ಕೃಷ್ಣ ಎನ್. ಲಮಾಣಿ
ಹೊಸಪೇಟೆ: ಹಂಪಿ ಉತ್ಸವದ ಲಾಂಛನ ಈಗ ಜನಮನ್ನಣೆ ಗಳಿಸಿದ್ದು, ಸತತ ಮೂರು ಉತ್ಸವಕ್ಕೂ ನಗರದ ಏಳುಕೇರಿ ಹುಡುಗ ದೀಪಕ್ ಬಾಣದ ತಮ್ಮ ಕುಂಚದಲ್ಲಿ ಲಾಂಛನ ಅರಳಿಸಿದ್ದಾರೆ. ವಿಜಯನಗರ ಗತ ವೈಭವ ಸಾರುವ ಉತ್ಸವವನ್ನು ಜನೋತ್ಸವವನ್ನಾಗಿಸಲು ಈ ಲಾಂಛನ ಸಾಕ್ಷೀಕರಿಸುತ್ತಿದೆ.ಫೆಬ್ರವರಿ 28, ಮಾರ್ಚ್1 ಮತ್ತು 2ರಂದು ಮೂರು ದಿನಗಳ ವರೆಗೆ ಹಂಪಿ ಉತ್ಸವ ನಡೆಯಲಿದೆ. ಐತಿಹಾಸಿಕ ಹಿನ್ನೆಲೆ ಹೊಂದಿರುವ ಉತ್ಸವಕ್ಕೆ ಈ ಬಾರಿ ವಿಜಯನಗರ ಜಿಲ್ಲಾಡಳಿತ ಕಲಾವಿದರಿಂದ ಲಾಂಛನದ ಚಿತ್ತಾರಗಳನ್ನು ಆಹ್ವಾನಿಸಿತ್ತು. ಈ ಬಾರಿ 16 ಚಿತ್ತಾರಗಳು ಅಂತಿಮ ಸ್ಪರ್ಧೆಗೆ ಬಂದಿದ್ದವು, ಅಂತಿಮವಾಗಿ ಈ ಬಾರಿಯೂ ದೀಪಕ್ ಬಾಣದ ಅರಳಿಸಿದ ಲಾಂಛನ ಆಯ್ಕೆಗೊಂಡಿದೆ.
ಲಾಂಛನದ ವಿಶೇಷತೆಕರ್ನಾಟಕ ಇತಿಹಾಸದ ಹೆಮ್ಮೆಯ ಗಿರಿ ವಿಜಯನಗರ ಸಾಮ್ರಾಜ್ಯವಾಗಿದೆ. ವಿಜಯನಗರ ಮೇರು ಇತಿಹಾಸ ಬಿಂಬಿಸುವ ಲಾಂಛನದಲ್ಲಿ ಮಧ್ಯದಲ್ಲಿ ಮೂಡಿಬಂದಿರುವ ಕಲ್ಲಿನ ರಥದ ಚಕ್ರವು ನಮ್ಮ ನಾಡಿನ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಅದರಲ್ಲಿಯೇ ವಿಜಯನಗರ ಸಾಮ್ರಜ್ಯದ ಲಾಂಛನವನ್ನು ಚಕ್ರದ ಮಧ್ಯದಲ್ಲಿ ತನ್ನದೇ ಆದ ಶೈಲಿಯಲ್ಲಿ ಚಿತ್ರಿಸಿದ್ದಾರೆ. ಹಂಪಿಯ ಸಪ್ತಸ್ವರಗಳನ್ನು ಹೊರಹೊಮ್ಮಿಸುವ ಕಂಬಗಳನ್ನು ಹಿನ್ನೆಲೆಯಲ್ಲಿ ಬಳಸಿಕೊಂಡಿದ್ದಾರೆ.
ಅಲ್ಲದೇ, ಹಂಪಿಯ ಪ್ರಮುಖ ಸ್ಮಾರಕಗಳಾದ. ಶ್ರೀ ವಿರೂಪಾಕ್ಷ ದೇವಾಲಯದ ಗೋಪುರ, ಸಾಸಿವೆಕಾಳು ಗಣಪ ಹಾಗೂ ಕಮಲ್ ಮಹಲ್ ಅನ್ನು ಸಾಂಕೇತಕವಾಗಿ ಬಳಸಿಕೊಂಡು ಲಾಂಛನವನ್ನು ರಚಿಸಿದ್ದಾರೆ. ಈ ಬಾರಿ ಹಂಪಿ ಉತ್ಸವದ ಅಕ್ಷರಗಳನ್ನು ವಿಭಿನ್ನ ಬಣ್ಣಗಳಿಂದ ಕೂಡಿದ್ದು, ಆಕರ್ಷಣೀಯವಾಗಿದೆ.ವಿಜಯನಗರ ಕಲೆ, ವಾಸ್ತು ಶಿಲ್ಪ ಪ್ರಂಪಚಕ್ಕೆ ಕೈಗನ್ನಡಿಯಾಗಿರುವ ಈ ಲಾಂಛನ ಹಂಪಿ ಉತ್ಸವ-2025ಕ್ಕೆ ಜನರನ್ನು ಆಕರ್ಷಿಸಲು ಸೃಜಿಸಲಾಗಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜನರ ಮೆಚ್ಚುಗೆಗೂ ಪಾತ್ರವಾಗಿದೆ.
