ಧಾರವಾಡ ತಾಲೂಕು ಬರಪೀಡಿತವೆಂದು ಘೋಷಿಸಿ

KannadaprabhaNewsNetwork |  
Published : Sep 19, 2026, 02:00 AM IST
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಅಮೃತ ದೇಸಾಯಿ ಮಾತನಾಡಿದರು.  | Kannada Prabha

ಸಾರಾಂಶ

ಈ ಬಾರಿ ರಾಜ್ಯದಲ್ಲಿ ಮುಂಗಾರು ವಿಫಲವಾಗಿದ್ದು ಧಾರವಾಡ ಸಹ ಹೊರತಾಗಿಲ್ಲ. ಸೆಪ್ಟಂಬರ್‌ ಬಂದರೂ ಮಳೆಯ ಸೂಚನೆ ಇಲ್ಲ. ವಿಪರೀತ ಬಿಸಿಲಿನ ವಾತಾವರಣ ಇದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಧಾರವಾಡ:

ಮುಂಗಾರು ಮಳೆ ವೈಫಲ್ಯದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು ಧಾರವಾಡ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ಪ್ರತಿ ಎಕರೆಗೆ ₹ 50 ಸಾವಿರ ಪರಿಹಾರ ನೀಡಬೇಕೆಂದು ಮಾಜಿ ಶಾಸಕ ಅಮೃತ ದೇಸಾಯಿ ಆಗ್ರಹಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ರಾಜ್ಯದಲ್ಲಿ ಮುಂಗಾರು ವಿಫಲವಾಗಿದ್ದು ಧಾರವಾಡ ಸಹ ಹೊರತಾಗಿಲ್ಲ. ಸೆಪ್ಟಂಬರ್‌ ಬಂದರೂ ಮಳೆಯ ಸೂಚನೆ ಇಲ್ಲ. ವಿಪರೀತ ಬಿಸಿಲಿನ ವಾತಾವರಣ ಇದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮುಂಗಾರು ಹಂಗಾಮು ಮಳೆ ಕೊರತೆಯಿಂದ ವಿಫಲವಾಗಿದೆ. ರೈತರು ಮಾಡಿದ ಖರ್ಚು ಕೈಗೆ ಬರದ ಸ್ಥಿತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಧಾರವಾಡ ತಾಲೂಕನ್ನು ಬರಪೀಡಿತ ತಾಲೂಕಾಗಿ ಘೋಷಿಸಿ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಅನೇಕ ತಿಂಗಳಿಂದ ಪಿಂಚಣಿ ಹಣ ಬರದೆ ವೃದ್ಧರು, ವಿಧವೆಯರು, ಅಂಗವಿಕಲರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರೆಲ್ಲರೂ ನಿತ್ಯ ಕಚೇರಿಗೆ ಅಲೆಯುವಂತೆ ಆಗಿದೆ ಎಂದ ಸರ್ಕಾರದ ಕಾರ್ಯವೈಖರಿ ವಿರುದ್ಧ ಕಿಡಿಕಾರಿದ ಅವರು, ಹೊಸವಾಳದಲ್ಲಿ 270 ಎಕರೆ ಬಿ ಖರಾಬ್‌ ಜಮೀನಿದ್ದು ಅದನ್ನು ಉಳುವವನೇ ಭೂಮಿಯ ಒಡೆಯ ಕಾಯ್ದೆಯಡಿ ರೈತರಿಗೆ ನೀಡಿದ್ದು ಅವರು ಉಳುಮೆ ಮಾಡುತ್ತಿದ್ದಾರೆ. ಆದರೆ, ಇದೀಗ ಆ ಭೂಮಿಯನ್ನು ಕೈಗಾರಿಕಾ ಕಾರಿಡಾರ್‌ ಅಡಿ ಭೂಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ. ಆದರೆ, ಅದಕ್ಕೆ ಪರಿಹಾರ ನೀಡಲು ಆಗುವುದಿಲ್ಲ ಎಂದಿರುವುದು ಯಾವ ನ್ಯಾಯವೆಂದು ಸರ್ಕಾರವನ್ನು ಪ್ರಶ್ನಿಸಿದರು.

