ಭತ್ತ, ಮೆಕ್ಕೆಗೆ ಬೆಂಬೆಲೆ ಘೋಷಿಸಿ, ಖರೀದಿ ಕೇಂದ್ರ ಸ್ಥಾಪಿಸಿ

KannadaprabhaNewsNetwork |  
Published : Nov 22, 2025, 01:30 AM IST
21ಕೆಡಿವಿಜಿ1, 2-ಬತ್ತಕ್ಕೆ 3500 ರು., ಮೆಕ್ಕೆಜೋಳಕ್ಕೆ 3 ಸಾವಿರ ರು. ಬೆಂಬಲ ಬೆಲೆ ಘೋಷಿಸಿ, ಖರೀದಿ ಕೇಂದ್ರ ಸ್ಥಾಪಿಸುವಂತೆ ಒತ್ತಾಯಿಸಿ ದಾವಣಗೆರೆಯಲ್ಲಿ ಶುಕ್ರವಾರ ಎಐಕೆಕೆಎಂಎಸ್‌ ಪ್ರತಿಭಟಿಸುತ್ತಿರುವುದು. | Kannada Prabha

ಸಾರಾಂಶ

ಭತ್ತಕ್ಕೆ ₹3500, ಮೆಕ್ಕೆಜೋಳಕ್ಕೆ ₹3 ಸಾವಿರ ಬೆಂಬಲ ಬೆಲೆ ನಿಗದಿಪಡಿಸಿ, ತಕ್ಷಣವೇ ಖರೀದಿ ಕೇಂದ್ರ ಸ್ಥಾಪಿಸುವ ಮೂಲಕ ಬೆಳೆ ಖರೀದಿ ಪ್ರಕ್ರಿಯೆ ಕೈಗೊಳ್ಳುವಂತೆ ಒತ್ತಾಯಿಸಿ ಎಐಕೆಕೆಎಂಎಸ್ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದಲ್ಲಿ ಶುಕ್ರವಾರ ರೈತರು ಪ್ರತಿಭಟಿಸಿದ್ದಾರೆ.

- ಕುರ್ಚಿ ಕಾದಾಟ ಬಿಟ್ಟು ರೈತರ ರಕ್ಷಿಸಿ: ಪ್ರತಿಭಟನೆಯಲ್ಲಿ ಎಐಕೆಕೆಎಂಎಸ್‌ನ ಮಧು ತೊಗಲೇರಿ ಒತ್ತಾಯ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಭತ್ತಕ್ಕೆ ₹3500, ಮೆಕ್ಕೆಜೋಳಕ್ಕೆ ₹3 ಸಾವಿರ ಬೆಂಬಲ ಬೆಲೆ ನಿಗದಿಪಡಿಸಿ, ತಕ್ಷಣವೇ ಖರೀದಿ ಕೇಂದ್ರ ಸ್ಥಾಪಿಸುವ ಮೂಲಕ ಬೆಳೆ ಖರೀದಿ ಪ್ರಕ್ರಿಯೆ ಕೈಗೊಳ್ಳುವಂತೆ ಒತ್ತಾಯಿಸಿ ಎಐಕೆಕೆಎಂಎಸ್ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದಲ್ಲಿ ಶುಕ್ರವಾರ ರೈತರು ಪ್ರತಿಭಟಿಸಿದರು.

ನಗರದ ಶ್ರೀ ಜಯದೇವ ವೃತ್ತದಿಂದ ಉಪವಿಭಾಗಾಧಿಕಾರಿ ಕಚೇರಿವರೆಗೆ ಘೋಷಣೆಗಳನ್ನು ಕೂಗುತ್ತ ತೆರಳಿದ ರೈತರು ಎಸಿ ಕಚೇರಿ ಅಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗೆ ಮನವಿ ಅರ್ಪಿಸಿದರು.

