ಮಹೇಶ ಛಬ್ಬಿ ಗದಗ
ಕಳೆದ ಬಾರಿ ಮಳೆ ಇಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಪ್ರಸಕ್ತ ವರ್ಷ ಉತ್ತಮ ಮುಂಗಾರು ಮಳೆಯಾಗಿದ್ದರಿಂದ ರೈತರು ನಿಟ್ಟುಸಿರು ಬಿಟ್ಟಿದ್ದರು. ಆದರೆ ಜಿಂಕೆ, ಕೃಷ್ಣಮೃಗಗಳು ಹೊಲಗಳಿಗೆ ಲಗ್ಗೆ ಇಡುತ್ತಿವೆ. ಹೊಲದಲ್ಲಿ ಬಿತ್ತನೆ ಮಾಡಿದ ಶೇಂಗಾ, ಹೆಸರು, ಹತ್ತಿ ಇನ್ನಿತರ ಸಸಿಗಳನ್ನು ತಿನ್ನುತ್ತಿವೆ. ಬೆಳೆ ರಕ್ಷಣೆಗೆ ಮಾಡಿಕೊಳ್ಳುವುದು ರೈತರಿಗೆ ಸವಾಲಾಗಿ ಪರಿಣಮಿಸಿದೆ.
ಬೆಳೆ ರಕ್ಷಣೆಗೆ ಬಿಯರ್ ಬಾಟಲ್:ಪ್ರಸಕ್ತ ವರ್ಷ ಸಕಾಲದಲ್ಲಿ ಉತ್ತಮ ಮಳೆ ಸುರಿದಿದ್ದರಿಂದ ಶೇಂಗಾ, ಹೆಸರು, ಹತ್ತಿ, ಗೋವಿನಜೋಳ ಇನ್ನಿತರ ಬೆಳೆಗಳು ಸಮೃದ್ಧವಾಗಿ ಬೆಳೆದಿವೆ. ರೈತರು ಉತ್ತಮ ಫಸಲು ಬರುವ ಆಶಾಭಾವನೆ ಹೊಂದಿದ್ದಾರೆ. ಆದರೆ ಜಿಂಕೆಗಳು ಸಸಿಯ ಚಿಗುರು ತಿನ್ನುವ ಜತೆಗೆ ಸಸಿಗಳನ್ನು ತುಳಿದು ನಾಶಪಡಿಸುತ್ತಿವೆ. ಜಿಂಕೆ ಹಾವಳಿ ತಪ್ಪಿಸಿ, ಬೆಳೆ ರಕ್ಷಿಸಲು ನಾನಾ ತಂತ್ರಗಳನ್ನು ಬಳಸಲಾರಂಭಿಸಿದ್ದಾರೆ. ಕೆಲವು ರೈತರು ರಸ್ತೆ ಅಕ್ಕ-ಪಕ್ಕದಲ್ಲಿ ಬಿದ್ದಿರುವ ಖಾಲಿ ಬಿಯರ್ ಬಾಟಲಿಗಳನ್ನು ತಂದು ಹೊಲದಲ್ಲಿರುವ ಗಿಡ, ಮರಗಳಿಗೆ ನೇತು ಹಾಕುತ್ತಿದ್ದಾರೆ. ಗಾಳಿ ಬೀಸುವ ರಭಸಕ್ಕೆ ಬಿಯರ್ ಬಾಟಲಿಗಳು ಒಂದಕ್ಕೊಂದು ತಾಗಿದಾಗ ಅವುಗಳ ಶಬ್ದಕ್ಕೆ ಜಿಂಕೆಗಳು ಭಯಗೊಂಡು ಓಡುತ್ತವೆ. ಕೆಲವೆಡೆ ಈ ತಂತ್ರವೂ ಫಲಿಸುತ್ತಿಲ್ಲ.
ಪ್ರಸಕ್ತ ವರ್ಷ ಉತ್ತಮ ಮಳೆಯಾಗಿ ಉತ್ತಮ ಫಸಲು ಬರುವ ನಿರೀಕ್ಷೆಯಲ್ಲಿದ್ದೇವೆ. ಆದರೆ ಬೆಳೆದು ನಿಂತ ಬೆಳೆಗಳನ್ನು ಜಿಂಕೆ, ಕೃಷ್ಣಮೃಗಗಳು ತಿಂದು, ತುಳಿದು ನಾಶಪಡಿಸುತ್ತಿವೆ. ಬೆಳೆಗಳ ರಕ್ಷಣೆ ಮಾಡುವುದೆ ಒಂದು ಕೆಲಸವಾಗಿದೆ. ಜಿಂಕೆ ಹಾವಳಿ ತಪ್ಪಿಸಲು ಸಂಬಂಧಪಟ್ಟ ಇಲಾಖೆ ಶಾಶ್ವತ ಕ್ರಮಕೈಗೊಳ್ಳಬೇಕು ಎಂದು ರೈತ ಮಹಾಂತೇಶ ಗುಂಜಳ ಹೇಳಿದ್ದಾರೆ.