ಪರಶಿವಮೂರ್ತಿ ಮಾಟಲದಿನ್ನಿ
ಬೀಜ ಮಾರಾಟ ಆರಂಭವಾಗಿ ಹತ್ತು ದಿನ ಕಳೆದರೂ ನಿರೀಕ್ಷಿತ ಮಟ್ಟದ ವಹಿವಾಟು ನಡೆದಿಲ್ಲ. ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ ದಾಸ್ತಾನು ಲಭ್ಯವಿದ್ದರೂ, ಖರೀದಿಸುವವರು ಇಲ್ಲ.
ಹಿಂಗಾರು ಹಂಗಾಮಿಗೆ ಅಗತ್ಯವಾದ ಬಿತ್ತನೆ ಬೀಜಗಳನ್ನು ಕೃಷಿ ಇಲಾಖೆಯು ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಿಸಲು ಸಿದ್ಧತೆ ಮಾಡಿಕೊಂಡಿದೆ. ಆದರೆ, ರೈತರು ಬೀಜ ಖರೀದಿಗೆ ಆಸಕ್ತಿ ತೋರುತ್ತಿಲ್ಲ. ಹೊಲಗಳಲ್ಲಿ ತೇವಾಂಶದ ಕೊರತೆ ಇರುವುದರಿಂದ ಬಿತ್ತನೆ ಮಾಡಿದ ಬೀಜ ಮೊಳಕೆಯೊಡೆಯುವ ಕುರಿತು ರೈತರಲ್ಲಿ ಅನುಮಾನ ಇದೆ. ಮಳೆಯಾದ ಬಳಿಕವೇ ಬಿತ್ತನೆ ಕಾರ್ಯ ಆರಂಭಿಸಲು ನಿರ್ಧರಿಸಿದ್ದಾರೆ.1,428.80 ಕ್ವಿಂಟಲ್ ಬೀಜ ದಾಸ್ತಾನು: ಕೃಷಿ ಇಲಾಖೆಯ ಲಭ್ಯ ಮಾಹಿತಿಯ ಪ್ರಕಾರ, ಒಟ್ಟು 1,428.80 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ಈ ಪೈಕಿ 426.03 ಕ್ವಿಂಟಲ್ ಬೀಜ ಮಾರಾಟವಾಗಿದ್ದು, 1,002.77 ಕ್ವಿಂಟಾಲ್ ಬೀಜ ದಾಸ್ತಾನು ಉಳಿದಿದೆ. ಒಟ್ಟು ದಾಸ್ತಾನಿನ ಪೈಕಿ ಸುಮಾರು ಶೇ. 29.8ರಷ್ಟು ಬೀಜ ಮಾರಾಟವಾಗಿದ್ದರೆ, ಶೇ. 70.2ರಷ್ಟು ಬೀಜ ಇನ್ನೂ ಮಾರಾಟವಾಗಬೇಕಿದೆ.
ಒಂದು ಕಡೆ ರೈತರು ಬಿತ್ತನೆಗೆ ಅನುಕೂಲಕರವಾದ ಮಳೆಯ ನಿರೀಕ್ಷೆಯಲ್ಲಿದ್ದರೆ, ಮತ್ತೊಂದೆಡೆ ಕೃಷಿ ಇಲಾಖೆ ದಾಸ್ತಾನು ಮಾಡಿರುವ ಬೀಜಗಳ ಮಾರಾಟ ಹೆಚ್ಚಳವಾಗುವ ನಿರೀಕ್ಷೆಯಲ್ಲಿದೆ. ಮಳೆಯಾದ ನಂತರವೇ ಬಿತ್ತನೆ: ಮುಂಗಾರಿನಲ್ಲಿ ಬರ ಕಂಡಿದ್ದ ರೈತರು ಹಿಂಗಾರು ಹಂಗಾಮಿನಲ್ಲಿ ಉತ್ತಮ ಬೆಳೆ ಪಡೆಯುವ ನಿರೀಕ್ಷೆಯಿದ್ದರೂ, ಮಳೆಯಿಲ್ಲದೆ ರೈತರು ಕೃಷಿ ಚಟುವಟಿಕೆ ಆರಂಭಿಸಲು ಸಾಧ್ಯವಾಗುತ್ತಿಲ್ಲ. ಹಿಂಗಾರು ಬಿತ್ತನೆಗೆ ಮಳೆಯ ಅವಶ್ಯಕತೆಯಿದೆ. ಸಮರ್ಪಕ ಮಳೆಯಾಗದೆ ಹೊಲದಲ್ಲಿ ಬಿತ್ತನೆ ಮಾಡಿದರೆ ಬೀಜ ಮೊಳಕೆಯೊಡೆಯುವ ಬಗ್ಗೆ ಆತಂಕವಿದೆ. ಹೀಗಾಗಿ ಮಳೆಯಾದ ನಂತರವೇ ಬಿತ್ತನೆ ಮಾಡಲು ನಿರ್ಧರಿಸಿದ್ದೇವೆ ಎಂದು ಪಟ್ಟಣದ ರೈತ ಶರಣಪ್ಪ ಕುಷ್ಟಗಿ ಹೇಳಿದರು.ನಿರೀಕ್ಷಿತ ಪ್ರಮಾಣದಲ್ಲಿ ಮಾರಾಟವಾಗಿಲ್ಲ: ಹಿಂಗಾರು ಹಂಗಾಮಿಗೆ ಅಗತ್ಯವಾದ ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ. ಆದರೆ, ಮಳೆಯ ಕೊರತೆಯಿಂದಾಗಿ ರೈತರು ಬೀಜ ಖರೀದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿಲ್ಲ. ಮಾರಾಟ ಆರಂಭವಾಗಿ ಹತ್ತು ದಿನ ಕಳೆದರೂ ನಿರೀಕ್ಷಿತ ಪ್ರಮಾಣದಲ್ಲಿ ಮಾರಾಟವಾಗಿಲ್ಲ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದರೆ ರೈತರು ಬಿತ್ತನೆ ಕಾರ್ಯ ಆರಂಭಿಸಲಿದ್ದು, ಬೀಜ ಮಾರಾಟವೂ ಚುರುಕಾಗುವ ನಿರೀಕ್ಷೆಯಿದೆ ಎಂದು ಕುಷ್ಟಗಿ ತಾಂತ್ರಿಕ ವಿಭಾಗದ ಕೃಷಿ ಅಧಿಕಾರಿ ರಾಜಶೇಖರ ಪಾಟೀಲ್ ಹೇಳಿದರು.