- ಸಿಐಟಿಯು ನೇತೃತ್ವದಲ್ಲಿ ಬಿಲ್ ಕಲೆಕ್ಟರ್, ಕ್ಲರ್ಕ್, ಡೇಟಾ ಎಂಟ್ರಿ ಆಪರೇಟರ್, ನೀರುಗಂಟಿ, ಜವಾನ, ಸ್ವಚ್ಛತಾಗಾರರ ಪ್ರತಿಭಟನೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ ರಾಜ್ಯದ ಗ್ರಾಮ ಪಂಚಾಯಿತಿ ಕರ ವಸೂಲಿಗಾರರು, ಕ್ಲರ್ಕ್, ಡೇಟಾ ಎಂಟ್ರಿ ಆಪರೇಟರ್, ನೀರುಗಂಟಿ, ಜವಾನ, ಸ್ವಚ್ಛತಾಗಾರರನ್ನು ಏಕಕಾಲಕ್ಕೆ ಅನುಮೋದನೆ ಮಾಡಿ, ಸರ್ಕಾರಿ ನೌಕರರೆಂದು ಘೋಷಿಸುವುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ಸಿಐಟಿಯು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಗ್ರಾಪಂ ನೌಕರರು ಪ್ರತಿಭಟಿಸಿದರು.
ಸಂಘಟನೆ ಮುಖಂಡರು ಮಾತನಾಡಿ, ಗ್ರಾಪಂ ಸಿಬ್ಬಂದಿಗೆ ಪಂಚಾಯಿತಿ ವಸೂಲಾತಿಯ ಶೇ.40ರ ಅನುದಾನದಲ್ಲಿ ವೇತನ ಹಾಗೂ ಕಂದಾಯ ಉಪಕರಗಳನ್ನು ಪ್ರತಿ ತಿಂಗಳು ಪಾವತಿಸಲು ಅನುಕೂಲ ಆಗುವಂತೆ ಪ್ರತ್ಯೇಕ ಖಾತೆ ತೆರೆಯಲು ಗ್ರಾಪಂಗಳಿಗೆ ನಿರ್ದೇಶನ ನೀಡಬೇಕು. ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಜೀವನ ನಡೆಸುವುದೇ ಕಷ್ಟವಾಗಿದೆ. ಕನಿಷ್ಠ ವೇತನ ₹31 ಸಾವಿರ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ಗ್ರಾಪಂಗಳಲ್ಲಿ ಕೆಲಸ ಮಾಡುವ ನೌಕರರಿಗೆ ನಿವೃತ್ತಿ ಅಥವಾ ಮರಣ ಹೊಂದಿದರೆ ಅಂತಹವರು ಮತ್ತು ಅವಲಂಬಿತರಿಗೆ ಪ್ರತಿ ತಿಂಗಳು ಕನಿಷ್ಠ 6 ಸಾವಿರ ಪಿಂಚಣಿ ವ್ಯವಸ್ಥೆ ಜಾರಿಗೆ ತರಬೇಕು. ಗ್ರಾಪಂಗಳಲ್ಲಿ ಕಾರ್ಯನಿರ್ವಹಿಸುವವರಿಗೆ ವರ್ಗಾವಣೆಗೆ ಅವಕಾಶ ನೀಡಬೇಕು. ಗ್ರಾಮ ಪಂಚಾಯಿತಿಗಳಲ್ಲಿ 2ನೇ ಡೇಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅವಕಾಶ ನೀಡಿದ್ದು ಸ್ವಾಗತಾರ್ಹ. ಆದರೆ, ಈಗಾಗಲೇ ಗ್ರಾಪಂಗಳಲ್ಲಿ ಹೆಚ್ಚುವರಿ ಕಾರ್ಯನಿರ್ವಹಿಸುವ ಡೇಟಾ ಎಂಟ್ರಿ ಆಪರೇಟರ್ ನೇಮಕ ಮಾಡಿಕೊಂಡು, ಮುಂದುವರಿಸಬೇಕು ಎಂದು ಆಗ್ರಹಿಸಿದರು.