ಕನ್ನಡಪ್ರಭ ವಾರ್ತೆ, ಬೀದರ್
ಅನೇಕ ಅಕ್ರಮಗಳನ್ನು ಎಸಗಿ, ವಿರೋಧಿ ಬಣದವರಿಗೆ ಬೆದರಿಕೆ ಹಾಕುತ್ತಿರುವ ರಾಜೇಂದ್ರಕುಮಾರ ಗಂದಗೆ ಸೋಲು ಖಚಿತವಾಗಿದ್ದು, ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ 2024-29ನೇ ಅವಧಿಯ ಜಿಲ್ಲಾ ಕಾರ್ಯಕಾರಿ ಸಮಿತಿಯ ಚುನಾವಣೆಯಲ್ಲಿ ಸೋಮಶೇಖರ ಬಿರಾದಾರ (ಚಿದ್ರಿ) ಅಧ್ಯಕ್ಷರಾಗಿ ಆಯ್ಕೆಯಾಗುವುದು ಗ್ಯಾರಂಟಿ ಎಂದು ಶಿಕ್ಷಣ ಇಲಾಖೆಯ ಮತ್ತು ಲಿಂಗಾಯತ ಸಮಾಜದ ಮುಖಂಡ ಶಿವರಾಜ ಕಪಲಾಪೂರೆ ಭರವಸೆ ವ್ಯಕ್ತಪಡಿಸಿದರು.ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜೇಂದ್ರಕುಮಾರ ಗಂದಗೆ ಅವರು ಸರ್ಕಾರಿ ನೌಕರರ ಸಮುದಾಯ ಭವನವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಅದಕ್ಕೆ ಬರುವ ಬಾಡಿಗೆ ಹಣವನ್ನು ಲಪಟಾಯಿಸಿದ್ದಾರೆ. ನೌಕರರನ್ನು ಹೆದರಿಸಿ ಅವರ ಮತದಾನದ ಹಕ್ಕನ್ನು ಕಿತ್ತುಕೊಂಡಿದ್ದಾರೆ. ಇವೆಲ್ಲ ಅಕ್ರಮಗಳ ಕುರಿತಂತೆ ಮುಂದಿನ ದಿನಗಳಲ್ಲಿ ತನಿಖೆ ನಡೆದು ಅವರಿಗೆ ತಕ್ಕಶಿಕ್ಷೆಯಾಗಲಿದೆ ಎಂದರು.
ಜಿಲ್ಲಾ ಕಾರ್ಯಕಾರಿ ಸಮಿತಿಯ ನಿರ್ದೇಶಕರಾಗಿ ಸಹಕಾರ ಇಲಾಖೆಯಿಂದ ಅವಿರೋಧವಾಗಿ ಅಯ್ಕೆಯಾಗಿರುವ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಸೋಮಶೇಖರ ಬಿರಾದಾರ (ಚಿದ್ರಿ) ನೇತೃತ್ವದಲ್ಲಿ ನಾವೆಲ್ಲ ಸಮಾನ ಮನಸ್ಕರೂ ಒಟ್ಟಾಗಿ ಹಿಂದಿನ ಅಧ್ಯಕ್ಷರ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇವೆ ಎಂದರು.ನಾಮಪತ್ರಗಳ ಪರಿಶೀಲನೆ, ಹಿಂತೆಗೆಯುವಿಕೆಯ ನಂತರ 66 ಸ್ಥಾನಗಳ ಪೈಕಿ ವಿವಿಧ ಇಲಾಖೆಗಳಿಂದ 36 ಅಭ್ಯರ್ಥಿಗಳು ಅವಿರೋಧವಾಗಿ ಅಯ್ಕೆಯಾಗಿದ್ದಾರೆ. ಅವರೆಲ್ಲರಿಗೂ ಹಾರ್ದಿಕ ಅಭಿನಂದನೆ ಗಳನ್ನು ಸಲ್ಲಿಸುತ್ತೇವೆ. ಅವಿರೋಧವಾಗಿ ಆಯ್ಕೆಯಾದವರ ಪೈಕಿ ನಮ್ಮ ಪ್ಯಾನಲ್‌ನಿಂದ 28 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ಆರೋಗ್ಯ ಇಲಾಖೆಯ ರಾಜಕುಮಾರ ಮಾಳಗೆ ಮಾತನಾಡಿ, ಸರ್ವಾಧಿಕಾರಿ ವರ್ತನೆಯಿಂದ ಜಿಲ್ಲೆಯ ನೌಕರರಲ್ಲಿ ಭಯ ಹುಟ್ಟಿಸಿ ಗೆಲ್ಲಲು ಹವಣಿಸುತ್ತಿರುವ ರಾಜೇಂದ್ರಕುಮಾರ ಗಂದಗೆ ಅವರನ್ನು ಸೋಲಿಸುವುದು ನಮ್ಮೆಲ್ಲರ ಪರಮ ಗುರಿಯಾಗಿದೆ. ನಮ್ಮೆಲ್ಲರ ಮೇಲೆ ಗಂದಗೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ.ನೌಕರರ ಸಂಘದ ಚಟುವಟಿಕೆಗಳನ್ನು ಪಾರರ್ದಶಕವಾಗಿ ನಡೆಸುವುದು ಜಿಲ್ಲೆಯ ಸರ್ವ ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೊಸ ವಾತವಾರಣ ನಿರ್ಮಿಸುವ ಧ್ಯೇಯ ನಮ್ಮದು. ಸರ್ಕಾರಿ ಸೇವೆಯಲ್ಲಿ ಉತ್ತಮ ಹೆಸರನ್ನು ಗಳಿಸಿರುವ ಸೋಮಶೇಖರ ಬಿರಾದಾರ್ (ಚಿದ್ರಿ) ವಿನಯಶೀಲರು, ಸಂಘವನ್ನು ಉನ್ನತ ಮಟ್ಟಕ್ಕೇರಿಸಲು ಸನ್ನದ್ಧರಾಗಿರುವರು. ಗಂದಗೆಯವರು ಎಷ್ಟೇ ಕುಯುಕ್ತಿ, ಕುಟಿಲೋ ಪಾಯಗಳನ್ನು ಮಾಡಿದರೂ ಅವಿರೋಧ ಆಯ್ಕೆಯ ಮೊದಲ ಹಂತದಲ್ಲಿ ಸೋಮಶೇಖರ ಬಿರಾದಾರ (ಚಿದ್ರಿ) ಪ್ಯಾನಲ್ ಸಂಪೂರ್ಣ ಮೇಲುಗೈ ಸಾಧಿಸಿದೆ ಎಂದು ತಿಳಿಸಿದರು.
ವಿವಿಧ ಇಲಾಖೆಗಳಿಂದ ಉಳಿದ 30 ಸ್ಥಾನಗಳ ಆಯ್ಕೆಗಾಗಿ ಇದೇ ನ.16ರಂದು ಬೆಳಿಗ್ಗೆ 9ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದ್ದು, ಅದರಲ್ಲಿಯೂ ನಮ್ಮ ಪ್ಯಾನಲ್‌ಗೆ ಮತ ನೀಡಿ ಗೆಲ್ಲಿಸಬೇಕೆಂದು ಈ ಮೂಲಕ ಮನವಿ ಮಾಡುತ್ತೇವೆ ಮತ್ತು ಈ ಚುನಾವಣೆಯಲ್ಲಿ 20ಕ್ಕೂ ಅಧಿಕ ಅಭ್ಯರ್ಥಿಗಳು ಬಹುಮತ ಪಡೆದು ಆಯ್ಕೆಯಾಗಲಿರುವರೆಂಬ ವಿಶ್ವಾಸ ನಮ್ಮದಾಗಿದೆ. ಹಿಗಾಗಿ ಶತಾಯ ಗತಾಯ ಸೋಮ ಶೇಖರ ಬಿರಾದಾರ (ಚಿದ್ರಿ) ಮುಂದಿನ ಹೊಸ ಜಿಲ್ಲಾಧ್ಯಕ್ಷರಾಗಿ ಜಯಗಳಿಸುವುದು ಶತಸಿದ್ಧವಾಗಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಸೋಮಶೇಖರ ಬಿರಾದಾರ (ಚಿದ್ರಿ) ಶಿಕ್ಷಣ ಇಲಾಖೆಯ ಪಾಂಡುರಂಗ್ ಬೆಲ್ದಾರ್, ಆರ್‌ಡಿಪಿಆರ್ ಇಲಾಖೆಯ ದೇವಪ್ಪ ಚಾಂಬಳೆ, ಸುರೇಶ ಟಾಳೆ, ದಿಲೀಪಕುಮಾರ ಡೊಂಗರೆ, ತಾನಾಜಿ ನರೋಟೆ ಸೇರಿದಂತೆ ಇತರರು ಉಪಸ್ಥಿತರಿದ್ದರು.