ಕಲಾವಿದ ದೀಪಕ್ಧಾರವಾಡದ ಹಿರಿಯ ಕಲಾವಿದ ಬಿ. ಮಾರುತಿ ಅವರ ಗರಡಿಯಲ್ಲಿ ಬೆಳೆದಿರುವ ನಗರದ ಏಳುಕೇರಿ ಹುಡುಗ ದೀಪಕ್ ಬಾಣದ ಈಗ ಹೆಸರು ಮಾಡುತ್ತಿರುವ ಕಲಾವಿದ. ಸತತ ಮೂರು ವರ್ಷ ಹಂಪಿ ಉತ್ಸವದ ಲೋಗೋ ಅರಳಿಸಿದ್ದಾರೆ. ಬಳ್ಳಾರಿ ಉತ್ಸವ, ಕಂಪ್ಲಿ ಉತ್ಸವದ ಲಾಂಛನಗಳನ್ನು ಕೂಡ ಬಿಡಿಸಿದ್ದರು. ಇವರು ಪುಸ್ತಕಗಳ ಮುಖಪುಟ ವಿನ್ಯಾಸ ಮಾಡುತ್ತಾರೆ. ಧಾರವಾಡ ವಲಯದಲ್ಲಿ ಬೇಡಿಕೆಯ ಕಲಾವಿದ.
ಧಾರವಾಡದ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಬಿಎಫ್‌ಎ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎಫ್‌ಎ ಸ್ನಾತಕೋತ್ತರ ಪದವಿ ಪಡೆದು ವಿವಿಧ ಮಾಧ್ಯಮದಲ್ಲಿ ಹಲವಾರು ಕಲಾಕೃತಿಗಳನ್ನು ರಚಿಸಿದ್ದಾರೆ.ಇವರು ಭಾವಚಿತ್ರ, ಕ್ರಿಯೇಟಿವ್ ಲ್ಯಾಂಡ್‌ಸ್ಕೇಪ್, ಅಮೂರ್ತ ಕಲೆಗಳಂತಹ ಕಲಾಪ್ರಕಾರಗಳಲ್ಲಿ ಕಲಾ ಕೃತಿಗಳನ್ನು ರಚಿಸುತ್ತಾರೆ. ಕಂಪ್ಯೂಟರ್ ಗ್ರಾಫಿಕ್ಸ್ ಚಿತ್ರಗಳನ್ನೂ ಬಿಡಿಸುತ್ತಾರೆ.ಪ್ರೇರಣೆ
ಹಂಪಿ ಪರಿಸರ ಚಿತ್ರಗಳನ್ನು ಬಿಡಿಸಲು ನನಗೆ ಹೆಮ್ಮೆ ಏನಿಸುತ್ತದೆ. ಕಳೆದ ಮೂರು ವರ್ಷಗಳಿಂದ ಹಂಪಿ ಉತ್ಸವದಲ್ಲಿ ನಾನು ಬಿಡಿಸಿದ ಚಿತ್ತಾರಗಳೇ ಲಾಂಛನಕ್ಕೆ ಆಯ್ಕೆಯಾಗುತ್ತಿದೆ. ಹೊಸಪೇಟೆ ಮೂಲವೇ ನನಗೆ ಹಂಪಿ ಚಿತ್ರ ಬಿಡಿಸಲು ಪ್ರೇರಣೆಯಾಗಿದೆ.ದೀಪಕ್ ಬಾಣದ ಕಲಾವಿದ.
ಅತ್ಯುತ್ತಮ ಲಾಂಛನ
ಹಂಪಿ ಉತ್ಸವಕ್ಕೆ ಮೆರಗು ತರುವ ರೀತಿಯಲ್ಲಿ ಕಲಾವಿದ ದೀಪಕ್ ಬಾಣದ ಲೋಗೋ ಸೃಜಿಸಿದ್ದಾರೆ. ವಿಜಯನಗರದ ಗತ ವೈಭವ ಸಾರುವ ಉತ್ಸವಕ್ಕೆ ಅತ್ಯುತ್ತಮ ಲಾಂಛನ ಅರಳಿಸಿದ್ದಾರೆ.ಬಿ.ಜೆಡ್. ಜಮೀರ್ ಅಹ್ಮದ್ ಖಾನ್, ಜಿಲ್ಲಾ ಉಸ್ತುವಾರಿ ಸಚಿವರು, ವಿಜಯನಗರ
ಜನರ ಮೆಚ್ಚುಗೆಹಂಪಿ ಉತ್ಸವ ಲಾಂಛನಕ್ಕಾಗಿ ಅರ್ಜಿ ಆಹ್ವಾನಿಸಲಾಗಿತ್ತು. ಹಲವು ಕಲಾವಿದರು ಚಿತ್ತಾರಗಳನ್ನು ಕಳುಹಿಸಿದ್ದರು. ಅಂತಿಮವಾಗಿ ಆಯ್ಕೆ ಸಮಿತಿ ದೀಪಕ್ ಬಾಣದ ಅವರ ಚಿತ್ತಾರವನ್ನೇ ಲೋಗೋಗೆ ಆಯ್ಕೆ ಮಾಡಿದೆ. ಈ ಲೋಗೋ ಕೂಡ ಬಿಡುಗಡೆ ಆಗಿದ್ದು, ಜನರ ಮೆಚ್ಚುಗೆ ಗಳಿಸಿದೆ.
ಎಂ.ಎಸ್. ದಿವಾಕರ್, ಜಿಲ್ಲಾಧಿಕಾರಿ ವಿಜಯನಗರ.