ಸಂಘಟನೆ ಜಿಲ್ಲಾಧ್ಯಕ್ಷ ಮಧು ತೊಗಲೇರಿ ಮಾತನಾಡಿ, ಮುಖ್ಯಮಂತ್ರಿ ಕುರ್ಚಿ ಕಾದಾಟದಲ್ಲಿ ರಾಜ್ಯ ಸರ್ಕಾರ ಅನ್ನದಾತರು, ಕಾರ್ಮಿಕರು, ಶ್ರಮಿಕರು, ಜನಸಾಮಾನ್ಯರ ಹಿತವನ್ನೇ ಕಡೆಗಣಿಸುತ್ತಿರುವಂತೆ ಕಾಣುತ್ತಿದೆ. ರೈತರು ಬೆಳೆಗಳು ಕೊಯ್ಲಿಗೆ ಬಂದಿದ್ದರೂ ಇನ್ನೂ ಬೆಂಬಲ ಬೆಲೆ ಘೋಷಣೆ ಮಾಡಿಲ್ಲ. ಬೆಂಬಲ ಬೆಲೆ ಇಲ್ಲದ ಕಾರಣಕ್ಕೆ ವರ್ತಕರು, ದಲಾಲರು ಹೆಣೆದ ಬೆಲೆ ಕುಸಿತ ಜಾಲದಲ್ಲಿ ನಲುಗುತ್ತಿದ್ದಾರೆ ಎಂದರು.

ತಕ್ಷಣವೇ ಬೆಂಬಲ ಬೆಲೆ ಘೋಷಿಸಿ, ಖರೀದಿ ಕೇಂದ್ರ ಸ್ಥಾಪಿಸುವ ಕೆಲಸ ರಾಜ್ಯ ಸರ್ಕಾರ ಮಾಡಲಿ. ಭತ್ತಕ್ಕೆ ₹3500, ಮೆಕ್ಕೆಜೋಳಕ್ಕೆ ₹3 ಸಾವಿರ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಮೆಕ್ಕೆ, ಭತ್ತ ಮುಂಗಾರಿನ ಆರಂಭಿಕ ಹಂತದಲ್ಲೇ ಉತ್ತಮವಾಗಿದ್ದ ಬೆಲೆ ಈಗ ಬಹಳಷ್ಟು ಕುಸಿದಿದೆ. ರೈತರ ಉತ್ಪಾದನಾ ವೆಚ್ಚಗಳು ಹೆಚ್ಚಾಗಿದ್ದರೂ ಕಡಿಮೆ ಬೆಲೆಗೆ ಬೆಳೆಗಳ ಖರೀದಿಯಿಂದ ಅನ್ನದಾತರಲ್ಲಿ ನಷ್ಟದ ಆತಂಕ ಹೆಚ್ಚುತ್ತಿದೆ ಎಂದು ಹೇಳಿದರು.

ಸರಿಯಾದ ಕಾಲಕ್ಕೆ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡದಿರುವುದು, ಖರೀದಿ ಕೇಂದ್ರ ಸ್ಥಾಪಿಸದ್ದರಿಂದ ರೈತರು ಆರ್ಥಿಕ ಶೋಷಣೆಗೊಳಗಾಗುತ್ತಿದ್ದಾರೆ. ಖಾಸಗಿ ವ್ಯಾಪಾರಸ್ಥರಿಗೆ ಸರ್ಕಾರದ ಇಂತಹ ನೀತಿ, ಧೋರಣೆಯಿಂದಾಗಿ ಅನುಕೂಲವಾಗುತ್ತಿದೆ. ಭತ್ತ ಕಟಾವು ಯಂತ್ರಗಳ ಮಾಲೀಕರು ಸಹ ರೈತರ ಇಂತಹ ಸಂಕಷ್ಟದ ಪರಿಸ್ಥಿತಿ ಬಳಸಿಕೊಂಡು, ಭತ್ತ ಕಟಾವಿಗೆ ಗಂಟೆಗೆ ಅತಿ ಹೆಚ್ಚು ಬೆಲೆ ನಿಗದಿಪಡಿಸುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಸರ್ಕಾರ ಶೀಘ್ರ ಬೆಂಬಲ ಬೆಲೆ ಘೋಷಿಸಿ, ಆರ್ಥಿಕ ಸಂಕಷ್ಟದ ಸುಳಿಯಿಂದ ರೈತರನ್ನು ಪಾರು ಮಾಡಬೇಕು ಎಂದರು.

ರಾಜ್ಯಾದ್ಯಂತ ನಿರಂತರ ಮಳೆಯಿಂದಾಗಿ ಸಾಕಷ್ಟು ಭತ್ತ, ಮೆಕ್ಕೆಜೋಳ ಇತರೆ ಬೆಳೆಗಳು ನಷ್ಟವಾಗಿದೆ. ಅಂತಹ ಕಡೆಗಳಲ್ಲಿ ವ್ಯಾಪಾರ ಸಮೀಕ್ಷೆ ಕೈಗೊಂಡು ಬೆಳೆ ಹಾನಿ ಪರಿಹಾರ ವಿತರಿಸಬೇಕು. ಖರೀದಿ ಕೇಂದ್ರದ ಮೂಲಕ ಸರ್ಕಾರವೇ ಭತ್ತ, ಮೆಕ್ಕೆಜೋಳ ಖರೀದಿಸಬೇಕು. ಭತ್ತ ಮತ್ತು ಮೆಕ್ಕೆಜೋಳ ಖರೀದಿಗೆ ಆವರ್ತ ನಿಧಿಯನ್ನು ರಾಜ್ಯ ಸರ್ಕಾರ ಸ್ಥಾಪಿಸಬೇಕು ಎಂದು ಮಧು ತೊಗಲೇರಿ ಆಗ್ರಹಿಸಿದರು.

ಸಂಘಟನೆ ಮುಖಂಡರಾದ ನಾಗಸ್ಮಿತ, ಬಸವರಾಜಪ್ಪ ನೀರ್ಥಡಿ, ನಾಗರಾಜ ರಾಮಗೊಂಡನಹಳ್ಳಿ, ರಾಜು, ಸತೀಶ ಕೈದಾಳೆ, ಯಲ್ಲಪ್ಪ ದ್ಯಾಮೇನಹಳ್ಳಿ, ಲೋಕೇಶ ನೀರ್ಥಡಿ, ಬೀರಲಿಂಗಪ್ಪ, ಜಂಪಣ್ಣ ಗುಡಾಳ್, ತಿಪ್ಪೇಶ, ರಾಜಪ್ಪ ನಲ್ಕುಂದಡ, ಜಯಪ್ಪ ಇತರರು ಇದ್ದರು.

- - -

(ಕೋಟ್‌) ಭತ್ತ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ ₹2 ಸಾವಿರಕ್ಕಿಂದ ಹೆಚ್ಚು ಬೆಲೆ ನಿಗದಿಪಡಿಸಿದ್ದಾರೆ. ಬೆಲೆ ನಿಗದಿಪಡಿಸಬೇಕಿದ್ದ ಜಿಲ್ಲಾಡಳಿತ ಸಹ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇನ್ನಾದರೂ ಭತ್ತ ಕಟಾವು ಯಂತ್ರ ಮಾಲೀಕರ ಸುಲಿಗೆಗೆ ಜಿಲ್ಲಾಡಳಿತ ಕಡಿವಾಣ ಹಾಕಬೇಕು.

- ಮಧು ತೊಗಲೇರಿ, ರೈತ ಮುಖಂಡ.

- - -

-21ಕೆಡಿವಿಜಿ1, 2:

ಭತ್ತಕ್ಕೆ ₹3500, ಮೆಕ್ಕೆಜೋಳಕ್ಕೆ ₹3 ಸಾವಿರ ಬೆಂಬಲ ಬೆಲೆ ಘೋಷಿಸಿ, ಶೀಘ್ರ ಖರೀದಿ ಕೇಂದ್ರ ಸ್ಥಾಪಿಸಲ ಒತ್ತಾಯಿಸಿ ದಾವಣಗೆರೆಯಲ್ಲಿ ಶುಕ್ರವಾರ ಎಐಕೆಕೆಎಂಎಸ್‌ ನೇತೃತ್ವದಲ್ಲಿ ರೈತರು ಪ್ರತಿಭಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