ಜಿಲ್ಲಾ ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆಯಲ್ಲಿ ನ್ಯಾ. ರಾಜೇಶ್ವರಿ ಹೆಗಡೆ ಪ್ರತಿಪಾದನೆ
ಹಲವು ಕ್ಷೇತ್ರಗಳ ಪರಿಣಿತಿ ಬಯಸುವ ವಕೀಲ ವೃತ್ತಿಯಲ್ಲಿ ಅನೇಕ ಸವಾಲುಗಳಿವೆ. ವಕೀಲರು ಸಮಾಜದಲ್ಲಿ ನಿರ್ವಹಿಸಬಹುದಾದ ಕಾರ್ಯಗಳಿಗೆ ಮಿತಿಯಿಲ್ಲ. ವಕೀಲರ ಶ್ರಮ ಮತ್ತು ತ್ಯಾಗಗಳ ಸಮಾಜ ಗುರುತಿಸುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಪ್ರತಿಪಾದಿಸಿದರು.
ನಗರದ ವಕೀಲರ ಸಮುದಾಯ ಭವನದಲ್ಲಿ ಜಿಲ್ಲಾ ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಪರಿಶ್ರಮದ ದುಡಿಮೆ ಇಂದ ಮಾತ್ರ ವಕೀಲ ವೃತ್ತಿಯಲ್ಲಿ ಯಶಸ್ಸುಗಳಿಸಲು ಸಾಧ್ಯ. ಅರ್ಪಣಾ ಮನೋಭಾವ, ವೃತ್ತಿಯ ನೀತಿ ಪಾಲಿಸಬೇಕು. ವಕೀಲರ ಎಲ್ಲಾ ಸಕ್ರಿಯ ಚಟುವಟಿಕೆಗಳಲ್ಲಿ ನ್ಯಾಯಾಂಗದ ಸಹಕಾರ ಇದೆ. ಜಿಲ್ಲಾ ವಕೀಲರ ಸಂಘವು ಹಲವು ಯುವ ವಕೀಲರಿಗಾಗಿ ಉಪಾನ್ಯಾಸ ಕಾರ್ಯಕ್ರಮ ಶ್ಲಾಘನೀಯ ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿ ಮಾತನಾಡಿದ ಹಿರಿಯ ವಕೀಲ ರಾಮಚಂದ್ರ ಕಲಾಲ್, ಪ್ರಜಾಪ್ರಭುತ್ವ ಉಳಿದಿರುವುದು ನಿರ್ಭೀತಯಿಂದ ಕಾರ್ಯನಿರ್ವಹಿಸುತ್ತಿರುವ ನ್ಯಾಯಾಂಗ ಮತ್ತು ನ್ಯಾಯಾವಾದಿಗಳಿಂದ ಎಂಬುದು ನಿರ್ವಿವಾದ. ರಾಜಕಾರಣಿಗಳಿಗೆ ಕಾನೂನಿನ ಅರಿವು ಹೆಚ್ಚಾಗಿ ಇಲ್ಲದಿರುವ ಇಂದಿನ ದಿನಗಳಲ್ಲಿ ಶಾಸನಗಳ ರೂಪಿಸುವಾಗ ಹಿರಿಯ ವಕೀಲರ ಸಲಹೆ ಪಡೆಯುವುದು ಸೂಕ್ತ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣ್‌ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಪ್ರಜಾಪ್ರಭುತ್ವದ ಮೂರು ಅಂಗಗಳಾದ ಶಾಸಕಾಂಗ, ಕಾರ್ಯಂಗ ಮತ್ತು ನ್ಯಾಯಾಂಗ ಸಮರ್ಪಕವಾಗಿ ಕೆಲಸ ಮಾಡುವಲ್ಲಿ ವಕೀಲರ ಪಾತ್ರ ಮಹತ್ವದ್ದಾಗಿದೆ. ಸಂವಿಧಾನ ಸಭೆಯ ಸದಸ್ಯರಾಗಿದ್ದ ಎಚ್.ಸಿದ್ದವೀರಪ್ಪನವರು ನಮ್ಮ ಸಂಘದ ಸದಸ್ಯರಾಗಿದ್ದರು ಎಂಬು ಹೆಮ್ಮೆಯ ಸಂಗತಿ. ತನ್ನ ಸಂಸ್ಥಾಪನೆಯ 75ನೇ ವರ್ಷ ಆಚರಿಸಿಕೊಳ್ಳುತ್ತಿರುವ ಜಿಲ್ಲಾ ವಕೀಲರ ಸಂಘ ಹಲವಾರು ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ ಎಂದು ಹೇಳಿದರು.
ಎಚ್.ಎನ್.ರಾಜಶೇಖರಪ್ಪ, ಹಿರಿಯ ವಕೀಲ