ಈಗಾಗಲೇ ಗ್ರಾಪಂಗಳಲ್ಲಿ ಕೆಲಸ ನಿರ್ವಹಿಸುವ ನೌಕರರ ಕಂಪ್ಯೂಟರ್ ಜ್ಞಾನ, ವಿದ್ಯಾರ್ಹತೆ ಹೊಂದಿದ್ದರೆ ಅಂತಹವರಿಗೆ ಅವಕಾಶ ನೀಡಬೇಕು. ಬೆಲೆ ಏರಿಕೆಗೆ ಅನುಗುಣವಾಗಿ ಕನಿಷ್ಠ ₹31 ಸಾವಿರ ಕನಿಷ್ಠ ವೇತನ ನೀಡಬೇಕು. ನೀರುಗಂಟಿಗಳಿಗೆ ಮಲ್ಟಿಪರ್ಪಸ್ ಎಂದಿರುವುದನ್ನು ಕೈಬಿಟ್ಟು, ನಿರ್ದಿಷ್ಟ ಕೆಲಸ ಮಾತ್ರ ನಿಗದಿಪಡಿಸಬೇಕು. ಗ್ರಾಪಂ ಸಿಬ್ಬಂದಿಗೆ ಇ-ಹಾಜರಾತಿ ಲೋಪದೋಷ ಪಂಚತಂತ್ರದಲ್ಲಿ ಸರಿಪಡಿಸುವರೆಗೆ ಸಿಬ್ಬಂದಿಗೆ ಪೂರ್ಣವೇತನ ಪಾವತಿಸಬೇಕು ಎಂದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಮಂಜುನಾಥ, ರಾಜೇಶ್ವರಿ, ಬಸವರಾಜ, ಮಂಜಪ್ಪ, ಓಂಕಾರಪ್ಪ ಇತರರು ಪ್ರತಿಭಟನೆಯಲ್ಲಿದ್ದರು.
* ಬೇಡಿಕೆಗಳೇನೇನು? - ಆದಾಯಕ್ಕೆ ಅನುಗುಣವಾಗಿ ಕರ ವಸೂಲಿಗಾರರ ಹುದ್ದೆ ನಿಗದಿಗೊಳಿಸಬೇಕು, ಪ್ರತಿ ಗ್ರಾಪಂಗೆ ಲೆಕ್ಕ ಸಹಾಯಕ ಹುದ್ದೆ ಸೃಷ್ಟಿಸಬೇಕು
- ಗ್ರೇಡ್-1 ಗ್ರಾಪಂ ಜನಸಂಖ್ಯೆಗೆ ಆದರಿಸಿ ಮೇಲ್ದರ್ಜೆಗೇರಿಸಬೇಕು. ಪಿಡಿಒ ಹುದ್ದೆಗೆ ಶೇ.60 ಸ್ಥಾನ ಗ್ರೇಡ್-1 ಕಾರ್ಯದರ್ಶಿಗೆ ನೀಡಬೇಕು.
- ತೀವ್ರ ಅನಾರೋಗ್ಯಕ್ಕೆ ತುತ್ತಾದ ನೌಕರರಿಗೆ ಆಸ್ಪತ್ರೆ ವೆಚ್ಚ ಭರಿಸಬೇಕು.
- ಬಿಲ್ ಕಲೆಕ್ಟ್ ಮತ್ತು ಗುಮಾಸ್ತ ವೃಂದದಿಂದ ಗ್ರೇಡ್-2 ಕಾರ್ಯದರ್ಶಿ, ಲೆಕ್ಕ ಸಹಾಯಕ ಹುದ್ದೆಗೆ ನೇಮಕಗೊಂಡ ನೌಕರರಿಗೆ ಕೆಸಿಎಸ್‌ಆರ್ 325 ನಿಯಮಾನುಸಾರ ಹಿಂದಿನ ಸೇವೆ ಪರಿಗಣಿಸಿ ಹಳೆ ಪಿಂಚಣಿ ಜಾರಿ ಮಾಡಬೇಕು
ಸರ್ಕಾರಿ ನೌಕರರೆಂದು ಘೋಷಿಸುವಂತೆ ಒತ್ತಾಯಿಸಿ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ಸಿಐಟಿಯು ನೇತೃತ್ವದಲ್ಲಿ ಗ್ರಾಪಂ ನೌಕರರು ದಾವಣಗೆರೆ ಜಿಪಂ ಕಚೇರಿ ಎದುರು ಪ್ರತಿಭಟಿಸಿದರು.