ದಕ್ಷಿಣ ಭಾರತದಲ್ಲಿ ಸ್ಪಧಾತ್ಮಕ ಪರೀಕ್ಷೆ ಬರೆಯುವವರ ಸಂಖ್ಯೆ ಇಳಿಕೆ: ಟಿ.ಡಿ.ರಾಜೇಗೌಡ

KannadaprabhaNewsNetwork | Published : Dec 24, 2023 1:45 AM

ಸಾರಾಂಶ

ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಲ್ಲಿ ಉತ್ತರ ಭಾರತದವರೇ ಹೆಚ್ಚಿದ್ದು, ದಕ್ಷಿಣ ಭಾರದ ವಿದ್ಯಾರ್ಥಿಗಳು ಹೆಚ್ಚು ಆಸಕ್ತಿವಹಿಸುತ್ತಿಲ್ಲ ಎಂದು ಶಾಸಕ ರಾಜೇಗೌಡ ತಿಳಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ಹಾಗೂ ವಿವಿಧ ವೇದಿಕೆಗಳ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಉತ್ತರ ಭಾರತದ ವಿದ್ಯಾರ್ಥಿಗಳು ಹೆಚ್ಚಾಗಿ ಐಎಎಸ್‌ ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಪಾಸಾಗುತ್ತಿದ್ದು ದಕ್ಷಿಣ ಭಾರತ ರಾಜ್ಯಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಕಳವಳ ವ್ಯಕ್ತಪಡಿಸಿದರು.

ಶನಿವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ, ಸಾಂಸ್ಕೃತಿಕ, ರಾ.ಸೇ.ಯೋಜನೆ ಹಾಗೂ ವಿವಿಧ ವೇದಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು. ಉತ್ತರ ರಾಜ್ಯಗಳಿಗಿಂತ ದಕ್ಷಿಣ ರಾಜ್ಯಗಳು ಸಂಪದ್ಬರಿತ ರಾಜ್ಯ ವಾಗಿದ್ದರೂ ಇಲ್ಲಿನ ವಿದ್ಯಾರ್ಥಿಗಳು ಐಎಎಸ್‌, ಐಪಿಎಸ್‌ ಮಾಡುತ್ತಿಲ್ಲ. ಭಾರತ ದೇಶದಲ್ಲಿ ಮಂತ್ರಿಗಳು, ಶಾಸಕರು ಹಾಗೂ ಜನಪ್ರತಿನಿಧಿಗಳಿದ್ದರೂ ಬಹುತೇಕ ಆಡಳಿತ ನಡೆಸುವವರು ಅಧಿಕಾರಿಗಳೇ ಆಗಿದ್ದಾರೆ. ಮಲೆನಾಡು ಭಾಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ತರಬೇತಿ ಕೇಂದ್ರ ಪ್ರಾರಂಭಿಸಲು ಚಿಂತನೆ ನಡೆಸುತ್ತೇನೆ ಎಂದರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಸ್ತೆ ದುರಸ್ತಿಗೆ ಹಣ ಮೀಸಲಿಟ್ಟಿದ್ದು ಮುಂದಿನ ಪರೀಕ್ಷೆ ಮುಗಿಯುವುದರೊಳಗೆ ಡಾಂಬರೀಕರಣ ಮಾಡಿಸುತ್ತೇನೆ. ದೊಡ್ಡ ಸಭಾಂಗಣಕ್ಕೆ ಕಾಲೇಜಿನವರು ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ನನ್ನ ಅವಧಿಯಲ್ಲಿ ಹಣ ಬಿಡುಗಡೆ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು. ಸಭೆ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಧನಂಜಯ ಮಾತನಾಡಿ, ಕಳೆದ ಸಾಲಿನಲ್ಲಿ ನ್ಯಾಕ್‌ ತಂಡ ಕಾಲೇಜಿಗೆ ಬಿ.ಪ್ಲಸ್ ಗ್ರೇಡ್ ನೀಡಿದ್ದಾರೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ ಎಂದು ವರದಿ ಮಾಡಿದ್ದಾರೆ. ಇದರಿಂದ 5 ಕೋಟಿ ಅನುದಾನ ತಪ್ಪಿಹೋಗಿ 2 ಕೋಟಿ ಮಾತ್ರ ಬಂದಿದ್ದು ಅದರಲ್ಲಿ ಕೊಠಡಿ ನಿರ್ಮಿಸಿ, ನೆಲಕ್ಕೆ ಗ್ರಾನೈಟ್ ಹಾಕಲಾಗಿದೆ. ತಾಲೂಕಿನ ವಿವಿಧ ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ ಮಾಡಿದ ವಿದ್ಯಾರ್ಥಿಗಳು ಮುಂದೆ ಪದವಿಗೆ ಇದೇ ಕಾಲೇಜಿಗೆ ಬರಬೇಕು ಎಂದು ಮನವಿ ಮಾಡಿದರು. ಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಪ್ರೊ.ಉಮಾ ಶಂಕರ್‌ ವಿಶೇಷ ಉಪನ್ಯಾಸ ನೀಡಿ, ಪ್ರತಿಯೊಬ್ಬ ವಿದ್ಯಾರ್ಥಿ ಸಾಧನೆ ಮಾಡಲು ಆತ್ಮವಿಶ್ವಾಸ ಬೆಳೆಸಿಕೊಂಡು ಮುನ್ನಗ್ಗಬೇಕು. ದೈಹಿಕ ಶಕ್ತಿ ಜೊತೆಗೆ ನೈತಿಕ ಬಲ ಮೈಗೂಡಿಸಿಕೊಳ್ಳಬೇಕು. ಪ್ರತಿ ವಿದ್ಯಾರ್ಥಿಗಳಿಗೂ ತಮಗೆ ಗೊತ್ತಿಲ್ಲದ ಶಕ್ತಿ ಇದೆ. ಅದನ್ನು ಬಳಸಿಕೊಂಡು ಜೀವನ ದಲ್ಲಿ ಮುಂದೆ ಬರಬೇಕು ಎಂದರು.

ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ ಮಾತನಾಡಿ, ಶಾಸಕರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು ಶೃಂಗೇರಿ ಕ್ಷೇತ್ರಕ್ಕೆ ಕೆಪಿಎಸ್‌ ಮಂಜೂರು ಮಾಡಿಸಿಕೊಟ್ಟಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಕಾಲೇಜಿನಿಂದ ಶಾಸಕ ಟಿ.ಡಿ.ರಾಜೇಗೌಡ ಅವರನ್ನು ಸನ್ಮಾನಿಸಲಾಯಿತು.

ಪಪಂ ಸದಸ್ಯೆ ಜುಬೇದ ಮಾತನಾಡಿದರು. ಸಹ ಪ್ರಾಧ್ಯಾಪಕ ಪ್ರೊ.ನಾಗೇಶಗೌಡ, ವಿವಿಧ ವೇದಿಕೆಗಳ ಸಂಚಾಲಕರಾದ ಪ್ರೊ.ಪ್ರಸಾದ್‌, ಪ್ರೊ.ವಿಶ್ವನಾಥ್‌, ಡಾ.ಮಂಜುಶ್ರೀ, ಡಾ.ಲಕ್ಷ್ಮಣನಾಯ್ಕ. ಪ್ರೊ.ಬಿ.ಟಿ.ರೂಪ ಕಾಲೇಜಿನ ಸಾಂಸ್ಕೃತಿಕ ವೇದಿಕೆ ರಾಯಬಾರಿ ಡಾ.ಜೆ.ಮಂಜುನಾಥ್ ಪ್ರೊ.ರುಖಿಯತ್‌ ಇದ್ದರು.

Share this article