ಜಗಳೂರು: ದಶಕಗಳ ಬೇಡಿಕೆಯಾದ ಪರಿಶಿಷ್ಟ ಜಾತಿಯೊಳಗಿನ ಒಳಮೀಸಲಾತಿಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡ ಹಿನ್ನೆಲೆ, ಶನಿವಾರ ಪಟ್ಟಣದಲ್ಲಿ ಮಾದಿಗ ಮತ್ತು ಚಲವಾದಿ ಸಮುದಾಯದವರಿಂದ ಸಂಭ್ರಮಾಚರಣೆ ನಡೆಯಿತು.
ಹಿರಿಯ ಮುಖಂಡ ಜಿ.ಎಚ್. ಶಂಭುಲಿಂಗಪ್ಪ ಮಾತನಾಡಿ, ದಲಿತ ಎಡಗೈ ಮತ್ತು ಬಲಗೈ ಸಮುದಾಯಗಳಿಗೆ ತಲಾ ಶೇ.5.25 ಹಾಗೂ ಇತರೆ ವರ್ಗಗಳಿಗೆ ಶೇ. 4.5ರಂತೆ ಮೀಸಲಾತಿ ಹಂಚಿಕೆ ಮಾಡಿ ಸರ್ಕಾರ ಒಳಮೀಸಲಾತಿ ಗೊಂದಲ ಪರಿಹರಿಸಿದೆ. ಆದರೆ ಈ ಹಂಚಿಕೆಯಲ್ಲಿ ಮಾದಿಗ ಸಮುದಾಯಕ್ಕೆ ಅನ್ಯಾಯವಾಗಿದೆ. ಅನಿವಾರ್ಯವಾಗಿ ಒಪ್ಪಿಕೊಳ್ಳುವ ಪರಿಸ್ಥಿತಿ ಬಂದಿದೆ. ಮುಂದೆಯೂ ನ್ಯಾಯಕ್ಕಾಗಿ ಹೋರಾಟ ಮುಂದುವರಿಸಲಾಗುವುದು ಎಂದು ತಿಳಿಸಿದರು.
ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಗೌರಿಪುರ ಕುಬೇಂದ್ರಪ್ಪ ಮಾತನಾಡಿ, ಚಿತ್ರದುರ್ಗ ಸಮಾವೇಶದಲ್ಲಿ ವಿವಿಧ ಜಾತಿಗಳ ಒಕ್ಕೂಟ ಒಳಮೀಸಲಾತಿಗೆ ಒಪ್ಪಿಗೆ ನೀಡಿರುವುದು ಹೋರಾಟಕ್ಕೆ ಬಲ ನೀಡಿತು. ಸುಪ್ರೀಂಕೋರ್ಟ್ ಅನುಮತಿ ನೀಡಿದ ಬಳಿಕ ಕೂಡ ತಕ್ಷಣ ಜಾರಿಗೆ ತರದ ಸರ್ಕಾರದ ವಿರುದ್ಧ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ರಾಜ್ಯದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ಮಾದಿಗ ಸಮುದಾಯಕ್ಕೆ ಸಮಾನ ಮೀಸಲಾತಿ ನೀಡಿರುವುದು ಅನ್ಯಾಯ. ಕಡಿಮೆ ಜನಸಂಖ್ಯೆಯ ಚಲವಾದಿ ಸಮುದಾಯ ಯಾವುದೇ ಹೋರಾಟವಿಲ್ಲದೇ ಲಾಭ ಪಡೆಯುತ್ತಿದೆ ಎಂದರು.ಚಲವಾದಿ ಸಮುದಾಯದ ಮುಖಂಡ ನಾಗಲಿಂಗಪ್ಪ ಮಾತನಾಡಿ, ಬಲಗೈ ಸಮುದಾಯದ ಜೊತೆಗೆ ಕೊಲೊಂಬಿಯ ಸಮುದಾಯವನ್ನು ಸೇರಿಸಿರುವುದು ತಮ್ಮ ಸಮುದಾಯಕ್ಕೆ ಅನ್ಯಾಯವಾಗಿದೆ. ನ್ಯಾಯಯುತ ಪಾಲಿನ ಮೀಸಲಾತಿ ಮತ್ತು ಸೌಲಭ್ಯಗಳು ಕಮ್ಮಿಯಾಗುವ ಸಾಧ್ಯತೆ ಇದೆ ಎಂದು ಆಕ್ಷೇಪಿಸಿದರು.
- - -