ಪಂಚಮಸಾಲಿ ಮೀಸಲಾತಿಗಾಗಿ ತೀವ್ರ ಹೋರಾಟಕ್ಕೆ ನಿರ್ಧಾರ

KannadaprabhaNewsNetwork |  
Published : May 24, 2024, 12:50 AM IST
ಶ್ರೀಗಳು  | Kannada Prabha

ಸಾರಾಂಶ

2ಎ ಮೀಸಲಾತಿಗಾಗಿ ಬೆಂಗಳೂರಿನಲ್ಲಿ ಜೂ. 8ರಂದು ಪಂಚಮಸಾಲಿ ಸಮಾಜದ ಶಾಸಕರ ಸಭೆ ನಡೆಸಿ ಹೋರಾಟದ ರೂಪುರೇಷೆ ಹಮ್ಮಿಕೊಳ್ಳಲು ಉಳವಿಯಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಜೋಯಿಡಾ: ಪಂಚಮಸಾಲಿ ಲಿಂಗಾಯತ ಸಮುದಾಯವನ್ನು 2ಎ ಮೀಸಲಾತಿಗೆ ಹಾಗೂ ಲಿಂಗಾಯತರನ್ನು ಒಬಿಸಿ ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಬಗ್ಗೆ ಹೋರಾಟ ತೀವ್ರಗೊಳಿಸಲು ಉಳವಿಯಲ್ಲಿ ಬಸವಜಯ ಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ನಡೆದ ಪಂಚಮಸಾಲಿ ಮೀಸಲಾತಿ ಸಂಕಲ್ಪ ರಾಜ್ಯಸಭೆ ತೀರ್ಮಾನಿಸಿತು.

ಉಳವಿಯ ಚನ್ನಬಸವೇಶ್ವರ ಸಭಾ ಭವನದಲ್ಲಿ ಗುರುವಾರ ಪಂಚಮಸಾಲಿ ಮೀಸಲಾತಿ ಚಳವಳಿಗಾರರ ಹಾಗೂ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಉಳವಿಯಲ್ಲಿ ನಮ್ಮ ಸಮಾಜದ ಮೊದಲ ಸಭೆ ಇದು. ಚುನಾವಣೆಯ ಪೂರ್ವದಲ್ಲಿ ರಾಜಕಾರಣಿಗಳು ಸಾಕಷ್ಟು ಆಶ್ವಾಸನೆ ನೀಡಿದ್ದರು. ನಂತರ ಅವರು ಯಾರ ಫೋನಿಗೂ ಸಿಗುತ್ತಿಲ್ಲ. ಹಾಗಾಗಿ ಯಾವ ರಾಜಕಾರಣಿಗಳನ್ನು ಇಂದಿನ ಸಭೆಗೆ ಕರೆದಿಲ್ಲ ಎಂದರು.

ಹಿಂದೆ ವಚನ ಸಾಹಿತ್ಯ ಉಳಿವಿಗೆ ಚನ್ನಬಸವಣ್ಣ ಉಳವಿಗೆ ಬಂದು ಸಾಧನೆ ಮಾಡಿದಂತೆ ನಾವು ಹೋರಾಟದ ತೀರ್ಮಾನವನ್ನು ಉಳವಿಯಿಂದಲೇ ಆರಂಭಿಸಲು ತೀರ್ಮಾನಿಸಿದ್ದೇವೆ. ಈ ತೀರ್ಮಾನದಿಂದ ಹಿಂದೆ ಸರಿಯುವ ಮಾತೆ ಇಲ್ಲ. ರಾಜಕಾರಣ ಶಾಶ್ವತವಲ್ಲ. ಆದರೆ ಸಮಾಜ ಶಾಶ್ವತ. ನಮ್ಮ ಸಮಾಜದ ಜನತೆಯ ಒಳ್ಳೆಯದಕ್ಕೆ ನಾವು ತೆಗೆದುಕೊಳ್ಳುವ ತೀರ್ಮಾನದಿಂದ ಹಿಂದೆ ಸರಿಯುವುದಿಲ್ಲ ಎಂದರು.

