ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು : ದೇಶದಲ್ಲೇ ಅತಿ ಎತ್ತರದ ಸ್ಕೈಡೆಕ್ (ವೀಕ್ಷಣಾ ಗೋಪುರ) ಎಚ್‌ಎಎಲ್ ಸಮೀಪದ ಖಾಲಿ ಜಾಗದಲ್ಲಿ ಸ್ಕೈಡೆಕ್ ನಿರ್ಮಾಣಕ್ಕೆ ಕೇಂದ್ರ ರಕ್ಷಣಾ ಇಲಾಖೆ ಒಪ್ಪದ ಹಿನ್ನೆಲೆಯಲ್ಲಿ ಇದೀಗ ಹೊಸ ಜಾಗ ಹುಡುಕಾಟಕ್ಕೆ ಬಿಬಿಎಂಪಿ ಮುಂದಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನ ಸೌಂದರ್ಯವನ್ನು ಆಗಸದೆತ್ತರದ ವೀಕ್ಷಣಾ ಗೋಪುರದಿಂದ ಜನರಿಗೆ ತೋರಿಸಲು ಹಾಗೂ ನಗರಕ್ಕೆ ಒಂದು ಹೆಗ್ಗುರುತನ್ನು ನಿರ್ಮಿಸಲು ರಾಜ್ಯ ಸರ್ಕಾರ ಸುಮಾರು 250 ಮೀಟರ್ ಎತ್ತರದ ಸ್ಕೈಡೆಕ್ ನಿರ್ಮಾಣಕ್ಕೆ ನಿರ್ಧರಿಸಿದ್ದು, ರಾಜ್ಯ ಸರ್ಕಾರದ ಬಜೆಟ್‌ನಲ್ಲಿಯೂ ಸಹ ಘೋಷಿಸಲಾಗಿದೆ.
ಕಳೆದ ಅಕ್ಟೋಬರ್‌ನಿಂದ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಅಧಿಕಾರಿಗಳ ಹಾಗೂ ಖಾಸಗಿ ಸಂಸ್ಥೆಗಳೊಂದಿಗೆ ಹಲವು ಸುತ್ತಿನ ಸಭೆ ನಡೆಸಿ ಯೋಜನೆ ಅನುಷ್ಠಾನದ ಹೊಣೆಯನ್ನು ಬಿಬಿಎಂಪಿಗೆ ನೀಡಲಾಗಿತ್ತು.
ರಕ್ಷಣಾ ಇಲಾಖೆಯಿಂದ ತಡೆ: ಈ ಹಿಂದೆ ಬಿಬಿಎಂಪಿ ಅಧಿಕಾರಿಗಳು ಎಚ್‌ಎಎಲ್ ಸಮೀಪದ ಖಾಲಿ ಜಾಗದಲ್ಲಿ ಅತಿ ಎತ್ತರದ ವೀಕ್ಷಣಾ ಗೋಪುರ ನಿರ್ಮಿಸಲು ನಿರ್ಧರಿಸಲಾಗಿತ್ತು. ಆದರೆ, ಬಿಬಿಎಂಪಿಯ ಸ್ಕೈಡೆಕ್ ಯೋಜನೆಗೆ ಕೇಂದ್ರ ರಕ್ಷಣಾ ಇಲಾಖೆ ಮತ್ತು ವಾಯುಪಡೆ ಇಲಾಖೆಯ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಎಚ್‌ಎಎಲ್ ವಾಯು ನೆಲೆಯಲ್ಲಿ ವಾಯು ಪಡೆಯ ವಿಮಾನಗಳು ವೈಮಾನಿಕ ಕಸರತ್ತು ನಡೆಸುತ್ತವೆ. ಸ್ಕೈಡೆಕ್ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳ ಕೇವಲ 100 ಮೀಟರ್ ಅಂತರದಲ್ಲಿ ಇದೆ. ಹೀಗಾಗಿ, ಸ್ಕೈಡೆಕ್ ನಿರ್ಮಾಣಕ್ಕೆ ಅನುಮತಿ ನೀಡಿಲ್ಲ ಎಂದು ಪಾಲಿಕೆಯ ಹಿರಿಯ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಸ್ಪಷ್ಟಪಡಿಸಿದ್ದಾರೆ.
20ರಿಂದ 25 ಎಕರೆ ಅಗತ್ಯ
ಸ್ಕೈಡೆಕ್ ನಿರ್ಮಾಣ ಮಾಡುವುದಕ್ಕೆ ಸುಮಾರು ಒಂದರಿಂದ ಎರಡು ಎಕರೆ ಸಾಕಾಗಲಿದೆ. ಆದರೆ, ಉದ್ಯಾನ ವನ, ಪ್ರಮುಖವಾಗಿ ಸ್ಕೈಡೆಕ್‌ನಲ್ಲಿ ವಾಹನ ನಿಲುಗಡೆಗೆ ಅವಕಾಶ, ಮ್ಯೂಸಿಯಂ, ರೆಸ್ಟೋರೆಂಟ್‌ಗಳು, ಸಿನಿಮಾ ಮಂದಿರ, ಶಾಪಿಂಗ್ ಮಳಿಗೆಗಳು ಹೀಗೆ ಹಲವು ವಾಣಿಜ್ಯ ಚಟುವಟಿಕೆಗಳಿಗೆ ಸ್ಕೈಡೆಕ್‌ನಲ್ಲಿ ಅವಕಾಶ ನೀಡಲಾಗುತ್ತದೆ. ಹೀಗಾಗಿ, ಸುಮಾರು 20 ರಿಂದ 25 ಎಕರೆ ಖಾಲಿ ಜಾಗದ ಅವಶ್ಯಕತೆ ಇದೆ. ಅಷ್ಟೊಂದು ಜಾಗ ಒಂದೇ ಕಡೆ ಇರುವ ಸ್ಥಳ ಹುಡುಕುವ ಹೊಣೆ ಅಧಿಕಾರಿಗಳ ಮೇಲೆ ಬಿದ್ದಿದೆ.ಮೂರು ಸ್ಥಳ ಪರಿಶೀಲನೆ
ಎಚ್‌ಎಎಲ್ ಬಳಿ ಸ್ಕೈಡೆಕ್ ನಿರ್ಮಾಣ ಸಾಧ್ಯವಿಲ್ಲ ಎಂದು ತಿಳಿಯುತ್ತಿದ್ದಂತೆ ಬಿಬಿಎಂಪಿ ಅಧಿಕಾರಿಗಳು ಮೈಸೂರು ರಸ್ತೆಯ ಕಡೆ ಮುಖ ಮಾಡಿದ್ದಾರೆ. ಕೊಮ್ಮಘಟ್ಟ, ಜ್ಞಾನ ಭಾರತಿ ಹಾಗೂ ಸೋಮಪುರದ ಬಳಿ ಖಾಲಿ ಜಾಗ ಪರಿಶೀಲನೆ ನಡೆಸಿದ್ದು, ಇನ್ನೂ ಅಂತಿಮಗೊಳಿಸಿಲ್ಲ ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.