ಹೊಸವಾಳ ಪ್ರಕರಣದ ಕುರಿತು ಈ ಹಿಂದೆ ತಹಸೀಲ್ದಾರ್‌ ಸಚ್ಚಿದಾನಂದ ಅವರೊಂದಿಗೆ ಮಾತನಾಡಿದಾಗ ಅವರು ಈ ಹಿಂದಿನ ಅಧಿಕಾರಿಗಳು ತಪ್ಪು ಮಾಡಿದ್ದಾರೆ. ಬ ಖರಾಬ ಜಮೀನು ಶೇತ್ಕಿ ಮಾಡಲು ಬರುವುದಿಲ್ಲ ಎಂದು ಹೇಳಿದ್ದರು. ಆದರೆ, ಇದೀಗ ಆತನೇ ಬ ಖರಾಬ ಜಮೀನು ಶೇತ್ಕಿ ಮಾಡಲು ₹ 50 ಲಕ್ಷ ಲಂಚ ಪಡೆಯುವಾಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ ಎಂದು ಕಿಡಿಕಾರಿದರು.

ರೈತರಿಗೆ ನೆರವಾಗುವಂತೆ ಕೇಳಿದಾಗ ನಾನು ಬಹಳ ಹಣ ಕೊಟ್ಟು ಇಲ್ಲಿಗೆ ಬಂದಿದ್ದೇನೆ ಎಂದಿದ್ದ ಆತ ಆ ಹಣ ಪಡೆಯಲು ಲಂಚ ತೆಗೆದುಕೊಳ್ಳುತ್ತಿದ್ದಾನಾ? ಎಂದು ಪ್ರಶ್ನಿಸಿದ ದೇಸಾಯಿ, ಧಾರವಾಡಕ್ಕೆ ಬರಲು ಶಿಫಾರಸು ನೀಡಿದವರನ್ನು ಸಹ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು.

ಹೊಸವಾಳು ಗ್ರಾಮಸ್ಥರ ಮೇಲೆ ಸರ್ಕಾರಿ ಅಧಿಕಾರಿಗಳು ಗೂಂಡಾಗಿರಿ ಮಾಡುತ್ತಿದ್ದಾರೆ. ಪರಿಹಾರ ಸಿಗುವವರೆಗೆ ನಾವು ಭೂಮಿ ಕೊಡುವುದಿಲ್ಲವೆಂದು ರೈತರು ಹೇಳುತ್ತಿದ್ದು, ಅವರ ಹೋರಾಟಕ್ಕೆ ನಮ್ಮ ಬೆಂಬಲ ಇರಲಿದೆ. ಅಲ್ಲಿ ಯಾವುದೇ ಅಭಿವೃದ್ಧಿಗೆ ನಾವು ಬಿಡುವುದಿಲ್ಲ. ಕೆಐಎಡಿಬಿಯು ಸಂಪೂರ್ಣವಾಗಿ ಪರಿಹಾರ ನೀಡಿದ ಬಳಿಕ ಕೆಲಸ ಆರಂಭಿಸಬೇಕು ಎಂದರು.

ಸರ್ಕಾರಿ ಕೆಲಸ ಮಾಡಿಸಿಕೊಳ್ಳಲು ಯಾರೂ ₹ 10 ಸಹ ಕೊಡಬೇಕಿಲ್ಲ, ಅಧಿಕಾರಿಗಳು ತೆಗೆದುಕೊಳ್ಳುವಂತಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದ್ದರು. ಅವರ ಹೇಳಿಕೆ ವೈರಲ್‌ ಸಹ ಆಗಿತ್ತು. ಆದರೆ, ಇದೀಗ ₹ 10, ₹ 20 ಅಲ್ಲ ಲಕ್ಷ, ಕೋಟಿ ಲೆಕ್ಕಾಚಾರದಲ್ಲಿ ಲಂಚ ಕೊಡಬೇಕಿದೆ ಎಂದು ಧಾರವಾಡ ತಹಸೀಲ್ದಾರ್‌ ಪ್ರಕರಣವನ್ನು ಉಲ್ಲೇಖಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕಿ ಸೀಮಾ ಮಸೂತಿ, ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗದ, ಮುಖಂಡರಾದ ಶಂಕರ ಕೋಮಾರದೇಸಾಯಿ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಕ್ರಮ ವಹಿಸಿ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್
ದಸರಾ ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಿ: ಬಿ.ಬಿ. ಅಸೂಟಿ