ನೌಕರರ ಹಿತ ಕಾಪಾಡುವಲ್ಲಿ ಪ್ರಾಮಾಣಿಕ ಶ್ರಮ: ಗಂದಗೆ ಭರವಸೆಬೀದರ್: ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಜಿಲ್ಲೆಯ ನೌಕರರು ಮತ್ತೊಂದು ಅವಧಿಗೆ ಅವಕಾಶ ನೀಡಿದರೆ ಪ್ರತಾಪನಗರದ ನೌಕರರ ಭವನವನ್ನು ಹೈಟೆಕ್ ಭವನವಾಗಿಸುವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರೂ ಆದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಭರವಸೆ ನೀಡಿದರು.
ಅವರು ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೈಟೆಕ್ ಭವನದ ಯೋಜನೆ 4ಕೋಟಿ ರು.ಗಳದ್ದಾಗಿದೆ. ಸದ್ಯದ ಭವನವನ್ನು ಸಂಪೂರ್ಣ ಹವಾನಿಯಂತ್ರಿತಗೊಳಿಸುವುದು, ನೂತನ ಸಭಾಭವನ, ವಿಶಾಲ ತರಬೇತಿ ಕೋಣೆ, ತೆರೆದ ರಂಗಮಂದಿರ, 10 ಅತಿಥಿ ಗೃಹಗಳ ನಿರ್ಮಾಣ ಹೈಟೆಕ್ ಭವನದ ಯೋಜನೆಗಳಲ್ಲಿ ಸೇರಿವೆ ಎಂದು ತಿಳಿಸಿದರು.ಎರಡು ಅವಧಿಗಳಲ್ಲಿ ನೌಕರರ ಭವನದ ಚಿತ್ರಣವನ್ನೇ ಬದಲಿಸಲಾಗಿದೆ. 1ಕೋಟಿ ರು. ವೆಚ್ಚದಲ್ಲಿ 15 ಸಾವಿರ ಚದರ ಅಡಿಯ ಡೈನಿಂಗ್ ಹಾಲ್, 11 ಲಕ್ಷ ರು. ವೆಚ್ಚದಲ್ಲಿ ಶೌಚಾಲಯ, ಸಂಘದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಬಸವರಾಜ ಭರಶೆಟ್ಟಿ ಅವರ ಹೆಸರಲ್ಲಿ 5 ಲಕ್ಷ ರು. ವೆಚ್ಚದ ಹೈಟೆಕ್ ಸಭಾ ಭವನ, ಶಟಲ್ ಬ್ಯಾಡ್ಮಿಂಟನ್ ಅಂಗಣ ನಿರ್ಮಿಸಲಾಗಿದೆ. 11 ಲಕ್ಷ ರು. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಲಾಗಿದೆ. 20 ಲಕ್ಷ ರು. ವೆಚ್ಚದಲ್ಲಿ ಸಭಾಂಗಣದ ನವೀಕರಣ ಮಾಡಲಾಗಿದೆ ಎಂದು ಹೇಳಿದರು.ನಗರದ ಪನ್ನಾಲಾಲ್ ಹೀರಾಲಾಲ್ ಕಾಲೇಜು ಎದುರಿನ 2 ಕೋಟಿ ರು. ಬೆಲೆ ಬಾಳುವ 40*60 ಚದರ ಅಡಿಯ ಸಂಘದ ಜಾಗವನ್ನು ಕಾನೂನು ಹೋರಾಟದ ಮೂಲಕ ಉಳಿಸಿಕೊಳ್ಳಲಾಗಿದೆ. ನ್ಯಾಯಾಲಯದಲ್ಲಿ ಸಂಘದ ಪರವಾಗಿ ತೀರ್ಪು ಬಂದಿದ್ದು, ಈ ಸ್ಥಳದಲ್ಲಿ ನಾಲ್ಕು ಅಂತಸ್ತಿನ ಸುಸಜ್ಜಿತ ಕಟ್ಟಡ ನಿರ್ಮಿಸುವ ಉದ್ದೇಶ ಇದೆ ಎಂದು ತಿಳಿಸಿದರು.