ಕೆಲ ರಾಜ್ಯ ಬಿಜೆಪಿ, ಸ್ಥಳೀಯ ನಾಯಕರಿಂದಾಗಿ ಸೋಲು

KannadaprabhaNewsNetwork |  
Published : Jun 10, 2024, 12:32 AM IST

ಸಾರಾಂಶ

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸೋಲುವಲ್ಲಿ ಸ್ಥಳೀಯ ಕೆಲ ಮುಖಂಡರಷ್ಟೇ ಅಲ್ಲ, ಕೆಲ ಬಿಜೆಪಿ ರಾಜ್ಯ ನಾಯಕರ ಪಾತ್ರವೂ ಇದೆ. ನಾಲ್ಕು ಸಲ ಗೆದ್ದು, ಸೋಲಿಲ್ಲದ ಸರದಾರ ಆಗಿದ್ದ ಸಿದ್ದೇಶ್ವರ ಅವರಿಗೆ ಟಿಕೆಟ್ ತಪ್ಪಿಸಲು ಜಿಲ್ಲೆಯಲ್ಲಿ ವ್ಯವಸ್ಥಿತ ಪಿತೂರಿಯೇ ನಡೆಯಿತು. ಬೇಲಿಯೇ ಎದ್ದು ಹೊಲ ಮೇಯ್ದರೆ ಏನು ಮಾಡಬೇಕು ಎಂದು ಹರಿಹರ ಶಾಸಕ ಬಿ.ಪಿ. ಹರೀಶ್‌ ದಾವಣಗೆರೆಯಲ್ಲಿ ಹರಿಹಾಯ್ದರು.

- ಕೃತಜ್ಞತಾ ಸಭೆಯಲ್ಲಿ ರೆಬಲ್ ಟೀಂ ವಿರುದ್ಧ ಹರಿಹಾಯ್ದ ಹರಿಹರ ಶಾಸಕ ಹರೀಶ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸೋಲುವಲ್ಲಿ ಸ್ಥಳೀಯ ಕೆಲ ಮುಖಂಡರಷ್ಟೇ ಅಲ್ಲ, ಕೆಲ ಬಿಜೆಪಿ ರಾಜ್ಯ ನಾಯಕರ ಪಾತ್ರವೂ ಇದೆ. ನಾಲ್ಕು ಸಲ ಗೆದ್ದು, ಸೋಲಿಲ್ಲದ ಸರದಾರ ಆಗಿದ್ದ ಸಿದ್ದೇಶ್ವರ ಅವರಿಗೆ ಟಿಕೆಟ್ ತಪ್ಪಿಸಲು ಜಿಲ್ಲೆಯಲ್ಲಿ ವ್ಯವಸ್ಥಿತ ಪಿತೂರಿಯೇ ನಡೆಯಿತು. ಬೇಲಿಯೇ ಎದ್ದು ಹೊಲ ಮೇಯ್ದರೆ ಏನು ಮಾಡಬೇಕು ಎಂದು ಹರಿಹರ ಶಾಸಕ ಬಿ.ಪಿ. ಹರೀಶ್‌ ಹರಿಹಾಯ್ದರು.

ಭಾನುವಾರ ಬಿಜೆಪಿ ಜಿಲ್ಲಾ ಘಟಕದಿಂದ ಮುಖಂಡರು, ಕಾರ್ಯಕರ್ತರಿಗೆ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಅವರು, 80 ಮತ್ತು 90 ದಶಕದಲ್ಲಿ ಕೋಮು ಗಲಭೆಯಲ್ಲಿ ಗುಂಡೇಟಿಗೆ ಬಲಿಯಾದವರು, ದುಷ್ಕರ್ಮಿಗಳಿಂದ ಹತ್ಯೆಯಾದವರು, ಗುಂಡೇಟು ತಿಂದವರು ಹೀಗೆ ಸಾಕಷ್ಟು ಜನರ ತ್ಯಾಗ, ಹೋರಾಟದಿಂದ ಪಕ್ಷ ಬೆಳೆದು ಬಂದಿದೆ ಎಂದರು.

80ರ ದಶಕದಲ್ಲಿ 4 ಜನರು, 90 ದಶಕದಲ್ಲಿ 8 ಜನ ಹುತಾತ್ಮರಾದರು. ಅನಂತರ ಅಲ್ಲಿ ಬಿಜೆಪಿ ಗಟ್ಟಿಯಾಗಿ ಬೇರೂರುತ್ತಾ ಬಂದಿತು. ದಾವಣಗೆರೆ ಕ್ಷೇತ್ರದ ಭಾಗವಾಗಿದ್ದ ಭೀಮಸಮುದ್ರದ ಜಿ.ಮಲ್ಲಿಕಾರ್ಜುನಪ್ಪ ಲೋಕಸಭೆಗೆ ಸ್ಪರ್ಧಿಸುವುದರೊಂದಿಗೆ ಬಿಜೆಪಿಗೆ ಮತ್ತಷ್ಟು ಶಕ್ತಿ ಬಂದಿತು. ಇಂದು ಬಿಜೆಪಿಯಲ್ಲಿ ಹಲವರು ಶಾಸಕರು, ಸಚಿವರು, ನಿಗಮ ಮಂಡಳಿಗಳ ಅಧ್ಯಕ್ಷರಾಗಿದ್ದರೆ ಅದಕ್ಕೆ ಮಾಜಿ ಸಂಸದ ದಿವಂಗತ ಜಿ.ಮಲ್ಲಿಕಾರ್ಜುನಪ್ಪ ಅವರ ಆಶೀರ್ವಾದ ಕಾರಣ ಎಂದು ಅವರು ತಿಳಿಸಿದರು.

ಯಡಿಯೂರಪ್ಪ ಅವರು ಸಿದ್ದೇಶ್ವರ ಹಾಗೂ ನನಗೆ ಬೆಂಗಳೂರಿಗೆ ಕರೆಸಿಕೊಂಡಿದ್ದರು. ಅದಕ್ಕೂ ಮೂರು ದಿನ ಮುಂಚೆಯೇ ಸಿದ್ದೇಶ್ವರಗೆ ಟಿಕೆಟ್ ನೀಡಬಾರದೆಂದು ಒಂದು ಗುಂಪು ಬೆಂಗಳೂರಿಗೆ ಹೋಗಿ ಬೀಡುಬಿಟ್ಟಿತ್ತು. ನಾನು, ಸಿದ್ದೇಶ್ವರ, ಮಾಜಿ ಸಚಿವ ಮುರುಗೇಶ ನಿರಾಣಿ ಸಮ್ಮುಖ ಯಡಿಯೂರಪ್ಪ ಜೊತೆಗೆ ಚರ್ಚಿಸಿದೆವು. ಪಕ್ಷದಿಂದ ಉಚ್ಚಾಟಿತರಾದವರಿಗೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಬಗ್ಗೆ ಪ್ರಶ್ನಿಸಿದಾಗ, ರಾಜ್ಯಾಧ್ಯಕ್ಷ ವಿಜಯೇಂದ್ರ ಪರ ಮಾತನಾಡಿದ್ದು ಸೋಜಿಗ ಎನಿಸಿತ್ತು ಎಂದು ಅವರು ಹೇಳಿದರು.

ಬಿಜೆಪಿಗೆ ಸೇರ್ಪಡೆಯಾದ ಮಾರನೆ ದಿನವೇ ದೆಹಲಿಗೆ ಹೋಗಿ ಸಿದ್ದೇಶ್ವರ್‌ಗೆ ಟಿಕೆಟ್ ನೀಡುವುದಕ್ಕೆ ಗುಂಪು ವಿರೋಧಿಸಿತ್ತು. ಅಲ್ಲಿ ಕೆಟ್ಟ ರೀತಿಯಲ್ಲಿ ಸಂಸದ ಸಿದ್ದೇಶ್ವರ ಬಗ್ಗೆ ಮಾತನಾಡಿತ್ತು. ಅದೇ ತಂಡದಲ್ಲಿದ್ದ ನಾಚಿಕೆ ಇಲ್ಲದವರು ದಾವಣಗೆರೆಗೆ ಬಂದು ಶಾಮನೂರು ಶಿವಶಂಕರಪ್ಪನವರ ಮನೆಗೆ ಹೋಗಿದ್ದರು. ಸಿಎಂ ಸ್ಥಾನದಿಂದ ಯಡಿಯೂರಪ್ಪನವರಿಗೆ ಇಳಿಸಿದಾಗ ಇದೇ ಶಾಮನೂರು ಶಿವಶಂಕರಪ್ಪ ವಿರೋಧಿಸಿದ್ದರು. ಆ ಋಣ ತೀರಿಸಲು ಜಿ.ಎಂ. ಸಿದ್ದೇಶ್ವರಗೆ ಟಿಕೆಟ್ ತಪ್ಪಿಸುವ ಷಡ್ಯಂತ್ರ ಹೀಗೆ ಮಾಡಲಾಗಿತ್ತು ಎಂದು ಆರೋಪಿಸಿದರು.

