ನರ್ಸಿಂಗ್‌ ಕ್ಷೇತ್ರದಲ್ಲೂ ಸಂಶೋಧನೆ, ಪ್ರಯೋಗಗಳಿಗೆ ಒಡ್ಡಿಕೊಳ್ಳಬೇಕು

KannadaprabhaNewsNetwork | Published : May 4, 2024 12:32 AM

ಸಾರಾಂಶ

ಜೀವವನ್ನು ಉಳಿಸುವ ಜವಾಬ್ದಾರಿ ಶುಶ್ರೂಷಕರ ಮೇಲಿದೆ. ಪೋಷಕರಿಗೆ ತೋರುವ ಕಾಳಜಿ ಮತ್ತು ಆರೈಕೆಯನ್ನೇ ರೋಗಿಗಳ ಮೇಲೂ ತೋರಬೇಕು. ಮಾನವೀಯತೆ, ಕಾರುಣ್ಯ, ಸೇವೆಯೇ ವಿದ್ಯಾರ್ಥಿಗಳ ಗುರಿಯಾಗಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ನರ್ಸಿಂಗ್‌ ಕ್ಷೇತ್ರದಲ್ಲೂ ಬಹುಶಿಸ್ತೀಯ ಕಲಿಕೆಗೆ ಅವಕಾಶವಿದ್ದು, ಸಂಶೋಧನೆ ಹಾಗೂ ಪ್ರಯೋಗಗಳಿಗೆ ಒಡ್ಡಿಕೊಳ್ಳಬೇಕು ಎಂದು ನಿವೃತ್ತ ಮೇಜರ್ ಜನರಲ್ ಎಲಿಜಬೆತ್ ಜಾನ್ ತಿಳಿಸಿದರು

ನಗರದ ಜೆಎಸ್ಎಸ್ ಆಸ್ಪತ್ರೆಯ ಶ್ರೀ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಜೆಎಸ್ಎಸ್ ನರ್ಸಿಂಗ್ ಕಾಲೇಜು ಶುಕ್ರವಾರ ಆಯೋಜಿಸಿದ್ದ ಬೇಸಿಕ್ ಬಿಎಸ್ಸಿ ನರ್ಸಿಂಗ್ 27ನೇ ಬ್ಯಾಚ್ ವಿದ್ಯಾರ್ಥಿಗಳ ಸಮರ್ಪಣಾ ಸಮಾರಂಭವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ವೈದ್ಯಕೀಯ ಕ್ಷೇತ್ರದಲ್ಲಿ ಉದ್ಯೋಗಕ್ಕೆ ಕೊರತೆಯಿಲ್ಲ. ನರ್ಸಿಂಗ್ ಪದವೀಧರರಿಗೆ ದೇಶ ವಿದೇಶದಲ್ಲಿ ಸೇವೆ ಮಾಡಲು ಅವಕಾಶಗಳಿವೆ. ವೈದ್ಯಕೀಯ ಕ್ಷೇತ್ರ ವಿಸ್ತಾರವಾಗಿ ಬೆಳೆದಿದೆ. ಆಸ್ಪತ್ರೆಗಳು ಸ್ಥಾಪನೆಯಾಗುತ್ತಿವೆ. ಹೀಗಾಗಿ, ಜಾಗತಿಕವಾಗಿ ನುರಿತ ಶುಶ್ರೂಷಕರ ಅಭಾವವಿದ್ದು, ವಿದ್ಯಾರ್ಥಿಗಳು ಇದೇ ಕ್ಷೇತ್ರವನ್ನು ಆರಿಸಿಕೊಂಡಿರುವುದು ಸರಿಯಾಗಿದೆ ಎಂದು ಅವರು ಹೇಳಿದರು.

ಜೀವವನ್ನು ಉಳಿಸುವ ಜವಾಬ್ದಾರಿ ಶುಶ್ರೂಷಕರ ಮೇಲಿದೆ. ಪೋಷಕರಿಗೆ ತೋರುವ ಕಾಳಜಿ ಮತ್ತು ಆರೈಕೆಯನ್ನೇ ರೋಗಿಗಳ ಮೇಲೂ ತೋರಬೇಕು. ಮಾನವೀಯತೆ, ಕಾರುಣ್ಯ, ಸೇವೆಯೇ ವಿದ್ಯಾರ್ಥಿಗಳ ಗುರಿಯಾಗಬೇಕು. ವೈದ್ಯರಷ್ಟೇ ಗೌರವ ಶುಶ್ರೂಷಕರಿಗೂ ಸಿಗುತ್ತದೆ. ಅವರು ಕೇವಲ ಒಂದು ವಿಷಯದಲ್ಲಿ ತಜ್ಞರಿರುತ್ತಾರೆ. ಆದರೆ, ಶುಶ್ರೂಷಕರಿಗೆ ಎಲ್ಲಾ ವೈದ್ಯಕೀಯ ವಿಷಯಗಳ ಮೇಲೂ ಜ್ಞಾನ ಇರುತ್ತದೆ ಎಂದರು.

ಶುಶ್ರೂಷಕರಿಗೆ ರೋಗಿಗಳ ನಡುವೆ ಹೆಚ್ಚು ಒಡನಾಟ ಇರುವುದರಿಂದ ಅವರ ಅನುಭವವೂ ದಟ್ಟವಾಗಿರುತ್ತದೆ. ರೋಗಿಗಳ ದೈಹಿಕ ಹಾಗೂ ಮಾನಸಿಕ ಸ್ಥಿತಿಗೆ ಅನುಗುಣವಾಗಿ ಆರೈಕೆ ಮಾಡುವ ಅನುಭವ ಗಳಿಸಿಕೊಳ್ಳಬೇಕು. ಕೆಲಸದ ಒತ್ತಡದ ನಡುವೆ ಶುಶ್ರೂಷಕರು ವೈಯಕ್ತಿಕ ಆರೋಗ್ಯದ ಕಡೆಗೆ ಆದ್ಯತೆ ನೀಡಬೇಕು ಎಂದು ಅವರು ಹೇಳಿದರು.

ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ, ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್. ಮಹೇಶ್, ಜೆಎಸ್ಎಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸಿ.ಪಿ. ಮಧು, ಶುಶ್ರೂಷಕ ಸೇವೆಗಳ ಮುಖ್ಯಸ್ಥೆ ಜಾನೆಟ್ ಮಥೈಯಾಸ್, ಜೆಎಸ್ಎಸ್ ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ಎಂ.ಕೆ. ಅಶ್ವತಿದೇವಿ ಇದ್ದರು.

Share this article