ಕನ್ನಡಪ್ರಭ ವಾರ್ತೆ ತುಮಕೂರು
ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜಿಲ್ಲೆಯಲ್ಲಿನ ಸಾರ್ವಜನಿಕ ಆಸ್ತಿ ಹಾಗೂ ತೆರೆದ ಸ್ಥಳಗಳನ್ನು ವಿರೂಪಗೊಳಿಸುವುದು ಶಿಕ್ಷಾರ್ಹ ಅಪರಾಧವೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭಾ ಕಲ್ಯಾಣ್ ಸೂಚನೆ ನೀಡಿದ್ದಾರೆ.ಕರ್ನಾಟಕ ಓಪನ್ ಪ್ಲೇಸಸ್ ಪ್ರಿವೆನ್ಶನ್ ಆಫ್ ಡಿಸ್‌ಫಿಗರ್‌ಮೆಂಟ್ ಕಾಯ್ದೆ 3, 4,5, 6 ಮತ್ತು ೮ರನ್ವಯ ಯಾವುದೇ ವ್ಯಕ್ತಿ ಅಥವಾ ಮತ್ತೊಬ್ಬ ವ್ಯಕ್ತಿ ಮೂಲಕ ಸ್ಥಳೀಯ ಆಡಳಿತದ ಲಿಖಿತ ಅನುಮತಿಯಿಲ್ಲದೆ ಸಾರ್ವಜನಿಕ ವೀಕ್ಷಣೆಗೆ ತೆರೆದಿರುವ ಸ್ಥಳಗಳಲ್ಲಿ ಯಾವುದೇ ಜಾಹೀರಾತನ್ನು ಅಂಟಿಸಿದರೆ ಅಥವಾ ನಿರ್ಮಿಸಿದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಸಾರ್ವಜನಿಕ ಆಸ್ತಿ/ತೆರೆದ ಸ್ಥಳಗಳನ್ನು ಜಾಹೀರಾತು ಮೂಲಕ ವಿರೂಪಗೊಳಿಸಲು ಕುಮ್ಮಕ್ಕು/ಸಲಹೆ ನೀಡುವ, ಸಹಾಯ ಮಾಡುವ, ಕಾರಣರಾಗುವವರನ್ನೂ ಸಹ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಭಾರತ ಚುನಾವಣಾ ಆಯೋಗ ನಿರ್ದೇಶನ ನೀಡಿದೆ ಎಂದು ತಿಳಿಸಿದ್ದಾರೆ.
ಚುನಾವಣಾ ಆಯೋಗದ ನಿರ್ದೇಶನದಂತೆ ಸ್ಥಳೀಯ ಆಡಳಿತದ ಲಿಖಿತ ಅನುಮತಿಯಿಲ್ಲದೆ ಯಾವುದೇ ವ್ಯಕ್ತಿ ಯಾವುದೇ ಸ್ಥಳದಲ್ಲಿ ಯಾವುದೇ ಜಾಹೀರಾತನ್ನು ಸಾರ್ವಜನಿಕ ವೀಕ್ಷಣೆಗೆ ಪ್ರಚುರಪಡಿಸುವುದನ್ನು ನಿಷೇಧಿಸಲಾಗಿದ್ದು, ಈ ನಿಷೇಧವನ್ನು ವಿರೋಧಿಸುವವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು.ಚುನಾವಣಾ ಪ್ರಚಾರ ಸಮಯದಲ್ಲಿ ರಾಜಕೀಯ ಪಕ್ಷಗಳು/ಅಭ್ಯರ್ಥಿಗಳು ಪ್ರಚಾರಕ್ಕಾಗಿ ಸಾರ್ವಜನಿಕ/ಖಾಸಗಿ ಕಟ್ಟಡ, ತೆರೆದ ಸ್ಥಳ, ಗೋಡೆಗಳ ಮೇಲೆ ಅನಿಯಂತ್ರಿತವಾಗಿ ಬರೆದ ಪೋಸ್ಟರ್/ಜಾಹೀರಾತು ಅಂಟಿಸಿ ವಿರೂಪಗೊಳಿಸುವುದು ಹೆಚ್ಚಾಗುವ ಸಾಧ್ಯತೆಯಿದೆ. ಇದರಿಂದ ಸಾರ್ವಜನಿಕ ಆಸ್ತಿಗೆ ಹಾನಿ ಉಂಟಾಗುವುದಲ್ಲದೆ ಕಟ್ಟಡದ ಸೌಂದರ್ಯ ಹಾಳಾಗಿ ಜನರಿಗೆ ತೊಂದರೆ ಉಂಟಾಗುತ್ತದೆ ಎಂದು ಮನಗಂಡು ಚುನಾವಣಾ ಆಯೋಗವು ಈ ನಿರ್ದೇಶನ ನೀಡಿದೆ.
ಚುನಾವಣಾ ಆಯೋಗದ ಆದೇಶವನ್ನು ಉಲ್ಲಂಘಿಸಿದವರಿಗೆ 6 ತಿಂಗಳವರೆಗೆ ವಿಸ್ತರಿಸಬಹುದಾದ ಸೆರೆವಾಸ ಅಥವಾ 1 ಸಾವಿರ ರು.ಗಳವರೆಗೆ ದಂಡ ಅಥವಾ ಎರಡನ್ನೂ ವಿಧಿಸಲಾಗುವುದು. ವಿರೂಪಗೊಳಿಸುವಿಕೆಯಿಂದ ಯಾವುದೇ ವ್ಯಕ್ತಿಗೆ ಅಡಚಣೆ, ಕಿರಿಕಿರಿ ಅಥವಾ ಹಾನಿ ಉಂಟು ಮಾಡಿದರೆ ಅಪರಾಧವೆಂದು ಪರಿಗಣಿಸಲಾಗುವುದು. ಅಲ್ಲದೆ ವಿರೂಪಗಳಿಸು ವಿಕೆಯ ಮರುಸ್ಥಾಪನೆಯ ಸಂಪೂರ್ಣ ವೆಚ್ಚವನ್ನು ಅಪರಾಧಿಯಿಂದ ವಸೂಲಿ ಮಾಡಲಾಗುವುದು. ಈ ಆದೇಶವು ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಜಾರಿಯಲ್ಲಿರುತ್ತದೆ ಅಂದು ಅವರು ಎಚ್ಚರಿಕೆ ನೀಡಿದ್ದಾರೆ.