ಪಕ್ಷಕ್ಕೆ ಸೋಲು; ವ್ಯಕ್ತಿಗೆ ಗೆಲುವು । ಅಧ್ಯಕ್ಷರಾಗಿ ವರಸಿದ್ದಿ ಮುಂದುವರಿಕೆ । ಗದ್ದಲದ ನಡುವೆ ಹತ್ತೇ ನಿಮಿಷದಲ್ಲಿ ಮುಕ್ತಾಯಗೊಂಡ ಸಭೆಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ತಮ್ಮದೆ ಪಕ್ಷದ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಅವರನ್ನು ಪದಚ್ಯುತಿಗೊಳಿಸಲು ಬಿಜೆಪಿ ಪ್ರಯೋಗ ಮಾಡಿದ್ದ ಅವಿಶ್ವಾಸ ನಿರ್ಣಯದ ಅಸ್ತ್ರ ವಿಫಲವಾಯಿತು.ವ್ಯಕ್ತಿಗಿಂತ ಪಕ್ಷ ದೊಡ್ಡದೆಂಬ ಸಿದ್ಧಾಂತ ಪಠಿಸುವ ಬಿಜೆಪಿಗೆ ಓರ್ವ ವ್ಯಕ್ತಿಯಿಂದ ಮುಖಭಂಗವಾಯಿತು. ಅವಿಶ್ವಾಸ ನಿರ್ಣಯದ ಸಭೆಯಲ್ಲಿ ಪರ ಮತ್ತು ವಿರೋಧ ಮತಗಳ ಚಲಾವಣೆ ಪ್ರಕ್ರಿಯೆ ನಡೆಯಲೇ ಇಲ್ಲ. ಸಭೆಯಲ್ಲಿ ಬಿಜೆಪಿ ಸದಸ್ಯರು, ಅಧ್ಯಕ್ಷರ ವಿರುದ್ಧ ಗದ್ದಲ ಸೃಷ್ಟಿ ಮಾಡಿದ್ದರಿಂದ ನಿಯಮಬದ್ಧವಾಗಿ ಸಭೆ ಮುಕ್ತಾಯಗೊಳ್ಳಲಿಲ್ಲ. ಇದೇ ಪರಿಸ್ಥಿತಿ ಅಧ್ಯಕ್ಷರ ಮುಂದುವರಿಕೆಗೆ ಅನುಕೂಲವಾಯಿತು.
ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯದ ಸಂಬಂಧ ಶುಕ್ರವಾರ ಮಧ್ಯಾಹ್ನ 12.15 ಕ್ಕೆ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಅಧ್ಯಕ್ಷತೆಯಲ್ಲಿ ನಗರಸಭೆಯಲ್ಲಿ ವಿಶೇಷ ಸಾಮಾನ್ಯ ಸಭೆ ಕರೆಯಲಾಗಿತ್ತು.ಸಭೆ ಆರಂಭಕ್ಕೂ ಮುನ್ನ ನಗರಸಭಾಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಕಚೇರಿ ಮುಂಭಾಗದಲ್ಲಿರುವ ಗಣಪತಿ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿ ನೇರವಾಗಿ ಸಭಾಂಗಣದೊಳಗೆ ಆಗಮಿಸಿದರು.
