ಕನ್ನಡಪ್ರಭ ವಾರ್ತೆ ಹಾನಗಲ್ಲ
ತಾಲೂಕಿನ ಜೀವನದಿ ಧರ್ಮಾ ಜಲಾಶಯದಲ್ಲಿರುವ ೨೪ ಅಡಿ ನೀರಿನಲ್ಲಿ ೬ ಅಡಿ ನೀರನ್ನು ಕಾಳು ಕಟ್ಟುವ ಹಂತದಲ್ಲಿರುವ ಭತ್ತದ ಬೆಳೆಗೆ ಹರಿಸಿ ಉಳಿದ ನೀರನ್ನು ಜನ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಉಳಿಸಿಕೊಳ್ಳಬೇಕು ಎಂದು ಸವಣೂರು ಉಪವಿಭಾಗಾಧಿಕಾರಿ ಮೊಹಮ್ಮದ ಖಿಜರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.ಪಟ್ಟಣದ ತಹಸೀಲ್ದಾರ ಕಚೇರಿ ಸಭಾಂಗಣದಲ್ಲಿ ಧರ್ಮಾ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರನ್ನೊಳಗೊಂಡು, ತಾಲೂಕು ತಹಸೀಲ್ದಾರ ರವಿಕುಮಾರ ಕೊರವರ, ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಉಪವಿಭಾಗಾಧಿಕಾರಿ ಸಭೆ ನಡೆಸಿದರು.
ಈಗ ಧರ್ಮಾ ಜಲಾಶಯದಲ್ಲಿರುವ ೨೪ ಅಡಿ ನೀರನ್ನು ತುಂಬಾ ಜಾಗರೂಕವಾಗಿ ಬಳಸಬೇಕಾಗಿದ್ದು, ಎಂಥಹದ್ದೇ ಸಂದರ್ಭದಲ್ಲಿ ಕುಡಿಯುವ ನೀರಿಗೆ ಅನನುಕೂಲವಾಗದಂತೆ ಜಾಗೃತಿ ವಹಿಸಬೇಕಾಗಿದೆ. ಇದರ ನಡುವೆ ಈಗಾಗಲೇ ಬೆಳೆದು ನಿಂತ ಈ ಅಚ್ಚುಕಟ್ಟು ಪ್ರದೇಶದ ಭತ್ತದ ಬೆಳೆಯನ್ನು ಉಳಿಸುವುದಕ್ಕಾಗಿ ಜಲಾಶಯದ ೬ ಅಡಿ ನೀರನ್ನು ಹರಿಸಲಾಗುತ್ತದೆ. ರೈತರು ನೀರನ್ನು ಪೋಲು ಮಾಡದಂತೆ ಕಾಳಜಿಯಿಂದ ಬಳಸಿಕೊಳ್ಳಬೇಕು. ಮಳೆಯಾಗದೇ ಹೋದರೆ ಈಗಿರುವ ನೀರಿನಲ್ಲಿ ಈಗ ಒಂದು ಬಾರಿ ಮಾತ್ರ ಜಮೀನಿಗೆ ನೀರು ಹರಿಸಲು ಸಾಧ್ಯ ಎಂದು ಸಭೆಗೆ ಮನವರಿಕೆ ಮಾಡಿ, ನೀರಾವರಿ ಇಲಾಖೆಯ ಅಧಿಕಾರಿಗಳು ಸರಿಯಾಗಿ ನೀರಿನ ಹಂಚಿಕೆಗೆ ಕ್ರಮ ಜರುಗಿಸಬೇಕು ಎಂದು ಖಿಜರ ತಿಳಿಸಿದರು.ಧರ್ಮಾ ಕಾಲುವೆಯ ಕೊನೆಯ ಅಂಚಿನವರೆಗೆ ನೀರು ಹರಿಸಬೇಕು ಎಂದು ರೈತರು ಒತ್ತಾಯಿಸಿದರು. ಈಗ ಒಂದಷ್ಟು ಮಳೆಯಾಗಿರುವುದರಿಂದ ಭೂಮಿ ಕಾಲುವೆ ತಂಪಾಗಿರುವುದರಿಂದ ನೀರು ಹರಿಯುವುದು ವೇಗವಾಗುತ್ತದೆ. ಸದ್ಯದ ಒಂದು ಬೆಳೆಯಾದರೂ ಬರುವ ಹಾಗೆ ನೀರನ್ನು ಒದಗಿಸಬೇಕು. ಅದಕ್ಕಾಗಿ ಕಾಲುವೆಯ ಕೊನೆಯವರೆಗೆ ನೀರು ಹರಿಸಬೇಕು. ಅಚ್ಚುಕಟ್ಟು ಪ್ರದೇಶದ ಕೆರೆಗಳನ್ನು ತುಂಬಿಸಬೇಕು. ನೀರಿನ ಹಂಚಿಕೆಯಲ್ಲಿ ಎಲ್ಲ ರೈತರ ಜಮೀನುಗಳನ್ನು ಲಕ್ಷ್ಯದಲ್ಲಿಟ್ಟುಕೊಂಡು ನೀರು ಹರಿಸಬೇಕು ಎಂಬ ಒತ್ತಾಯ ಕೇಳಿ ಬಂತು.
