ದೊಡ್ಡಬಳ್ಳಾಪುರ: ಸರ್ಕಾರದ ಮಾರ್ಗಸೂಚಿಯಂತೆ ಜನನ-ಮರಣ ನೋಂದಣಿಯನ್ನು ವಿಳಂಬ ಮಾಡದೆ ನಿಯಮಾನುಸಾರ ನಿಗದಿತ ಸಮಯದೊಳಗೆ ಪೂರ್ಣಗೊಳಿಸಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಎನ್. ಶಿವಶಂಕರ್ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿರುವ ಆಯಾ ತಾಲೂಕಿನ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ತಹಸೀಲ್ದಾರ್, ತಾಲೂಕು ಆರೋಗ್ಯಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕಾಲಕಾಲಕ್ಕೆ ಭೇಟಿ ನೀಡಿ ಜನನ ಮರಣ ನೋಂದಣಿ ಘಟಕಗಳನ್ನು ತಪಾಸಣೆ ಮಾಡಬೇಕು. ಪ್ರತಿ ತಿಂಗಳಿಗೊಮ್ಮೆ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಜನನ ಮರಣ ವಿಷಯಕ್ಕೆ ಸಂಬಂಧಿಸಿದಂತೆ ತಾಲೂಕು ಮಟ್ಟದ ಸಮನ್ವಯ ಸಮಿತಿ ಸಭೆಯನ್ನು ನಡೆಸಿ ವರದಿ ನೀಡಬೇಕು ಎಂದು ಹೇಳಿದರು.
ಜನ್ಮ ತಂತ್ರಾಂಶದಲ್ಲಿ ದಾಖಲಿಸಿ:ಈ ಜನ್ಮ ತಂತ್ರಾಂಶದ ಆನ್ಲೈನ್ ಅಪ್ಲಿಕೇಶನ್ ಅಲ್ಲಿ ಎಂಟ್ರಿ ಮಾಡಿದ ಮಾಹಿತಿಗಳನ್ನು ಆಸ್ಪತ್ರೆಯ ವೈದ್ಯಾಧಿಕಾರಿಗಳು ಪರಿಶೀಲಿಸಿ ಅನುಮೋದಿಸಬೇಕು. ನೋಂದಣಾಧಿಕಾರಿ, ಉಪನೋಂದಣಾಧಿಕಾರಿಗಳು ನಿರ್ವಹಿಸುವ ಕೆಲಸಗಳನ್ನು ವೈದ್ಯಾಧಿಕಾರಿಗಳು ಸಹ ನಿರ್ವಹಿಸುತ್ತಾರೆ. ಮಾಹಿತಿಗಳು ಅನುಮೋದಿಸಿ ಡಿಜಿಟಲ್ ಸಹಿ ನಂತರ ಜನನ ಮರಣ ಪ್ರಮಾಣ ಪತ್ರಗಳನ್ನು ಸೃಜಿಸಿ ಸಂಬಂಧ ಪಟ್ಟ ವಿಷಯ ನಿರ್ವಾಹಕರು ವಿತರಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ರಾಮಕೃಷ್ಣಯ್ಯ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಲಕ್ಷ್ಮಿಕಾಂತ, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಾಂಖ್ಯಿಕ ಇಲಾಖೆಯ ತಾಲೂಕು ಮಟ್ಟದ ಗಣತಿದಾರರು ಮತ್ತು ಸಾಂಖ್ಯಿಕ ನಿರೀಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು.ಬಾಕ್ಸ್......
ಗ್ರಾಪಂ ಕಾರ್ಯದರ್ಶಿಗಳಿಗೆ ಜನನ-ಮರಣ ನೋಂದಣಿ ಅಧಿಕಾರ:ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಗ್ರಾಪಂ ಕಾರ್ಯದರ್ಶಿಗಳನ್ನು ಸರ್ಕಾರ ಜನನ ಮರಣ ಉಪನೋಂದನಾಧಿಕಾರಿಗಳಾಗಿ ನೇಮಿಸಿದೆ. ಮುಂದಿನ ದಿನಗಳಲ್ಲಿ ಜನನ ಮರಣ ಉಪನೋಂದನಾಧಿಕಾರಿಗಳು ಘಟನೆ ಸಂಭವಿಸಿದ 30 ದಿನಗಳ ಒಳಗೆ ಈ ಜನ್ಮ ತಂತ್ರಾಂಶದಲ್ಲಿ ನೋಂದಾಯಿಸಿ ಯಾವುದೇ ತಪ್ಪಿಲ್ಲದೆ ಸಾರ್ವಜನಿಕರಿಗೆ ಪ್ರಮಾಣ ಪತ್ರಗಳನ್ನು ವಿಸ್ತರಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
27ಕೆಡಿಬಿಪಿ1-ಬೆಂ.ಗ್ರಾ. ಜಿಲ್ಲಾಡಳಿತ ಭವನದಲ್ಲಿ ಜನನ-ಮರಣ ನೊಂದಣಿ ಜಿಲ್ಲಾ ಮಟ್ಟದ ಸಮನ್ವಯ ಸಭೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆಯಿತು.