ವಿಮರ್ಶೆಗೆ ವಿಳಂಬ ಸರಿಯಲ್ಲ: ಬರಗೂರು

KannadaprabhaNewsNetwork | Published : Dec 20, 2023 1:15 AM

ಸಾರಾಂಶ

ವಿಮರ್ಶೆಗೆ ವಿಳಂಬ ಸರಿಯಲ್ಲ: ಬರಗೂರು ರಾಮಚಂದ್ರಪ್ಪನಗರದ ನಯನ ಸಭಾಂಗಣದಲ್ಲಿ ಕನ್ನಡ ಜನಶಕ್ತಿ ಕೇಂದ್ರ ಸೋಮವಾರ ಆಯೋಜಿಸಿದ್ದ ಡಾ। ಮುಮ್ತಾಜ್ ಬೇಗ್ ಬರೆದಿರುವ ‘ಭೂಮಿ ಬೆಳಕಿನ ಬರಗೂರು ಕಾವ್ಯ’ ಪುಸ್ತಕ ಜನಾರ್ಪಣೆ ಕಾರ್ಯಕ್ರಮದಲ್ಲಿ ಅಭಿಮತಕಾವ್ಯ, ಬರಹಗಳಿಗೆ ತಕ್ಷಣ ಒಳ್ಳೆಯ ವಿಮರ್ಶೆ ಬಂದರೆ ಬರಹಗಾರರು ತಿದ್ದಿಕೊಳ್ಳಲು, ಬೆಳೆಯಲು ಸಾಧ್ಯವಾಗುತ್ತದೆ. ಅಂತಹ ವಾತಾವರಣ ನಮ್ಮಲ್ಲಿ ಬೇಕಾಗಿದೆ. ವಿಮರ್ಶೆಯು ಹೊಗಳಿಕೆಯೇ ಆಗಬೇಕಿಲ್ಲ. ಪೂರ್ವಗ್ರಹ ಇಲ್ಲದ ಟೀಕೆಗಳನ್ನು ಸಹಿಸಿಕೊಳ್ಳಬೇಕು. ಆದರೆ, ವಿಮರ್ಶೆಗಳಿಗೆ ವಿಳಂಬ ನೀತಿ ಸರಿಯಲ್ಲ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಾವ್ಯ, ಬರಹಗಳಿಗೆ ತಕ್ಷಣ ಒಳ್ಳೆಯ ವಿಮರ್ಶೆ ಬಂದರೆ ಬರಹಗಾರರು ತಿದ್ದಿಕೊಳ್ಳಲು, ಬೆಳೆಯಲು ಸಾಧ್ಯವಾಗುತ್ತದೆ. ಅಂತಹ ವಾತಾವರಣ ನಮ್ಮಲ್ಲಿ ಬೇಕಾಗಿದೆ. ವಿಮರ್ಶೆಯು ಹೊಗಳಿಕೆಯೇ ಆಗಬೇಕಿಲ್ಲ. ಪೂರ್ವಗ್ರಹ ಇಲ್ಲದ ಟೀಕೆಗಳನ್ನು ಸಹಿಸಿಕೊಳ್ಳಬೇಕು. ಆದರೆ, ವಿಮರ್ಶೆಗಳಿಗೆ ವಿಳಂಬ ನೀತಿ ಸರಿಯಲ್ಲ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ನಗರದ ನಯನ ಸಭಾಂಗಣದಲ್ಲಿ ಕನ್ನಡ ಜನಶಕ್ತಿ ಕೇಂದ್ರ ಸೋಮವಾರ ಆಯೋಜಿಸಿದ್ದ ಡಾ। ಮುಮ್ತಾಜ್ ಬೇಗ್ ಬರೆದಿರುವ ‘ಭೂಮಿ ಬೆಳಕಿನ ಬರಗೂರು ಕಾವ್ಯ’ ಪುಸ್ತಕ ಜನಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಾಮಚಂದ್ರಪ್ಪ ಅವರು, ‘ಸಾಮಾಜಿಕವಾಗಿ, ಆರ್ಥಿಕವಾಗಿ ಬಲಾಢ್ಯರಲ್ಲದ ವಲಯದಿಂದ ಬಂದವರಿಗೆ ಶಿಕ್ಷಣ ಗುರುತಿಸುವಂತೆ ಮಾಡುತ್ತದೆ. ಬರಹಗಾರರು ಗ್ರಾಮೀಣ ಭಾಗದವರು ಅಥವಾ ನಗರದಲ್ಲೇ ಇದ್ದು ದುರ್ಬಲರಾಗಿರುವವರಿಗೆ ಸಮಸ್ಯೆಗಳು ಇರುತ್ತವೆ. ಅದನ್ನು ಅಧ್ಯಯನ, ಆತ್ಮವಿಶ್ವಾಸದ ಮುಖಾಂತರ ಎದುರಿಸಬೇಕು. ಲೇಖಕರಿಗೆ ಆತ್ಮವಿಶ್ವಾಸ, ಅಧ್ಯಯನ ಮನಸ್ಥಿತಿ ಇರಬೇಕು. ಅಹಂಕಾರ, ಆತ್ಮರತಿ ಇರಬಾರದು. ಕಾಂಟೆಸ್ಸಾದಲ್ಲಿ ಕುಳಿತಾಗಲೂ ನಮ್ಮ ಕಾಲ್ನಡಿಗೆ ನೆನಪು ಬರಬೇಕು’ ಎಂದರು.

