ ಶಾಲಾ- ಕಾಲೇಜುಗಳನ್ನು ನಿರ್ಲಕ್ಷಿಸುತ್ತಾ ಬಂದಿವೆ. ಕಳೆದ ಹತ್ತಾರು ವರ್ಷಗಳಿಂದ ಅನುದಾನಿತ ಶಾಲಾ- ಕಾಲೇಜುಗಳಲ್ಲಿ ನಿವೃತ್ತಿ/ ನಿಧನದಿಂದ ಖಾಲಿಯಾಗಿರುವ ಬೋಧಕ ಹಾಗೂ ಬೋಧಕೇತರ ಹುದ್ದೆಗಳನ್ನು ತುಂಬಲು ಅನುಮತಿ ನೀಡುತ್ತಿಲ್ಲ.
ರಾಜ್ಯದ ಎಲ್ಲ ಪದವಿಪೂರ್ವ ಕಾಲೇಜುಗಳು ಈಗ ಮುಚ್ಚುವ ಕೊನೆಯ ಹಂತದಲ್ಲಿವೆ. 2015ರಿಂದ 2020ರ ವರೆಗೆ ಹುದ್ದೆ ತುಂಬಲು ಇತ್ತೀಚೆಗೆ ಆದೇಶ ಮಾಡಿ, ಒಳಮೀಸಲಾತಿ ನೆಪದ ಮೇಲೆ ಹುದ್ದೆ ತುಂಬಲು ನಿಷೇಧ ಹೇರಲಾಗಿದೆ. ಖಾಸಗಿ ಆಡಳಿತ ಮಂಡಳಿಗಳು ಇನ್ನೂ ಎಷ್ಟು ದಿವಸ ಮಕ್ಕಳ ಶಿಕ್ಷಣಕ್ಕೆ ಹಣ ಜೋಡಿಸಬೇಕು ಎಂಬುದು ಯಕ್ಷಪಶ್ನೆಯಾಗಿದೆ.
ಆಳುವ ಪ್ರಭುಗಳು ಮನವಿಗೆ ಸ್ಪಂದಿಸುವ ಪರಿಸ್ಥಿತಿಯಲ್ಲಿಲ್ಲವಾದ್ದರಿಂದ ಸರ್ಕಾರದ ಈ ಧೋರಣೆಯನ್ನು ಪ್ರತಿಭಟಿಸಲು ಇತ್ತೀಚೆಗೆ ಹಾವೇರಿ ತಾಲೂಕಿನ ನೆಗಳೂರು ಗ್ರಾಮದಲ್ಲಿ ನಡೆದ ಅನುದಾನಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಎ.ಎಸ್. ಬಳ್ಳಾರಿಯವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸಲು ಅನುದಾನಿತ ಶಾಲಾ- ಕಾಲೇಜುಗಳನ್ನು ಅನಿರ್ದಿಷ್ಟ ಅವಧಿಗೆ ಬಂದ್ ಮಾಡಲು ತೀರ್ಮಾನಿಸಲಾಗಿದೆ.ಸಭೆಯಲ್ಲಿ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಕೂಡ ಭಾಗವಹಿಸಿದ್ದು, ಬೇಡಿಕೆಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಮಸ್ತ ಉತ್ತರಕರ್ನಾಟಕದ ಖಾಸಗಿ ಅನುದಾನಿತ ಶಾಲಾ- ಕಾಲೇಜುಗಳ ಆಡಳಿತ ಮಂಡಳಿಗಳ ಪ್ರತಿನಿಧಿಗಳ ಸಭೆಯನ್ನು ಇಷ್ಟರಲ್ಲಿಯೇ ಹುಬ್ಬಳಿಯಲ್ಲಿ ಕರೆದು ಎಲ್ಲರ ವಿಶ್ವಾಸ ಪಡೆದು ಅನಿರ್ದಿಷ್ಟ ಅವಧಿಯವರೆಗೆ ಶಾಲಾ-ಕಾಲೇಜುಗಳನ್ನು ಬಂದ್ ಮಾಡಲು ಸೂಕ್ತ ದಿನಾಂಕವನ್ನು ನಿಗದಿ ಮಾಡಲಾಗುವುದು. ಈ ಸಭೆಗೆ ಎಲ್ಲ ಅನುದಾನಿತ ಶಾಲಾ- ಕಾಲೇಜುಗಳ ಪ್ರತಿನಿಧಿಗಳು ಆಗಮಿಸಿ ಸೂಕ್ತ ಸಲಹೆ ನೀಡಿ ಸಹಕರಿಸಬೇಕು ಎಂದು ಒಕ್ಕೂಟದ ಅಧ್ಯಕ್ಷ ಎ.ಎಸ್. ಬಳ್ಳಾರಿ, ಕಾರ್ಯದರ್ಶಿ ಬಸವರಾಜ ಹಾದಿಮನಿ ಮನವಿ ಮಾಡಿದ್ದಾರೆ.