ಸಭೆಯಲ್ಲಿ ಶಾಸಕ ಎಚ್.ಡಿ. ತಮ್ಮಯ್ಯ ಸೇರಿದಂತೆ ನಗರಸಭೆಯ ಕಾಂಗ್ರೆಸ್ ಪಕ್ಷದ ಎಲ್ಲಾ ಸದಸ್ಯರು ಹಾಜರಿದ್ದರು. ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸಹ ಇದ್ದರು. ಆದರೆ, ವರಸಿದ್ಧಿ ವೇಣುಗೋಪಾಲ್ ಅವರನ್ನು ಅಧಿಕಾರದಿಂದ ಇಳಿಸಲು ಅವಿಶ್ವಾಸ ನಿರ್ಣಯ ಕರೆಯುವ ಕೋರಿಕೆ ಪತ್ರಕ್ಕೆ ಸಹಿ ಮಾಡಿದ್ದ ಎಸ್‌ಡಿಪಿಐ ಸದಸ್ಯೆ ಮಂಜುಳಾ, ಜೆಡಿಎಸ್ ಬೆಂಬಲಿತ ಪಕ್ಷೇತರ ಸದಸ್ಯರಾದ ಶೀಲಾ ದಿನೇಶ್ ಗೈರು ಹಾಜರಿಯಾಗಿದ್ದರು.ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ನಗರಸಭೆಯ ಸಾಮಾನ್ಯ ಸಭೆಗೆ ಹಾಜರಾಗಲು ಚಿಕ್ಕಮಗಳೂರಿಗೆ ಬಂದಿದ್ದರೂ ಸಹ ಸಭೆಗೆ ಹಾಜರಾಗಲಿಲ್ಲ. ವಿಧಾನ ಪರಿಷತ್ ಸದಸ್ಯರಾದ ಎಂ.ಕೆ. ಪ್ರಾಣೇಶ್, ಎಸ್.ಎಲ್. ಭೋಜೇಗೌಡ ಕೂಡ ಗೈರು ಹಾಜರಾಗಿದ್ದರು. ಅಂದರೆ, ಬಿಜೆಪಿಯ ಸಂಖ್ಯಾ ಬಲ ಕೇವಲ17 ರಷ್ಟಿತ್ತು. ಬಿಜೆಪಿ ಆಕ್ರೋಶ:
ಮಧ್ಯಾಹ್ನ 12.28 ಕ್ಕೆ ಸಭೆ ಆರಂಭವಾಗುತ್ತಿದ್ದಂತೆ ಅಧ್ಯಕ್ಷರು ಮಾತನಾಡಿ, ಇದೊಂದು ವಿಶೇಷ ಸಭೆ. ಅಧ್ಯಕ್ಷರ ವಿರುದ್ಧ ಮತ ಚಲಾವಣೆ ಮಾಡುವವರು ಕೈ ಎತ್ತಬೇಕು ಎಂದು ಹೇಳುತ್ತಿದ್ದಂತೆ, ಬಿಜೆಪಿ ನಗರಸಭಾ ಸದಸ್ಯರಾದ ಟಿ. ರಾಜಶೇಖರ್ ಮಾತನಾಡಿ, ಸಭೆಯಲ್ಲಿ ಮೊದಲು ಮಾತನಾಡಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಮಾತನಾಡಲು ಅವಕಾಶ ಇಲ್ಲ, ಈಗಾಗಲೇ ರೂಲಿಂಗ್ ಕೊಟ್ಟಾಗಿದೆ. ಅವಿಶ್ವಾಸ ಮತಯಾಚನೆ ಪ್ರಕ್ರಿಯೆ ನಡೆಯಲಿ ಎಂದು ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಹೇಳಿದರು.ಆಗ ಮಧುಕುಮಾರ್ ರಾಜ್ ಅರಸ್ ಮಾತನಾಡಿ, ನಮ್ಮ ಪಕ್ಷದ ಸದಸ್ಯರ ಮತದಿಂದ ನೀವು ಅಧ್ಯಕ್ಷ ರಾಗಿದ್ದವರು. ನಿಮಗೆ ಅಧಿಕಾರದಲ್ಲಿ ಮುಂದುವರೆಯಲು ಯಾವುದೇ ನೈತಿಕತೆ ಇಲ್ಲ, ನೀವು ರಾಜೀನಾಮೆ ಕೊಡಿ ಎಂದು ಹೇಳುತ್ತಿದ್ದಂತೆ, ಸಭೆ ನಿಯಮವನ್ನು ಮೀರಿ ವರ್ತಿಸಿದರೆ ಸಭೆಯಿಂದ ಹೊರಗೆ ಹಾಕಬೇಕಾಗುತ್ತದೆ ಎಂದು ಅಧ್ಯಕ್ಷರು, ಸದಸ್ಯರಿಗೆ ಖಡಕ್ ಎಚ್ಚರಿಕೆ ನೀಡಿದರು.