ಕಟ್ಟಡದಲ್ಲಿ ಸಭಾ ಭವನ, ಮಹಿಳಾ ಪುರುಷ ನೌಕರರಿಗೆ ಪ್ರತ್ಯೇಕ ಜಿಮ್, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೋಣೆ, ನೌಕರರ ವಾಸ್ತವ್ಯಕ್ಕೆ 10 ಕೋಣೆ, ಗ್ರಂಥಾಲಯ ನಿರ್ಮಾಣ ಮಾಡಲು ಯೋಜಿಸ ಲಾಗಿದೆ ಅಲ್ಲದೆ ಎನ್‌ಪಿಎಸ್ ರದ್ದುಪಡಿಸಿ, ಒಪಿಎಸ್ ಮರು ಜಾರಿಗೊಳಿಸುವುದು, ನೌಕರರಿಗೆ ನಗದು ರಹಿತ ಚಿಕಿತ್ಸೆಯ ಸೌಲಭ್ಯ ಕಲ್ಪಿಸುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನ, ವಿವಿಧ ಇಲಾಖೆಗಳ ವೃಂದ ನೇಮಕಾತಿ ನಿಯಮಗಳ ತಿದ್ದುಪಡಿಗೆ ಹೋರಾಟ ನಡೆಸಲಾಗುವುದು. ನೌಕರರ ಹಿತ ರಕ್ಷಿಸಲಾಗುವುದು ಎಂದು ರಾಜೇಂದ್ರಕುಮಾರ ಗಂದಗೆ ತಿಳಿಸಿದರು.ನೌಕರರ ಆಶಯಕ್ಕೆ ಅನುಗುಣವಾಗಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷನಾಗಿ ಸಾಕಷ್ಟು ಉತ್ತಮ ಕಾರ್ಯಗಳನ್ನು ಕೈಗೊಂಡಿರುವ ಸಂತೃಪ್ತಿ ಇದೆ. ನೌಕರರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಖಂಡಿಸಿ ಹೋರಾಟ ನಡೆಸಲಾಗಿದೆ. ನೌಕರರ ಸಮಸ್ಯೆ-ಸವಾಲುಗಳ ಚಿಂತನ ಮಂಥನಕ್ಕೆ ಜಿಲ್ಲಾಮಟ್ಟದ ನೌಕರರ ಸಮ್ಮೇಳನಗಳನ್ನು ನಡೆಸಿಕೊಂಡು ಬರಲಾಗಿದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಪ್ರತಿ ವರ್ಷ ಅಧಿಕಾರಿಗಳು ಹಾಗೂ ನೌಕರರ ಕುಂದುಕೊರತೆ ಜಂಟಿ ಸಮಾಲೋಚನಾ ಸಭೆ ನಡೆಸಲಾಗಿದೆ ಎಂದು ಹೇಳಿದರು.ಸರ್ಕಾರದ ಮೇಲೆ ಒತ್ತಡ ತಂದು 7ನೇ ವೇತನ ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸುವಲ್ಲಿ ಸಂಘ ಯಶ ಕಂಡಿದೆ. ನೌಕರರ ಹಿತಕ್ಕೆ ಪೂರಕವಾಗಿ ಇನ್ನೂ ಅನೇಕ ಕಾರ್ಯಗಳನ್ನು ಮಾಡುವ ಉದ್ದೇಶ ಇದೆ ಎಂದು ರಾಜೇಂದ್ರಕುಮಾರ ಗಂದಗೆ ತಿಳಿಸಿದರು.ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಸವರಾಜ ಜಕ್ಕಾ, ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ ಇದ್ದರು.