ವಿಶೇಷಚೇತನ ಮಕ್ಕಳಿಗೆ ಮಾಡಿದ ಸಹಾಯ ದೇವರಿಗೆ ಸಮರ್ಪಿತ-ಶಾಸಕ ಲಮಾಣಿ

KannadaprabhaNewsNetwork | Published : Feb 26, 2024 1:32 AM

ಸಾರಾಂಶ

ಗ್ರಾಮೀಣ ಹಿಂದುಳಿದ ಮಕ್ಕಳ ಶಿಕ್ಷಣಕ್ಕೆ ಹಾಗೂ ವಿಶೇಷಚೇತನ ಮಕ್ಕಳ ಶಿಕ್ಷಣಕ್ಕೆ ಬಿ.ಡಿ. ತಟ್ಟಿ ಕಿವುಡ ಮತ್ತು ಮೂಗ ಮಕ್ಕಳ ಶಿಕ್ಷಣ ಸಂಸ್ಥೆಯ ಕೊಡುಗೆ ಅಪಾರವಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಲಕ್ಷ್ಮೇಶ್ವರ: ಗ್ರಾಮೀಣ ಹಿಂದುಳಿದ ಮಕ್ಕಳ ಶಿಕ್ಷಣಕ್ಕೆ ಹಾಗೂ ವಿಶೇಷಚೇತನ ಮಕ್ಕಳ ಶಿಕ್ಷಣಕ್ಕೆ ಬಿ.ಡಿ. ತಟ್ಟಿ ಕಿವುಡ ಮತ್ತು ಮೂಗ ಮಕ್ಕಳ ಶಿಕ್ಷಣ ಸಂಸ್ಥೆಯ ಕೊಡುಗೆ ಅಪಾರವಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು. ಶನಿವಾರ ಪಟ್ಟಣದ ಬಿ.ಡಿ. ತಟ್ಟಿ ಮೆಮೋರಿಯಲ್ ಸಂಸ್ಥೆಯಲ್ಲಿ ಬೆಂಗಳೂರಿನ ಸಿದ್ವಿನ್ ಔಟೋಟೆಕ್ ಕಂಪನಿಯು ಕಿವುಡ ಮತ್ತು ಮೂಗ ಮಕ್ಕಳಿಗೆ 15 ಶ್ರವಣ ಸಾಧನ ಸಾಮಗ್ರಿ ಹಾಗೂ 2 ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆ ನೀಡಿದ ಸಂದರ್ಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿಶೇಷಚೇತನ ಮಕ್ಕಳಿಗೆ ಮಾಡುವ ಸಹಾಯ ದೇವರಿಗೆ ಮಾಡಿದ ಪೂಜೆಯಾಗಿದೆ. ಉತ್ತರ ಕರ್ನಾಕದ ಹಿಂದುಳಿದ ಮತ್ತು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸರ್ಕಾರ ಹೆಚ್ಚು ಆದ್ಯತೆ ನೀಡುವ ಮೂಲಕ ಇಲ್ಲಿನ ಮಕ್ಕಳಿಗೆ ಸಿಗಬೇಕಾದ ಮೂಲ ಸೌಲಭ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನಿಸುವುದು ಅಗತ್ಯವಾಗಿದೆ. ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಹಾಗೂ ವಿಶೇಷಚೇತನ ಮಕ್ಕಳಿಗೆ ಬೆಂಗಳೂರಿನ ಖಾಸಗಿ ಕಾರ್ಪೋರೇಟ್ ಕಂಪನಿಗಳು ಒಲವು ತೋರುವ ಮೂಲಕ ಪ್ರಾದೇಶಿಕ ಅಸಮತೋಲನತೆ ಹೋಗಲಾಡಿಸುವ ಕಾರ್ಯ ಮಾಡುವುದು ಅಗತ್ಯವಾಗಿದೆ ಎಂದರು.

ಈ ವೇಳೆ ಸಿದ್ವಿನ್ ಔಟೋಟೆಕ್ ಕಂಪನಿಯ ನಿರ್ದೇಶಕ ಪ್ರವೀಣ ಪವಾಡಶೆಟ್ಟರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ವಿಶೇಷಚೇತನ ಮಕ್ಕಳ ಎಳ್ಗೆಗಾಗಿ ದುಡಿಯುತ್ತಿರುವ ಈ ಶಾಲೆಯ ಕಾರ್ಯ ಶ್ಲಾಘನೀಯ, ಗ್ರಾಮೀಣ ಭಾಗದಲ್ಲಿ ಶ್ರವಣ ನ್ಯೂನ್ಯತೆಯುಳ್ಳ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.

ಈ ವೇಳೆ ಸಿದ್ವಿನ್ ಔಟೋಟೆಕ್ ಮುಖ್ಯಸ್ಥ ಶ್ರೀಕಂಠ ಶರ್ಮಾ ಹಾಗೂ ಬಿ.ಡಿ. ತಟ್ಟಿ ಶಿಕ್ಷಣ ಸಂಸ್ಥೆಯ ನಿರ್ದೇರ್ಶಕ ಸೋಮನಾಥ ಮಹಾಜನಶೆಟ್ಟರ ಹಾಗೂ ಸಿದ್ವಿನ್ ಔಟೋಟೆಕ್ ಎಂಜಿನಿಯರಿಂಗ್ ಸಂಸ್ಥೆಯ ಸಿಬ್ಬಂದಿಗಳು ಹಾಜರಿದ್ದರು.

Share this article