ಮೈಸೂರು: ಕರ್ನಾಟಕದಲ್ಲಿ ಕನ್ನಡಕ್ಕೆ ಅಗ್ರ ಮಾನ್ಯತೆ ದೊರೆಯಬೇಕೆಂದು ಜೀವನದ ಅಂತ್ಯದವರೆಗೂ ಹೋರಾಡಿ ಕನ್ನಡವನ್ನೇ ಉಸಿರಾಗಿಸಿಕೊಂಡಿದ್ದ ದೇಜಗೌ ಕನ್ನಡದ ಅಸ್ಮಿತೆ ಎಂದು ಅಚೀವರ್ಸ್ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಸಿ.ಆರ್. ಪುಟ್ಟರಾಜು ಹೇಳಿದರು.
ಮೈಸೂರು ವಿಶ್ವವಿದ್ಯಾನಿಲಯ ಸ್ನಾತಕ ಗ್ರಂಥಾಲಯದಲ್ಲಿ ಕನ್ನಡ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಗ್ರಂಥಾಲಯ ಸಿಬ್ಬಂದಿವರ್ಗದವರು ಏರ್ಪಡಿಸಿದ್ದ ನಾಡೋಜ ದೇಜಗೌ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.
ಕನ್ನಡದ ಸಾಹಿತಿಯಾಗಿ, ಶಿಕ್ಷಣತಜ್ಞರಾಗಿ, ಜಾನಪದ ವಿದ್ವಾಂಸರಾಗಿ, ಆಡಳಿತಗಾರರಾಗಿ ಹಾಗೂ ಕನ್ನಡಪರ ಹೋರಾಟಗಾರರಾಗಿ ಕನ್ನಡ ಸಾಹಿತ್ಯದ ಕಣಜವನ್ನು ತಮ್ಮ ಅನುಪಮ ಕೃತಿಗಳ ಮೂಲಕ ತುಂಬಿದ ಬಹುಮುಖ ಸೇವೆಯ ಅಪ್ರತಿಮ ಸಾಧಕರು. ಜಾನಪದ ವಸ್ತು ಸಂಗ್ರಹಾಲಯ ದೇಜಗೌ ಅವರು ಸ್ಥಾಪಿಸಿದ ಸಂಸ್ಥೆಗಳಲ್ಲಿ ಅತ್ಯಂತ ಪ್ರಮುಖವಾದದ್ದು. ಇಂದು ಅದು ದಕ್ಷಿಣ ಏಷ್ಯಾದಲ್ಲಿಯೇ ಅತ್ಯುತ್ತಮ ವಸ್ತು ಸಂಗ್ರಹಾಲಯಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕನ್ನಡ ಎಂ.ಎ. ಅಧ್ಯಯನ ಮಾಡುವವರಿಗೆ ಜಾನಪದ ಸಾಹಿತ್ಯ ಓದುವ ಅವಕಾಶ ಕಲ್ಪಿಸಿದ ಕೀರ್ತಿ ದೇಜಗೌ ಅವರಿಗೆ ಸಲ್ಲುತ್ತದೆ. ಕನ್ನಡ ಚಟುವಟಿಕೆಗಳನ್ನು ಕೇಂದ್ರೀಕರಿಸುವ ದೃಷ್ಟಿಯಿಂದ ದೇಜಗೌ ಸ್ಥಾಪಿಸಿದ ಮೊದಲ ಸಂಸ್ಥೆ ಇದಾಗಿದೆ. ಭಾಷೆಯೊಂದಕ್ಕೆ ಇಂತಹ ಸಂಸ್ಥೆಯನ್ನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ
ಸ್ಥಾಪಿಸಿದ ಶ್ರೇಯಸ್ಸು ದೇಜಗೌ ಅವರಿಗೆ ಸಲ್ಲುತ್ತದೆ ಎಂದರು.ಮಾನಸಗಂಗೋತ್ರಿ ಇಂದು ಹಸಿರು ಗಿಡಮರಗಳಿಂದ ಕಂಗೊಳಿಸುತ್ತಿದ್ದರೆ ಅದಕ್ಕೆ ಕಾರಣ ಅಂದು ಕುಲಪತಿಗಳಾಗಿದ್ದ ದೇಜಗೌ ಮಾಡಿದ ಸ್ತುತ್ಯಕಾರ್ಯ. ದೇಜಗೌ ಕನ್ನಡದ ಗದ್ಯಶಿಲ್ಪಿ. ಕನ್ನಡ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಕೃತಿ ರಚಿಸಿದ್ದಾರೆ. ಆತ್ಮಕಥೆ, ಜೀವನ ಚರಿತ್ರೆ, ದಿನಚರಿ, ಪ್ರವಾಸ ಸಾಹಿತ್ಯ, ಜಾನಪದ ಸಾಹಿತ್ಯ, ನಾಟಕ, ಪ್ರಬಂಧ, ಕಾದಂಬರಿ, ಭಾಷಾಂತರ ಸಂಶೋಧನೆ ಹೀಗೆ ವೈವಿಧ್ಯಮಯವಾದ ಮುನ್ನೂರಕ್ಕೂ ಹೆಚ್ಚು
ಕೃತಿಗಳನ್ನು ಬರೆದಿದ್ದಾರೆ. ಕನ್ನಡಕ್ಕಾಗಿ, ಶಾಸ್ತ್ರೀಯ ಭಾಷೆಗಾಗಿ ಅವರು ನಡೆಸಿದ ಹೋರಾಟ ಅವಿಸ್ಮರಣೀಯವಾದುದು ಎಂದು ಅವರು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಯುವರಾಜ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಸಿ.ಡಿ. ಪರಶುರಾಮ, ಸ್ನಾತಕ ಗ್ರಂಥಾಲಯದ ಗ್ರಂಥಪಾಲಕ ಡಾ. ವೈ.ಎಲ್. ಸೋಮಶೇಖರ್ ಮಾತನಾಡಿದರು.
ಕೆ. ಚಿಕ್ಕಣ್ಣ ಸ್ವಾಗತಿಸಿದರು, ಎಚ್. ಬೀರೇಶ್ ವಂದಿಸಿದರು. ಗ್ರಂಥಾಲಯ ಸಹಾಯಕಿ ಎನ್. ಕವಿತಾ ನಿರೂಪಿಸಿದರು. ಸಹಾಯಕ ಗ್ರಂಥಪಾಲಕಿ ಕೆ. ಮಂಜುಳಾ ಪ್ರಾರ್ಥಿಸಿದರು.