ಈ ಗದ್ದಲದ ನಡುವೆ ಕಾಂಗ್ರೆಸ್ ಪಕ್ಷದ ನಗರಸಭಾ ಸದಸ್ಯ ಮುನಿರ್ ಅಹಮದ್ ಮಾತನಾಡಿ, ಸಭೆ ಅಜೆಂಡದಂತೆ ನಡೆಯಲಿ ಎಂದು ಹೇಳುತ್ತಿದ್ದಂತೆ ಬಿಜೆಪಿ ಸದಸ್ಯೆ ಕವಿತಾ ಶೇಖರ್ ಮಧ್ಯ ಪ್ರವೇಶಿಸಿ, ನಾವು ಅಧ್ಯಕ್ಷರ ದುರಾಡಳಿತ ಖಂಡಿಸಿ ಮಾತನಾಡುತ್ತಿದ್ದೇವೆಂದು ಹೇಳಿದರು. ಆಗ ಕೆಲವು ಸದಸ್ಯರಿಂದ ಏನು ಮಾತನಾಡುತ್ತಿದ್ದಾರೆಂದು ತಿಳಿಯದಷ್ಟು ಗದ್ದಲ ಉಂಟಾಯಿತು. ಸಭೆಯನ್ನು ನಿಯಮ ಬದ್ಧವಾಗಿ ನಡೆಸಲು ಅನುವು ಮಾಡಿಕೊಡಬೇಕೆಂದು ಪೌರಾಯುಕ್ತ ಬಿ.ಸಿ. ಬಸವರಾಜ್ ಆಗಾಗ ಹೇಳುತ್ತಲೇ ಇದ್ದರು. ಅಸಂವಿಧಾನಿಕ ಪದಗಳ ಬಳಕೆ ಏರು ಧ್ವನಿ ಪಡೆಯುತ್ತಿದ್ದಂತೆ ನಗರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸಕ್ಕೆ ಸೋಲಾಯಿತೆಂದು ಪರಿಗಣಿಸಲಾಯಿತು.ಈ ವೇಳೆ ಬಿಜೆಪಿ ಸದಸ್ಯರು, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ವಿರುದ್ಧ ಘೋಷಣೆ ಹಾಕಿದರು, ಘೋಷಣೆ ಕೂಗಿ ಸಭಾಂಗಣದಿಂದ ಹೊರ ನಡೆದು, ಅಧ್ಯಕ್ಷರ ಕೊಠಡಿ ಎದುರು ಧರಣಿ ಕುಳಿತರು. ಇವರಿಗೆ ಜೆಡಿಎಸ್ ಸದಸ್ಯರು ಸಾಥ್ ನೀಡಿದರು. ಕೆಲ ಸಮಯದ ಬಳಿಕ ನಗರಸಭೆ ಎಲ್ಲಾ ಸದಸ್ಯರು ಮನೆಗಳಿಗೆ ತೆರಳಿದರು. ಹತ್ತೇ ನಿಮಿಷದಲ್ಲಿ ಅವಿಶ್ವಾಸ ನಿರ್ಣಯ ಸಭೆ ಮುಕ್ತಾಯಗೊಂಡಿತು. ನಗರಸಭೆ ಕಾರ್ಯಾಲಯ ಸೇರಿದಂತೆ ಸುತ್ತಮುತ್ತ ಬಿಗಿ ಪೋಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಕೃಷ್ಣಮೂರ್ತಿ ಸ್ಥಳದಲ್ಲೇ ಮೊಕ್ಕಂ ಹೂಡಿದ್ದರು. ---- ಬಾಕ್ಸ್ --------
ಆಡಳಿತದಲ್ಲಿರುವ ಪಕ್ಷ ಯಾವುದು ?ಚಿಕ್ಕಮಗಳೂರು: ನಗರಸಭೆಯಲ್ಲಿ ಆಡಳಿತದಲ್ಲಿರುವ ಪಕ್ಷ ಯಾವುದು ?
ಈ ಪ್ರಶ್ನೆಗೆ ಧೈರ್ಯವಾಗಿ ಉತ್ತರ ಹೇಳುವ ಮನಸ್ಥಿತಿ ಬಿಜೆಪಿಗೂ ಇಲ್ಲ, ಕಾಂಗ್ರೆಸ್‌ಗೂ ಇಲ್ಲ.ಕಾರಣ, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದು, ಬಿಜೆಪಿಯ ಬಹುಮತದೊಂದಿಗೆ ಅಧ್ಯಕ್ಷರಾಗಿದ್ದವರು. ಅವರು ಮಾತಿಗೆ ತಪ್ಪಿದ್ದರಿಂದ ಪಕ್ಷದಿಂದ ಅಮಾನತು ಮಾಡಲಾಗಿದೆ. ಅವರ ವಿರುದ್ಧ ಅವಿಶ್ವಾಸ ನಿರ್ಣಯದ ಸಭೆಯನ್ನು ಕರೆದು ಕಮಲ ಪಡೆ ರಂಪಾಟ ಮಾಡಿ, ಬೀದಿಯಲ್ಲಿ ಜಗಳವಾಡಿದ್ದಾರೆ. ಹಾಗಾಗಿ ನಗರಸಭೆ ಅಧ್ಯಕ್ಷ ತಮ್ಮ ಪಕ್ಷದವರಲ್ಲ ಎಂದು ಬಿಜೆಪಿ ಹೇಳಿಕೊಳ್ಳುತ್ತಿದೆ.
ನಗರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಅವಿಶ್ವಾಸ ನಿರ್ಣಯಕ್ಕೆ ಸೋಲಾಗುತ್ತಿದ್ದಂತೆ ಕಾಂಗ್ರೆಸ್‌ನ ನಗರಸಭೆ ಸದಸ್ಯರು ಚಪ್ಪಾಳೆ ತಟ್ಟಿದರು. ಬಿಜೆಪಿ ಸದಸ್ಯರು ಸಭಾಂಗಣದಿಂದ ಹೊರಗೆ ನಡೆಯುತ್ತಿದ್ದಂತೆ ಅಧ್ಯಕ್ಷರು, ಕಾಂಗ್ರೆಸ್ ನಗರಸಭೆ ಸದಸ್ಯರೊಂದಿಗೆ ಮುನ್ನಲೆಗೆ ಬಂದರು. ಹಾಗಾದರೆ, ಇದೀಗ ನಗರಸಭೆಯಲ್ಲಿ ಆಡಳಿತದಲ್ಲಿರೋದು ಕಾಂಗ್ರೆಸ್ ಪಕ್ಷನಾ,..ಇದನ್ನು ಪಕ್ಷ ಒಪ್ಪಿಕೊಳ್ಳಲು ಕಾಂಗೆಸ್ ಸಿದ್ಧವಿದೆಯಾ..?ನಗರಸಭೆ ಆಡಳಿತದಲ್ಲಿ ಬಿಜೆಪಿಗೆ ಮುಖಭಂಗ ಮಾಡಬೇಕೆಂಬ ಕಾಂಗ್ರೆಸ್ ಪಕ್ಷದ ಪ್ಲಾನ್ ಸಕ್ಸಸ್ ಆಯಿತು. ಅಧಿಕಾರ ತಮ್ಮ ಪಕ್ಷದ ಕೈಯಲ್ಲಿ ಇಲ್ಲದಿದ್ದರೂ ರಿಮೋಟ್ ಕಂಟ್ರೋಲ್‌ನಲ್ಲಿ ಕಾಂಗ್ರೆಸ್ ಗೇಮ್ ನಡೆಸಿಕೊಂಡು ಹೋಗಲಿದೆ.
-------ಸಂಖ್ಯಾ ಬಲ ಇಲ್ಲದಿದ್ದರಿಂದ ಗೊಂದಲ ಉಂಟು ಮಾಡಿದರು. ನಾನು, ಸಣ್ಣ ಸಮುದಾಯಕ್ಕೆ ಸೇರಿದವ. ದೊಡ್ಡ ಸಮುದಾಯಕ್ಕೆ ಸೇರಿದ್ದರೆ ಅವಿಶ್ವಾಸ ನಿರ್ಣಯಕ್ಕೆ ಕೈ ಹಾಕುತ್ತಿರಲಿಲ್ಲ. ನಾನು ಬಿಜೆಪಿಯಿಂದ ಸ್ಪರ್ಧೆ ಮಾಡಿ ಗೆದ್ದಿದ್ದೇನೆ. ನಾನು ಬಿಜೆಪಿನೇ.
- ವರಸಿದ್ದಿ ವೇಣುಗೋಪಾಲ್ಅಧ್ಯಕ್ಷ, ನಗರಸಭೆ
-----ಬಿಜೆಪಿ ಪಕ್ಷದಿಂದ ಗೆದ್ದಿರುವ ನಗರಸಭೆ ಅಧ್ಯಕ್ಷರ ಆಡಳಿತ ವೈಖರಿಯಿಂದ ಬೇಸತ್ತು ಅವರ ಪಕ್ಷದವರೇ ವಿರೋಧ ವ್ಯಕ್ತಪಡಿಸಿದ್ದಾರೆ. ನಮ್ಮ ಪಕ್ಷವೂ ಕೂಡ ಬೆಂಬಲ ಸೂಚಿಸಿತ್ತು. ಇದೀಗ ಅವರು ಅಲ್ಪಮತಕ್ಕೆ ಕುಸಿದಿದ್ದಾರೆ. ಮುಂದಿನ ದಿನಗಳಲ್ಲಿ ನಗರಸಭೆಯಲ್ಲಿ ಉತ್ತಮ ರೀತಿಯಲ್ಲಿ ಆಡಳಿತ ನಡೆಯೋದಿಲ್ಲ. ಸಭೆಯಲ್ಲಿ ಯಾವುದೇ ನಿರ್ಣಯ ಕೈಗೊಳ್ಳಲು ಅಧ್ಯಕ್ಷರಿಗೆ ಅಧಿಕಾರ ಇಲ್ಲ.
