ಕೆರೆಗಳ ಒತ್ತುವರಿ ತೆರವು ಮಂದಗತಿ: ಸಚಿವರ ಬೇಸರ

KannadaprabhaNewsNetwork |  
Published : Feb 19, 2025, 12:46 AM IST
೧೮ಕೆಎಂಎನ್‌ಡಿ-೧ಮಂಡ್ಯದ ಜಿಪಂ ಸಭಾಂಗಣದಲ್ಲಿ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಿತು. | Kannada Prabha

ಸಾರಾಂಶ

ಜಿಲ್ಲೆಯಲ್ಲಿರುವ ೯೬೨ ಕೆರೆಗಳ ವಿಸ್ತೀರ್ಣವನ್ನು ಅಳತೆ ಮಾಡಿಸಿ ಒತ್ತುವರಿಯನ್ನು ಗುರುತಿಸಿ ಕೊಟ್ಟಿದ್ದರೂ ತೆರವಿಗೆ ವಿಳಂಬ ಮಾಡುತ್ತಿರುವುದೇಕೆ. ಒತ್ತುವರಿ ತೆರವಿಗೆ ನಿಮಗಿರುವ ಸಮಸ್ಯೆಯಾದರೂ ಏನು ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯಲ್ಲಿರುವ ೯೬೨ ಕೆರೆಗಳ ವಿಸ್ತೀರ್ಣವನ್ನು ಅಳತೆ ಮಾಡಿಸಿ ಒತ್ತುವರಿಯನ್ನು ಗುರುತಿಸಿ ಕೊಟ್ಟಿದ್ದರೂ ತೆರವಿಗೆ ವಿಳಂಬ ಮಾಡುತ್ತಿರುವುದೇಕೆ. ಒತ್ತುವರಿ ತೆರವಿಗೆ ನಿಮಗಿರುವ ಸಮಸ್ಯೆಯಾದರೂ ಏನು ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಪ್ರಶ್ನಿಸಿದರು.

ಮಂಗಳವಾರ ಜಿಲ್ಲಾ ಪಂಚಾಯತ್‌ನ ಕಾವೇರಿ ಸಭಾಂಗಣದಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನೀರಾವರಿ, ಪಂಚಾಯತ್‌ರಾಜ್ ಇಲಾಖೆ, ಸಣ್ಣ ನೀರಾವರಿ, ಹೇಮಾವತಿ ನೀರಾವರಿ ಶಾಖೆಗೆ ವರದಿಯನ್ನು ನೀಡಿದ ಮೇಲೆ ಇದುವರೆಗೆ ೨೪೦ ಕೆರೆಗಳ ಒತ್ತುವರಿ ಮಾತ್ರ ತೆರವುಗೊಳಿಸಿದ್ದೀರಿ. ಉಳಿದ ಕೆರೆಗಳ ಒತ್ತುವರಿಯನ್ನು ಯಾವಾಗ ತೆರವುಗೊಳಿಸುವಿರಿ ಎಂದು ಬೇಸರದಿಂದ ಹೇಳಿದರು.

ಆಗ ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ ಡಾ.ಕುಮಾರ ಅವರು, ನಾಲ್ಕು ಇಲಾಖೆಯವರು ಕೆರೆಗಳ ಒತ್ತುವರಿ ತೆರವುಗೊಳಿಸಿ ಟ್ರಂಚ್ ಹೊಡೆಸಿ ಕೆರೆಗೆ ಸೇರಿದ ಜಾಗವನ್ನು ಒತ್ತುವರಿ ಮಾಡಿದಲ್ಲಿ ಕಾನೂನು ಕ್ರಮ ಜರುಗಿಸುವ ನಾಮಫಲಕ ಹಾಕಿದರೆ ಸಾಕು. ಆದರೆ, ಇವರು ತಂತಿಬೇಲಿ ಹಾಕುವುದಕ್ಕೆ ಎಸ್ಟಿಮೇಟ್ ತಯಾರಿಸಿ ೧೨೦ ಕೋಟಿ ರು. ಅನುದಾನದ ಪ್ರಸ್ತಾವನೆಯನ್ನು ಎಂಡಿಯವರಿಗೆ ಕಳುಹಿಸಿದ್ದಾರೆ. ಸರ್ಕಾರ ಅಷ್ಟೊಂದು ಹಣ ಬಿಡುಗಡೆ ಮಾಡುವುದು ಕಷ್ಟವಿದೆ ಎಂದು ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.