ಧರ್ಮಾ ಜಲಾಶಯದಲ್ಲಿನ ನೀರು ಹಾಗೂ ಅದನ್ನು ಇಂತಹ ಸಂದರ್ಭದಲ್ಲಿ ಬಳಸಬೇಕಾದ ವಾಸ್ತವತೆಯ ಕುರಿತು ಮಾಹಿತಿ ನೀಡಿದದ ನೀರಾವರಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಪ್ರಹ್ಲಾದ ಶೆಟ್ಟಿ, ನೀರನ್ನು ಬಳಸುವ ವಿಷಯದಲ್ಲಿ ರೈತರ ಸಹಕಾರ ಬಹಳ ಮುಖ್ಯ. ಎಲ್ಲ ರೈತರ ಅಭಿಪ್ರಾಯಗಳನ್ನು ಆಲಿಸಿ ಸವಣೂರು ಉಪವಿಭಾಗಾಧಿಕಾರಿ ಮಾರ್ಗದರ್ಶನದಂತೆ ನೀರು ಬಳಸುವಲ್ಲಿ ಗಮನ ಹರಿಸಲಾಗುವುದು ಎಂದರು.ರೈತ ನಾಯಕರಾದ ಚಂದ್ರಣ್ಣ ಗೂಳಿ, ವೀರೇಶ ಬೈಲವಾಳ, ರುದ್ರಪ್ಪ ಹಣ್ಣಿ, ರಾಮನಗೌಡ ಪಾಟೀಲ, ರಾಜಣ್ಣ ಗೌಳಿ, ಮರಿಗೌಡ ಪಾಟೀಲ, ರವಿ ದೇಶಪಾಂಡೆ, ಅಜ್ಜನಗೌಡ ಕರೆಗೌಡರ ಮಾತನಾಡಿ, ನೀರು ಹಂಚಿಕೆ ವಿಷಯದಲ್ಲಿ ತಾರತಮ್ಯ ಬೇಡ. ಮಳೆ ಇಲ್ಲದ ಈ ಸ್ಥಿತಿಯಲ್ಲಿ ರೈತರ ಜಮೀನಿನ ಪೈರು ಹಾಗೂ ಮುಂಬರುವ ದಿನಗಳಲ್ಲಿ ಜನ ಜಾನವಾರುಗಳಿಗೆ ನೀರಿನ ಲಭ್ಯತೆಯನ್ನೂ ಗಮನದಲ್ಲಿಟ್ಟುಕೊಂಡು ನೀರು ಹರಿಸಬೇಕು. ರೈತರಲ್ಲಿ ಭಿನ್ನಾಭಿಪ್ರಾಯ ಬೇಡ. ಇರುವ ನೀರನ್ನು ಹಂಚಿಕೊಂಡು ಬಳಸೋಣ. ಅಧಿಕಾರಿಗಳು ಸಮರ್ಪಕವಾಗಿ ನೀರು ಹಂಚಿಕೆ ಮಾಡಿದಲ್ಲಿ ಯಾವುದೇ ಸಮಸ್ಯೆಯಾಗದು ಎಂದು ಸಲಹೆ ನೀಡಿದರು.
ಅಂತಿಮವಾಗಿ ಧರ್ಮಾ ಜಲಾಶಯದಿಂದ ೬ ಅಡಿ ನೀರನ್ನು ಈಗ ಒಂದು ಬಾರಿ ಮಾತ್ರ ಹರಿಸಿ ಉಳಿದ ನೀರನ್ನು ಉಳಿಸಿಕೊಂಡು ಮುಂದಿನ ದಿನಗಳಲ್ಲಿ ಅಗತ್ಯಗನುಗುಣವಾಗಿ ಬಳಸುವಂತೆ ಸವಣೂರು ಉಪವಿಭಾಗಾಧಿಕಾರಿ ಮೊಹಮ್ಮದ ಖಿಜರ ಪ್ರಕಟಿಸಿ, ೧೫ ಅಡಿ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಕಾದಿರಿಸಲೇಬೇಕಾಗಿದೆ. ಇನ್ನು ಎಂಟು ತಿಂಗಳು ನಾವು ನೀರನ್ನು ಹಿತ ಮಿತವಾಗಿ ಬಳಸುವ ಮೂಲಕ ಮಳೆಗಾಲದವರೆಗೆ ಸಾಗಬೇಕಾಗಿದೆ ಎಂದರು.ಸಭೆಯಲ್ಲಿ ನೀರಾವರಿ ಇಲಾಖೆ ಎಂಜಿನಿಯರ್ ಜಾವೇದ ಮುಲ್ಲಾ, ಕೃಷಿ ಇಲಾಖೆ ಅಧಿಕಾರಿ ಸಂಗಮೇಶ ಹಕ್ಲಪ್ಪನವರ, ಮುಖಂಡರಾದ ಚಂದ್ರಪ್ಪ ಕಾರೇರ, ಬಿ.ಸಿ. ಪಾಟೀಲ, ಸೋಮಣ್ಣ ಜಡೆಗೊಂಡರ, ಮಂಜು ಕಬ್ಬೂರ, ಚನಬಸಪ್ಪ ಸಂಗೂರ, ನಿಂಗನಗೌಡ ಅಗಸನಹಳ್ಳಿ, ಸಂಜೀವಗೌಡ ಪಾಟೀಲ, ರಾಜು ವೇರ್ಣೇಕರ, ನಾಗರಾಜ ಬೊಮ್ಮನಹಳ್ಳಿ, ಅಬುಲ್‌ಖಾದರ ಮುಲ್ಲಾ, ಸುರೇಶ ಕಂಚಿನೆಗಳೂರ, ಸಿದ್ದಣ್ಣ ಯಲ್ಲಾಪುರ, ಬಿ.ಎಸ್. ಮೆಳ್ಳಳ್ಳಿ ಮೊದಲಾದವರು ಈ ಸಂದರ್ಭದಲ್ಲಿದ್ದರು.