ಮಾಡಾಳ್ ಮಲ್ಲಿಕಾರ್ಜುನ ತಮಗೆ ಫೋನ್ ಮಾಡಿ, ನಮ್ಮನ್ನು ನೋಡಿ ಕೊಳ್ಳುತ್ತೇನೆಂದು ಬೆದರಿಕೆ ಹಾಕಿದ್ದಾನೆ. ಹುಚ್ಚು ಬಿಡಿಸುತ್ತಾನಂತೆ. ಲೋಕಸಭೆ ಕ್ಷೇತ್ರ ಸೋತ ನೋವಿನಲ್ಲಿ ನಾವು ಇದ್ದೇವೆ. ಇಂತಹ ಗೊಡ್ಡು ಬೆದರಿಕೆಗೆ ನಾನು ಹೆದರುವವನಲ್ಲ. ಪಕ್ಷದ ವರಿಷ್ಠರಿಗೆ ಜಿಲ್ಲೆಯ ಬೆಳವಣಿಗೆ, ಘಟನೆಗಳ ಬಗ್ಗೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಸ್ಪಷ್ಟ ವಿವರಣೆ ಸಮೇತ ವರದಿ ನೀಡಬೇಕು. ಯಶವಂತ ರಾವ್‌ ಜಾಧವ್‌ ಅವರಂಥವರು ಸುಮ್ಮನಾದರೆ ಕಳ್ಳರು, ಸುಳ್ಳರಿಗೆ ಅವಕಾಶ ನೀಡಿದಂತಾಗುತ್ತದೆ ಎಂದು ಬಿ.ಪಿ.ಹರೀಶ ಹೇಳಿದರು.

- - -

ಬಾಕ್ಸ್‌ ಸಚಿವರು, ಡಿಸಿ ವಿರುದ್ಧ ಹರಿಹಾಯ್ದ ಹರೀಶ ದಾವಣಗೆರೆ: ಗಣಿ ಮತ್ತು ಭೂ ವಿಜ್ಞಾನ ಸಚಿವರು ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ, ಹಳ್ಳಗಳನ್ನೇ ಮುಚ್ಚಿದ್ದು, ತಾಲೂಕು ಗಡಿಯನ್ನೇ ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಲಿಖಿತ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಜಿಲ್ಲಾಧಿಕಾರಿ, ಕಂದಾಯ ಅಧಿಕಾರಿಗಳು, ಗಣಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಹರಿಹರ ಶಾಸಕ ಬಿ.ಪಿ.ಹರೀಶ ಆರೋಪಿಸಿದರು.

ಬಿಜೆಪಿಗೆ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರ ಅವಶ್ಯಕತೆ ಇಲ್ಲ. ಯಾರು ಎಲ್ಲೆಲ್ಲಿ ಅನ್ಯಾಯ ಮಾಡಿದ್ದಾರೋ ಅಂತಹ ಕಡೆ ಹೊಸ ನಾಯಕರನ್ನು ಹುಟ್ಟುಹಾಕೋಣ. ನಮ್ಮ ಜಿಲ್ಲೆಯಲ್ಲಿ ಆದ ಬೆಳವಣಿಗೆ ಹಿನ್ನೆಲೆಯಲ್ಲಿ ಅಪಸ್ವರ ಎತ್ತಿದವರಿಗೆ ಕರೆದು, ತಿಳಿಹೇಳುವ ಕೆಲಸ ರಾಜ್ಯ ನಾಯಕರು ಮಾಡಲಿಲ್ಲ. ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳುವಂತೆ ಬಿ ಅಂದ್ರೆ ಖಂಡ್ರೆ, ಎಸ್ ಅಂದರೆ ಶಾಮನೂರು, ವೈ ಅಂದ್ರೆ ಯಡಿಯೂರಪ್ಪ ಎನ್ನುವ ಮಾತು ಸರಿಯಾಗಿಯೇ ಇದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆ ಸುರಕ್ಷತೆಗೆ ಸಾರಿಗೆ ಇಲಾಖೆ ಎಐ ಆಧರಿತ ಕ್ಯಾಮೆರಾ ಅಳವಡಿಕೆ
ಮಂಡ್ಯ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಸ್ವತಂತ್ರ ಸ್ಪರ್ಧೆ - ಸುಮಲತಾ ಪರ ನಾರಾಯಣಗೌಡ ಬ್ಯಾಟಿಂಗ್‌