‘ಓಹಿಲೇಶ್ವರ ಸಿನಿಮಾ ನೋಡಿ ಅದರಲ್ಲಿನ ‘ಈ ದೇಹದಿಂದ ದೂರನಾದೇ ಏಕೆ ಆತ್ಮನೇ’ ಎಂಬ ಹಾಡಿನಿಂದ ಪ್ರೇರಣೆಗೊಂಡಿದ್ದ ನಾನು, ತರಗತಿ ಬಿಟ್ಟು ಹೋಗುತ್ತಿದ್ದ ಗೆಳೆಯ ಬಂಡಿ ಮಾರಯ್ಯನ ಕುರಿತಾಗಿ ‘ಶಾಲೆಯಿಂದ ದೂರನಾದೇ ಏಕೆ ಗೆಳೆಯನೇ’ ಎಂದು ಕವಿತೆ ಬರೆದಿದ್ದೆ. ಆಗ ನನ್ನ ಪಾಲಿಗೆ ಅದುವೇ ಮಹಾಕಾವ್ಯವಾಗಿತ್ತು. ಸಂತೋಷ ನೀಡಿತ್ತು. ಅಲ್ಲಿಂದ ನನ್ನ ಬರಹ ಪಯಣ ಶುರುವಾಯಿತು. ಮೇಷ್ಟ್ರು ಬೆನ್ನು ತಟ್ಟಿ ಬೆಂಬಲಿಸಿದರು’ ಎಂದು ತಮ್ಮ ಬರಹದ ಆರಂಭದ ದಿನಗಳನ್ನು ರಾಮಚಂದ್ರಪ್ಪ ಅವರು ಮೆಲುಕು ಹಾಕಿದರು.

‘ಬರಗೂರು ರಾಮಚಂದ್ರಪ್ಪ ಅವರ ಸಾಮಾಜಿಕ ಕಳಕಳಿ, ಸಮಾನತೆ, ಹೋರಾಟದ ಕುರಿತಾದ ಸಾಹಿತ್ಯಿಕ ಬದುಕು, ಬರಹದಿಂದ ಪ್ರೇರಣೆಗೊಂಡು ಅವರ ಬಗ್ಗೆಯೇ ಪುಸ್ತಕ ಬರೆದಿದ್ದೇನೆ’ ಎಂದು ಲೇಖಕಿ ಮುಮ್ತಾಜ್ ಬೇಗ್ ಹೇಳಿದರು.

Share this article