ಆಗ ಸಚಿವ ಚಲುವರಾಯಸ್ವಾಮಿ ಅವರು, ಒತ್ತುವರಿ ತೆರವುಗೊಳಿಸಿದ ಬಳಿಕ ಟ್ರಂಚ್ ಹೊಡೆಸಿ ನಾಮಫಲಕ ಹಾಕಿ. ಮತ್ತೆ ಒತ್ತುವರಿ ಮಾಡಿಕೊಂಡರೆ ಕೆರೆ ಯಾವ ಇಲಾಖೆಗೆ ಸೇರುತ್ತದೆಯೋ ಆ ಇಲಾಖೆಯವರು ಒತ್ತುವರಿದಾರರ ವಿರುದ್ಧ ಪ್ರಕರಣ ದಾಖಲಿಸುವಂತೆ ಸೂಚಿಸಿದರು.

ಅಧಿಕಾರಿಗಳು ಮುಂದೆ ನಿಂತು ಹೂಳು ತೆಗೆಸಿ:

ಕೆರೆಗಳಲ್ಲಿರುವ ಮಣ್ಣನ್ನು ರೈತರು ಸಾಗಿಸುವ ವೇಳೆ ಅಧಿಕಾರಿಗಳು ಮುಂದೆ ನಿಂತು ಹೂಳು ತೆಗೆಸಬೇಕು. ರೈತರಿಗೆ ಬಿಟ್ಟರೆ ಆಳವಾಗಿ ಮಣ್ಣು ತೆಗೆದು ಗುಂಡಿ ಮಾಡುತ್ತಾರೆ. ಕನಿಷ್ಠ ೨ ರಿಂದ ೩ ಅಡಿಯಷ್ಟು ಮಾತ್ರ ಕ್ರಮಬದ್ಧವಾಗಿ ಮಣ್ಣು ತೆಗೆಯುವುದಕ್ಕೆ ಅಧಿಕಾರಿಗಳು ರೈತರಿಗೆ ಸೂಚಿಸಬೇಕು. ಅದನ್ನು ಅಧಿಕಾರಿಗಳೇ ಮುತುವರ್ಜಿ ವಹಿಸಿ ಕೆರೆಗಳ ಸ್ವಚ್ಛತೆ, ಹೂಳು ತೆಗೆಯುವ ಕಾರ್ಯ ಕ್ರಮಬದ್ಧವಾಗಿ ನಡೆಯುವಂತೆ ಎಚ್ಚರ ವಹಿಸಬೇಕೆಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಅವರು, ಕೆರೆಗಳ ಹೂಳು ತೆಗೆಯುವ ಸಂಬಂಧ ಆಯಾ ಇಲಾಖೆಗಳೇ ಮಾರ್ಗಸೂಚಿ ಹೊರಡಿಸಬೇಕು. ಹಲವು ಕಡೆ ಮಣ್ಣು ತೆಗೆಯುವ ವಿಚಾರಕ್ಕೆ ಗಲಾಟೆಗಳಾಗುತ್ತಿವೆ. ಅದಕ್ಕಾಗಿ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಬೇಕು. ಇಲಾಖಾ ಇಂಜಿನಿಯರ್‌ಗಳು ಯಾವ ಹಂತದವರೆಗೆ ಮಣ್ಣನ್ನು ತೆಗೆಯಬೇಕೆಂಬ ಬಗ್ಗೆ ರೈತರಿಗೆ ತಿಳಿಸಿಕೊಡಬೇಕು ಎಂದು ಸಲಹೆ ನೀಡಿದರು.

ಮಾರ್ಚ್ ಅಂತ್ಯದೊಳಗೆ ಬಿಲ್ ಪಾವತಿಸಿ:

ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಮಾತನಾಡಿ, ಕಳೆದ ಬೇಸಿಗೆಯಲ್ಲಿ ನೀರು ಪೂರೈಸಿದ ಖಾಸಗಿ ಬೋರ್‌ವೆಲ್‌ನವರಿಗೆ ಇದುವರೆಗೂ ಬಿಲ್ ಪಾವತಿಸದಿರುವ ಬಗ್ಗೆ ಪ್ರಸ್ತಾಪಿಸಿದರು. ಕೊತ್ತತ್ತಿ-೧ ಮತ್ತು ೨ನೇ ಸರ್ಕಲ್‌ನಲ್ಲಿ ಹಣ ಕೊಟ್ಟಿಲ್ಲ. ಅಧಿಕಾರಿಗಳನ್ನು ಕೇಳಿದರೆ ಒಬ್ಬರ ಮೇಲೊಬ್ಬರು ದೂರು ಹೇಳುತ್ತಾರೆ. ಕಷ್ಟಕಾಲದಲ್ಲಿ ನೀರು ಕೊಟ್ಟವರಿಗೆ ಹಣ ಕೊಡಲು ವಿಳಂಬ ಮಾಡಿದರೆ ಮುಂದೆ ಅವರು ನೀರು ಕೊಡುತ್ತಾರೆಯೇ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಚಲುವರಾಯಸ್ವಾಮಿ ಅವರು, ೨೦೨೩-೨೪ ಹಾಗೂ ೨೪-೨೫ನೇ ಸಾಲಿನಲ್ಲಿ ನೀರಿನ ಬಿಲ್ ಬಾಕಿ ಹಣವನ್ನು ಮಾರ್ಚ್ ಅಂತ್ಯದೊಳಗೆ ಸಂಪೂರ್ಣವಾಗಿ ಪಾವತಿಸಬೇಕು. ತಾಪಂ ಇಒ ಮತ್ತು ತಹಸೀಲ್ದಾರ್ ಅವರು ಜವಾಬ್ದಾರಿ ತೆಗೆದುಕೊಂಡು ಜಿಲ್ಲಾಧಿಕಾರಿಗೆ ವರದಿ ಕೊಡಬೇಕು. ಯಾವುದೇ ಬಿಲ್ ಬಾಕಿ ಇರಬಾರದು ಎಂದು ಕಟ್ಟುನಿಟ್ಟಿನ ಸೂಚನೆ ಕೊಟ್ಟರು.

ಸಭೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ, ಶಾಸಕ ಪಿ.ರವಿಕುಮಾರ್, ವಿಧಾನಪರಿಷತ್ ಶಾಸಕರಾದ ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡ, ಕೆ.ವಿವೇಕಾನಂದ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಆರಕ್ಷಕ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಇದ್ದರು.

---------------------------------

ಇಒ, ತಹಸೀಲ್ದಾರ್‌ಗಳಿಗೆ ತರಬೇತಿ ಕೊಡಿ: ಚಲುವರಾಯಸ್ವಾಮಿ

ಜನರ ಸಮಸ್ಯೆಗಳಿಗೆ ಶೀಘ್ರವಾಗಿ ಹೇಗೆ ಸ್ಪಂದಿಸಬೇಕು, ಸಮಸ್ಯೆಗಳನ್ನು ಪರಿಹರಿಸುವ ವಿಧಾನಗಳ ಬಗ್ಗೆ ತಾಪಂ ಇಒ ಮತ್ತು ತಹಸೀಲ್ದಾರ್‌ಗಳಿಗೆ ತರಬೇತಿ ಕಾರ್ಯಾಗಾರ ನಡೆಸುವಂತೆ ಸಚಿವ ಎನ್.ಚಲುವರಾಯಸ್ವಾಮಿ ಅವರು ಜಿಲ್ಲಾಧಿಕಾರಿ ಮತ್ತು ಜಿಪಂ ಸಿಒ ಅವರಿಗೆ ಸಲಹೆ ನೀಡಿದರು.

ಕುಡಿಯುವ ನೀರಿನ ಬಾಕಿ ಬಿಲ್ ಪಾವತಿಗೆ ಹಣಕಾಸಿನ ಕೊರತೆ ಇಲ್ಲ. ಪಿಡಿ ಖಾತೆಯಲ್ಲಿ ಸಾಕಷ್ಟು ಹಣವಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದಾಗ, ನೀರಿನ ಬಿಲ್ ಬಾಕಿ ಉಳಿಸಿರುವ ವಿಚಾರ ನನ್ನ ಗಮನಕ್ಕೂ ಬಂದಿದೆ. ಬಿಲ್ ವಿಚಾರದಲ್ಲಿ ಗೊಂದಲವಿದ್ದರೆ ಜಿಲ್ಲಾಧಿಕಾರಿ, ಜಿಪಂ ಸಿಇಒ ಅವರೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಿ. ಹೊಂದಾಣಿಕೆಯಿಂದ ಕೆಲಸ ಮಾಡಿದರೆ ಸಮಸ್ಯೆ ಆಗುವುದಿಲ್ಲ. ನಿಮ್ಮ ನಿರ್ಲಕ್ಷ್ಯವೇ ಸಮಸ್ಯೆಗಳಿಗೆ ಮೂಲ ಕಾರಣ ಎಂದು ದೂಷಿಸಿದರು.

------------------------------------------

ದೂರು ಬಂದಾಕ್ಷಣ ಪಿಂಚಣಿ ನಿಲ್ಲಿಸಬೇಡಿ

ಪಿಂಚಣಿ ಪಡೆಯುತ್ತಿರುವವರ ವಿರುದ್ಧ ಯಾರೋ ದೂರು ನೀಡಿದರು ಎಂದಾಕ್ಷಣ ಪಿಂಚಣಿ ನಿಲ್ಲಿಸಬೇಡಿ. ದೂರಿನಲ್ಲಿರುವ ನೈಜತೆಯನ್ನು ಕಾನೂನಾತ್ಮಕವಾಗಿ ಪರಿಶೀಲಿಸಿ ಸಕಾರಾತ್ಮಕವಾಗಿದ್ದಾಗ ಮಾತ್ರ ರದ್ದುಪಡಿಸಿ. ಏಕೆಂದರೆ, ಎಷ್ಟೋ ಬಡವರಿಗೆ ಪಿಂಚಣಿಯೇ ಜೀವನಾಧಾರವಾಗಿರುತ್ತದೆ. ಪಿಂಚಣಿ ನಿಲ್ಲಿಸಿ ವಿನಾಕಾರಣ ಅವರನ್ನು ತೊಂದರೆಗೆ ಸಿಲುಕಿಸಬೇಡಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

----------------------------------------

ಸಭೆ ಮಾಡ್ತೀಯಾ, ಸಸ್ಪೆಂಡ್ ಆಗ್ತೀಯಾ...!

ಶಾಸಕರು ಹೇಳಿದ್ದರೂ ಬಗರ್‌ಹುಕುಂ ಸಕ್ರಮೀಕರಣ ಸಮಿತಿ ಸಭೆ ಕರೆಯುವುದಕ್ಕೆ ವಿಳಂಬ ಮಾಡುತ್ತಿರುವ ಮಂಡ್ಯ ತಹಸೀಲ್ದಾರ್ ಶಿವಕುಮಾರ್ ಬಿರಾದಾರ್ ಅವರಿಗೆ ಸಭೆ ಕರಿತೀಯಾ.. ಸಸ್ಪೆಂಡ್ ಆಗ್ತೀಯಾ ಎಂದು ಸಚಿವ ಚಲುವರಾಯಸ್ವಾಮಿ ನೇರವಾಗಿ ಪ್ರಶ್ನಿಸಿದರು.

ಮಂಡ್ಯ ಶಾಸಕರು ಸಭೆ ಕರೆಯದಿರುವ ಬಗ್ಗೆ ಸಚಿವರು ಕೇಳಿದಾಗ, ನಾನು ಮೂರು ಬಾರಿ ತಹಸೀಲ್ದಾರ್ ಅವರಿಗೆ ತಿಳಿಸಿದ್ದೇನೆ. ಅವರಿನ್ನೂ ದಿನಾಂಕ ನಿಗದಿಪಡಿಸಿಲ್ಲ ಎಂದು ಶಾಸಕ ಪಿ.ರವಿಕುಮಾರ್ ಹೇಳಿದರು. ಶಾಸಕರು ಹೇಳಿದರೂ ಸಭೆ ಏಕೆ ಕರೆದಿಲ್ಲವೆಂದು ತಹಸೀಲ್ದಾರ್‌ರನ್ನು ಸಚಿವರು ಪ್ರಶ್ನಿಸಿದಾಗ, ನಮ್ಮಲ್ಲಿ ೪ ಸಾವಿರ ಅರ್ಜಿಗಳಿವೆ. ಯಾರೂ ಅರ್ಹರಿಲ್ಲ ಎಂದು ತಹಸೀಲ್ದಾರ್ ಉತ್ತರಿಸಿದರು.

ಬಾಯಿ ಮಾತಿನಲ್ಲಿ ಹೇಳಿದರೆ ಮುಗಿದುಹೋಯಿತಾ. ಸಭೆ ನಡೆಸಿ ಲಿಖಿತ ರೂಪದಲ್ಲಿ ದಾಖಲಿಸಬೇಕು. ಸರ್ಕಾರಕ್ಕೆ ವರದಿ ಕೊಡಬೇಕು. ಬೇಗ ಸಭೆ ಮಾಡ್ತೀಯೋ ಇಲ್ಲವೇ ಸಸ್ಪೆಂಡ್ ಆಗ್ತಿಯೋ ಎಂದು ನೇರವಾಗಿ ಹೇಳಿದಾಗ ಆದಷ್ಟು ಶೀಘ್ರ ಸಭೆ ನಡೆಸುವುದಾಗಿ ತಿಳಿಸಿದರು.-----------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!