ಕಾಯಂ ಉಪನ್ಯಾಸಕರ ಹುದ್ದೆ ನೇಮಕಾತಿ ವಿಳಂಬ ಸರಿಯಲ್ಲ: ಸುರೇಶಗೌಡ ಪಾಟೀಲ

KannadaprabhaNewsNetwork |  
Published : Aug 02, 2025, 12:00 AM IST
ಮ | Kannada Prabha

ಸಾರಾಂಶ

ದಶಕಗಳಿಂದ ಉಪನ್ಯಾಸಕರ ಹುದ್ದೆಗಳಿಗೆ ಕಾಯಂ ನೇಮಕಾತಿಗೆ ವಿಳಂಬವಾಗಿದ್ದರಿಂದ ಅಲ್ಪಾವಧಿ ಉಪನ್ಯಾಸಕರ ನೆಚ್ಚಿಕೊಳ್ಳುವಂತಾಗಿದ್ದು, ಖಾಸಗಿ ಶಿಕ್ಷಣ ಸಂಸ್ಥೆಗಳು ಸ್ವಂತ ಹಣದಿಂದಲೇ ಅವರ ವೇತನ ನಿಭಾಯಿಸಬೇಕಾಗಿದ್ದು, ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸುವುದೇ ದುಸ್ತರವಾಗಿದೆ.

ಬ್ಯಾಡಗಿ: ಉಪನ್ಯಾಸಕರ ಹುದ್ದೆಗೆ ಕಾಯಂ ನೇಮಕಾತಿಗೆ ಅವಕಾಶ ನೀಡದಿರುವ ಸರ್ಕಾರಗಳ ವಿಳಂಬ ನೀತಿಯಿಂದ ಪ್ರಥಮದರ್ಜೆ ಕಾಲೇಜುಗಳ ನಿರ್ವಹಣೆ ಅಸಾಧ್ಯವಾಗಿದ್ದು, ಸರ್ಕಾರಗಳು ಆಡಳಿತ ಮಂಡಳಿಗಳನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತೆ ಮಾಡುತ್ತಿವೆ ಎಂದು ಮಾಜಿ ಶಾಸಕ ಹಾಗೂ ಬಿಇಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುರೇಶಗೌಡ ಪಾಟೀಲ ಬೇಸರ ವ್ಯಕ್ತಪಡಿಸಿದರು.

ವರ್ತಕರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಆವರಣದಲ್ಲಿ 36 ವರ್ಷಗಳ ಸುದೀರ್ಘ ಸೇವೆಯ ಸಲ್ಲಿಸಿ ನಿವೃತ್ತರಾದ ಪ್ರಾಚಾರ್ಯ ಡಾ. ಎಸ್.ಜಿ. ವೈದ್ಯ ಹಾಗೂ ಶಿಕ್ಷಕಿ ಸುನಂದ ಮೂಲಿಮನಿ ಅವರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ದಶಕಗಳಿಂದ ಉಪನ್ಯಾಸಕರ ಹುದ್ದೆಗಳಿಗೆ ಕಾಯಂ ನೇಮಕಾತಿಗೆ ವಿಳಂಬವಾಗಿದ್ದರಿಂದ ಅಲ್ಪಾವಧಿ ಉಪನ್ಯಾಸಕರ ನೆಚ್ಚಿಕೊಳ್ಳುವಂತಾಗಿದ್ದು, ಖಾಸಗಿ ಶಿಕ್ಷಣ ಸಂಸ್ಥೆಗಳು ಸ್ವಂತ ಹಣದಿಂದಲೇ ಅವರ ವೇತನ ನಿಭಾಯಿಸಬೇಕಾಗಿದ್ದು, ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸುವುದೇ ದುಸ್ತರವಾಗಿದೆ ಎಂದರು.

ಕಾಲೇಜು ಆಡಳಿತ ಮಂಡಳಿಯ ಉಪಾಧ್ಯಕ್ಷ ಹಾಗೂ ಗ್ಯಾರಂಟಿ ಯೋಜನೆಗಳನ್ನು ರಾಜ್ಯ ಘಟಕದ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿ, ಪ್ರಾಚಾರ್ಯ ಡಾ. ಎಸ್.ಜಿ. ವೈದ್ಯ ಕಾಲೇಜಿನಲ್ಲಿ ವೃತ್ತಿಯ ಜತೆಗೆ ಹಲವಾರು ಸಂಶೋಧನಾ ಹಾಗೂ ಅಧ್ಯಯನ ಗ್ರಂಥಗಳನ್ನು ರಚಿಸಿದ್ದಾರೆ ಎಂದು ಬಣ್ಣಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಪ್ರಾಚಾರ್ಯ ಡಾ. ಎಸ್.ಜಿ. ವೈದ್ಯ ಅವರು, ಶೈಕ್ಷಣಿಕ ಸಂಸ್ಥೆಗಳನ್ನು ಮುನ್ನಡೆಸುವ ಪ್ರಾಚಾರ್ಯರಿಗೆ ಕಷ್ಟ, ಕೌಶಲ್ಯ, ಕಸರತ್ತು ಅವಶ್ಯ. ಶಿಕ್ಷಣ ಸಂಸ್ಥೆಗಳ ಶ್ರೇಯೋಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ತಮ್ಮ ಸಿಬ್ಬಂದಿ ಜತೆ ತಾಳ್ಮೆಯ ಮೂಲಕವೇ ನಿಭಾಯಿಸಬೇಕಾಗುತ್ತದೆ ಎಂದರು.

ಆಡಳಿತ ಮಂಡಳಿಯ ಡಾ. ಎಸ್.ಎನ್. ನಿಡಗುಂದಿ, ರಾಜು ಮೊರಿಗೇರಿ, ಎಲ್ ಎಂ. ಪಾಟೀಲ, ಸಂಗಪ್ಪ ಮಾಳಗಿ, ಗಿರೀಶಗೌಡ್ರ ಪಾಟೀಲ, ಸಿದ್ದು ಪಾಟೀಲ, ನಾಗರಾಜ ದೇಸೂರ, ಅಂಬಾಲಾಲ ಜೈನ್ , ಆನಂದ ಜೈನ್, ನೂತನ ಪ್ರಾಚಾರ್ಯ ಎನ್.ಎಸ್. ಪ್ರಶಾಂತ, ನಿವೃತ್ತ ಉಪನ್ಯಾಸಕರಾದ, ಡಾ. ಪ್ರೇಮಾನಂದ್ ಲಕ್ಕಣ್ಣವರ, ಕೆ.ಜಿ. ಖಂಡೇಬಾಗೂರ, ಕೆ.ಎಂ. ಕಟಗಿಹಳ್ಳಿ, ಸಿ. ಶಿವಾನಂದಪ್ಪ, ಎಸ್.ಡಿ. ಬಾಲಾಜಿರಾವ್, ಎಂ.ಜಿ. ನಂದರಗಿ, ಎಸ್.ವಿ. ಉಜ್ಜಯನಿಮಠ, ಪಿ.ಎಂ. ರಾಮಗಿರಿ, ಚನ್ನಮ್ಮ ಕೋರಿಶೆಟ್ಟರ, ಎಸ್.ಎಲ್. ತೆಂಬದ ಉಪನ್ಯಾಸಕರಾದ ಪ್ರಭುಲಿಂಗ ದೊಡ್ಮನಿ ಸುರೇಶಕುಮಾರ ಪಾಂಗಿ ಹಾಗೂ ಇತರರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