ಹಿಂದೆ ಹೋರಾಟ ಮಾಡಿದಂತೆ ಬರುವ ಅಧಿವೇಶನದಲ್ಲಿ ನಮ್ಮ ಸಮಾಜದ ಎಲ್ಲ ಪಕ್ಷದ ಶಾಸಕರೂ ಒಂದೇ ಧ್ವನಿಯಲ್ಲಿ ನಿರ್ಣಯ ಒಪ್ಪಿಕೊಳ್ಳುವಂತೆ ಮಾಡಬೇಕಾಗಿದೆ. ಅಗತ್ಯ ಬಿದ್ದರೆ ವಿಧಾನಸೌಧದ ಎದುರು ಧರಣಿ ಮಾಡುವುದಕ್ಕೂ ಹಿಂದೆ ಬೀಳುವುದಿಲ್ಲ. ಬೇರೆಯವರು ಬದುಕಲು ತ್ಯಾಗ ಮಾಡಿದ ಸಮಾಜ ಇಂದು ಬದುಕನ್ನು ಕಟ್ಟಿಕೊಳ್ಳಲು ಹೋರಾಟ ಮಾಡಬೇಕಾದ ಸ್ಥಿತಿಗೆ ಬಂದಿದೆ. ಹಿಂದಿನ ಸರ್ಕಾರದ ಕೊನೆ ಘಳಿಗೆಯ ತೀರ್ಮಾನ ನಮ್ಮ ಕೈಗೆ ಬರಲಿಲ್ಲ. ಈ ಸರ್ಕಾರ ಕಳೆದ ಒಂಬತ್ತು ತಿಂಗಳಿಂದ ನಮಗೆ ಸ್ಪಂದನೆ ಕೂಡ ಮಾಡಿಲ್ಲ. ಕನಿಷ್ಠ ಮಾತನಾಡುವ ಸೌಜನ್ಯ ಕೂಡ ಈ ಸರ್ಕಾರಕ್ಕೆ ಇಲ್ಲ ಎಂದರು.

ಮಲ್ಲಿಕಾರ್ಜುನ ಹಿರೇಕೊಪ್ಪ, ದ್ಯಾಮಣ್ಣ ಗೌಡ ಪಾಟೀಲ ಮಾತನಾಡಿ, ಪಂಚಮಸಾಲಿ ಜನರ ಜಾತಿ ಗಣತಿ ಸರಿಯಾಗಿಲ್ಲ. ನಮ್ಮ ಜನರು ಹೆಚ್ಚಿದ್ದರೂ ಕೇವಲ 60 ಲಕ್ಷ ಎಂದು ತೋರಿಸಲಾಗಿದೆ. ಪಂಚಮಸಾಲಿಯನ್ನು 2 ಎಗೆ ಸೇರಿಸಲು ಒತ್ತಾಯಿಸುವ ಸಲುವಾಗಿ ಸಂಕಲ್ಪ ಯಾತ್ರೆಯನ್ನು ಉಳವಿಯವರೆಗೆ ಹಮ್ಮಿಕೊಂಡಿದ್ದೇವೆ ಎಂದರು. ಸಭೆಯಲ್ಲಿ ಸುಮಾರು ಐನೂರು ಜನರು ಸೇರಿದ್ದರು.ಬೆಂಗಳೂರಿನಲ್ಲಿ ಜೂ .8ರಂದು ಪಂಚಮಸಾಲಿ ಶಾಸಕರ ಸಭೆ

ಜೋಯಿಡಾ: 2ಎ ಮೀಸಲಾತಿಗಾಗಿ ಬೆಂಗಳೂರಿನಲ್ಲಿ ಜೂ. 8ರಂದು ಪಂಚಮಸಾಲಿ ಸಮಾಜದ ಶಾಸಕರ ಸಭೆ ನಡೆಸಿ ಹೋರಾಟದ ರೂಪುರೇಷೆ ಹಮ್ಮಿಕೊಳ್ಳಲು ಉಳವಿಯಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.ಸಭೆಯಲ್ಲಿ ಬಾರುಕೋಲು ಚಳವಳಿ, ಜೈಲು ಭರೋ ಚಳವಳಿ, ಬಡಿಗೆ ಚಳವಳಿ, ಶಾಸಕರ ನಿವಾಸದ ಎದುರು ಧರಣಿ ನಡೆಸುವ ಬಗ್ಗೆ ಸಲಹೆ ಸೂಚನೆಗಳು ಬಂದವು. ಆದರೆ ಬೆಂಗಳೂರಿನಲ್ಲಿ ನಡೆಯಲಿರುವ ಸಭೆಯಲ್ಲಿ ಹೋರಾಟದ ಬಗ್ಗೆ ನಿರ್ಧಾರ ಕೈಗೊಳ್ಳುವ ನಿರ್ಣಯ ಅಂಗೀಕರಿಸಲಾಯಿತು ಎಂದು ಪಂಚಮಸಾಲಿ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಹಿರೇಕೊಪ್ಪ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