- ಎ.ಸಿ. ಕುಮಾರಗೌಡನಗರಸಭಾ ಸದಸ್ಯ, ಜೆಡಿಎಸ್
------ನಗರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸಿರುವುದು ಬಿಜೆಪಿಯವರು, ನಾವು ತಟಸ್ಥವಾಗಿರಬೇಕು ಎಂಬುದು ನಮ್ಮ ಪಕ್ಷದ ನಿಲುವಾಗಿತ್ತು. ಅದರಂತೆ ನಮ್ಮ ಸದಸ್ಯರು ನಡೆದುಕೊಂಡಿದ್ದಾರೆ. ಅವಿಶ್ವಾಸಕ್ಕೆ ಸೋಲಾಗಿದೆ. ಅದು, ಅವರ ಪಕ್ಷದ ಅಂತರಿಕ ವಿಚಾರ. ಅವರ ಪಕ್ಷದಲ್ಲಿ ಗೊಂದಲ ಇದೆ. ಅದನ್ನು ಬಗೆ ಹರಿಸಿಕೊಳ್ಳದೆ ಬೇರೆಯವರ ಮೇಲೆ ಆರೋಪ ಮಾಡುತ್ತಿದ್ದಾರೆ. ಕುಣಿಯಲಾರದೆ ನೆಲ ಡೊಂಕು ಎನ್ನುತ್ತಿದ್ದಾರೆ. ನಗರಸಭೆ ಅಧ್ಯಕ್ಷರು ಬಿಜೆಪಿಯವರು.
- ಎಚ್.ಡಿ. ತಮ್ಮಯ್ಯಶಾಸಕ -----ಅವಿಶ್ವಾಸ ನಿರ್ಣಯ ಸಭೆ ನಿಯಮಬದ್ಧವಾಗಿ ನಡೆದಿಲ್ಲ. ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮುಂದಿನ ದಿನಗಳಲ್ಲಿ ದೂರು ಸಲ್ಲಿಸಲಾಗುವುದು. ಅಧ್ಯಕ್ಷರ ವಿರುದ್ಧ ನಮಗೆ ವಿಶ್ವಾಸ ಇಲ್ಲ ಎಂದು 21 ಜನ ಸಹಿ ಮಾಡಿದ್ದರು. ಆ ಸ್ಥಾನದಲ್ಲಿ ಮುಂದುವರೆಯಲು ಯೋಗ್ಯತೆ ಇಲ್ಲ. ಅವರು ನಮ್ಮ ಪಕ್ಷದ ಋಣದಲ್ಲಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿ.ಟಿ. ರವಿ ಅವರಿಗೆ ಮತ ಕಡಿಮೆಯಾಗಲು ವರಸಿದ್ಧಿ ಕಾರಣ, ಆ ಋಣವನ್ನು ಈಗಿನ ಶಾಸಕರು ಹಾಗೂ ಕಾಂಗ್ರೆಸ್‌ನ ಸದಸ್ಯರು ತೀರಿಸಿದ್ದಾರೆ.- ಟಿ. ರಾಜಶೇಖರ್ ನಗರಸಭಾ ಸದಸ್ಯರು, ಬಿಜೆಪಿ ----------- 10 ಕೆಸಿಕೆಎಂ 1ಚಿಕ್ಕಮಗಳೂರು ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಧ್ಯಕ್ಷರ ವಿರುದ್ಧದ ಅವಿಶ್ವಾಸ ನಿರ್ಣಯ ಸಭೆಯಲ್ಲಿ ಬಿಜೆಪಿ ಸದಸ್ಯರು ಅಧ್ಯಕ್ಷರನ್ನು ಕುರಿತು ಮಾತನಾಡುತ್ತಿರುವುದು.--- 10 ಕೆಸಿಕೆಎಂ 2ಚಿಕ್ಕಮಗಳೂರು ನಗರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಸಭೆ ನಡೆಯುವ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಂಡಿರುವುದು.