ಹಾವೇರಿ: ಜಿಲ್ಲೆಯನ್ನು ಸಂಪೂರ್ಣ ಬರ ಪೀಡಿತ ಎಂದು ಘೋಷಿಸಬೇಕು. ಬೆಳೆ ಸಾಲ ಮನ್ನಾ ಮಾಡಬೇಕು, ಬೆಳೆ ವಿಮೆ ಗೊಂದಲ ನಿವಾರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಮಂಗಳವಾರ ನಗರದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಹಾವೇರಿ ಜಿಲ್ಲೆ ಈ ವರ್ಷ ಬರಗಾಲಕ್ಕೆ ತುತ್ತಾಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮುಂಗಾರು ಮಳೆಯ ವೈಫಲ್ಯದಿಂದ ಎರಡೆರಡು ಬಾರಿ ಬಿತ್ತನೆ ಮಾಡಿ ಸಾಲಗಾರರಾಗಿದ್ದಾರೆ. ಸರಾಸರಿ ಮಳೆ ಶೇ. 56ರಷ್ಟು ಕಡಿಮೆಯಾಗಿದೆ. ಕೆರೆ-ಕಟ್ಟೆಗಳಲ್ಲಿ ನೀರಿಲ್ಲ, ಕೊಳವೆಬಾವಿಗಳ ಅಂತರ್ಜಲ ಬತ್ತಿಹೋಗಿದೆ. ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ ಎಂದು ಅಸಮಾಧಾನ ಹೊರಹಾಕಿದರು.
ಈ ಹಿನ್ನೆಲೆಯಲ್ಲಿ ಸರ್ಕಾರ ಹಾವೇರಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಿ, ಪ್ರತಿ ಎಕರೆಗೆ 30 ಸಾವಿರ ರು. ಪರಿಹಾರ ನೀಡಬೇಕು. ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಒದಗಿಸಬೇಕು. ಕೃಷಿಯನ್ನೇ ನಂಬಿದ್ದ ರೈತರು, ಎರಡೆರಡು ಬಾರಿ ಬಿತ್ತನೆ ಮಾಡಿದರೂ ಪ್ರಯೋಜನವಾಗದೆ, ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಬ್ಯಾಂಕಿನವರು ನೋಟಿಸ್ ಕೊಟ್ಟು ಹೆದರಿಸುತ್ತಾರೆ. ನೋಟಿಸ್ ಕೊಟ್ಟರೆ ಬ್ಯಾಂಕನ್ನೇ ಲಾಕ್‌ಔಟ್ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡಬೇಕು. ಬೆಳೆವಿಮೆ ಕಂತು ತುಂಬುವ ದಿನಗಳು ಮುಗಿಯುತ್ತಿದ್ದರೂ, ಅಧಿಕಾರಿಗಳು ಸ್ವಯಂ ಘೋಷಣಾ ಪತ್ರದ ನಿಯಮ ಸಡಿಲಿಕೆ ಮಾಡುತ್ತಿಲ್ಲ. ಈ ಕೂಡಲೇ ನಿಯಮ ಸಡಿಕೆ ಮಾಡುವಂತೆ ಆಗ್ರಹಿಸಿದರು.ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ ಎಲ್., ಮನವಿ ಸ್ವೀಕರಿಸಿದರು. ಜಂಟಿ ಕೃಷಿ ನಿರ್ದೇಶಕ ಮಲ್ಲಿಕಾರ್ಜುನ ಕೆ., ತೋಟಗಾರಿಕೆ ಇಲಾಖೆಯ ಡಿಡಿ ಸಂತೋಷ, ಬಸವರಾಜ, ಹೆಸ್ಕಾಂ ಎಂಜಿನಿಯರ್ ಕಳ್ಳಿಮನಿ, ಸಿ.ಬಿ. ಹೊಸಮನಿ, ನೀರಾವರಿ ಇಲಾಖೆ ಅಧಿಕಾರಿಗಳು, ಇನ್ಸೂರೆನ್ಸ್ ಕಂಪನಿಯ ಪ್ರತಿನಿಧಿಗಳು ಭಾಗವಹಿಸಿ ರೈತರ ಸಮಸ್ಯೆಗಳನ್ನು ಆಲಿಸಿದರು. ಹೆಸ್ಕಾಂ ಎಂಜಿನಿಯರ್ ಅವರು, ಏಳು ತಾಸು ವಿದ್ಯುತ್ ಪೂರೈಸಲಾಗುತ್ತಿದೆ. ಅಲ್ಲಲ್ಲಿ ಏನಾದ್ರೂ 6 ತಾಸು ಪೂರೈಕೆಯಾಗುತ್ತಿದ್ದರೆ, ಕೂಲಂಕಷವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಆರೋಪ ಪ್ರತ್ಯಾರೋಪ ಸಲ್ಲದು..
ರೈತ ಭೂಮಿ ನಂಬಿ ಜೀವನ ಮಾಡುತ್ತಿದ್ದಾರೆ. ರೈತರು ಭೂಮಿ ಮಾರಾಟಕ್ಕೆ ಇಟ್ಟಿಲ್ಲ. ಯೂರಿಯಾ ಗೊಬ್ಬರಕ್ಕೆ ಪಾಳೆ ಹಚ್ಚುತ್ತಿದ್ದಾರೆ. ಎಫ್‌ಐಡಿ ಅವೈಜ್ಞಾನಿಕವಾಗಿದೆ. ರೈತ ಕಿಸಾನ್ ಆ್ಯಪ್‌ನ್ನು ರದ್ದು ಮಾಡಬೇಕು. ರೈತರ ಸಾಲಮನ್ನಾ ಮಾಡಬೇಕು. ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಸ್ಥಿತಿ ತಂದುಕೊಳ್ಳಬೇಡಿ ಎಂದು ರಾಜ್ಯ ಸಮಿತಿ ಸದಸ್ಯ ಮಾಲತೇಶ ಪೂಜಾರ ಹೇಳಿದರು.