ಅಧಿಕಾರಿಗಳ ನಡುವೆ ಹೊಂದಾಣಿಕೆ ಇಲ್ಲದ ಕಾರಣ ಸಾರ್ವಜನಿಕರ ಸಮಸ್ಯೆ ಬಗೆಹರಿಸುವಲ್ಲಿ ವಿಳಂಬ

KannadaprabhaNewsNetwork | Published : Jun 15, 2024 1:04 AM

ಸಾರಾಂಶ

ಪ್ರಾಧಿಕಾರದ ಉದ್ದೇಶ ಲಾಭ ಹಾಗೂ ನಷ್ಟರಹಿತವಾಗಿ ಕಾರ್ಯನಿರ್ವಹಿಸಿ, ನಗರದ ನಾಗರಿಕರಿಗೆ ಅಗತ್ಯ ಮೂಲಸೌಕರ್ಯವನ್ನು ಒದಗಿಸಿಕೊಡುವುದಾಗಿದೆ. ಆದರೆ, ಈಗ ನೋಡಿದರೆ ಇದು ವಿರುದ್ಧವಾದ ದಿಕ್ಕಿನಲ್ಲಿ ಸಾಗುತ್ತಿರುವುದು ಕಂಡು ಬಂದಿದೆ. ನಮ್ಮ ಅಧಿಕಾರಿಗಳಲ್ಲಿ ಹೊಂದಾಣಿಕೆ ಇಲ್ಲದ ಕಾರಣ ಈ ರೀತಿಯಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಎಂಡಿಎ) ಅಧಿಕಾರಿಗಳ ನಡುವೆ ಹೊಂದಾಣಿಕೆ ಇಲ್ಲದ ಕಾರಣ ಸಾರ್ವಜನಿಕರ ಸಮಸ್ಯೆ ಬಗೆಹರಿಸುವಲ್ಲಿ ವಿಳಂಬವಾಗುತ್ತಿದೆ ಎಂದು ಎಂಡಿಎ ಅಧ್ಯಕ್ಷ ಕೆ.ಮರೀಗೌಡ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಭೆಯಲ್ಲಿ ಮಾತನಾಡಿದ ಅವರು, ಪ್ರಾಧಿಕಾರದ ಉದ್ದೇಶ ಲಾಭ ಹಾಗೂ ನಷ್ಟರಹಿತವಾಗಿ ಕಾರ್ಯನಿರ್ವಹಿಸಿ, ನಗರದ ನಾಗರಿಕರಿಗೆ ಅಗತ್ಯ ಮೂಲಸೌಕರ್ಯವನ್ನು ಒದಗಿಸಿಕೊಡುವುದಾಗಿದೆ. ಆದರೆ, ಈಗ ನೋಡಿದರೆ ಇದು ವಿರುದ್ಧವಾದ ದಿಕ್ಕಿನಲ್ಲಿ ಸಾಗುತ್ತಿರುವುದು ಕಂಡು ಬಂದಿದೆ ಎಂದರು.

ನಮ್ಮ ಅಧಿಕಾರಿಗಳಲ್ಲಿ ಹೊಂದಾಣಿಕೆ ಇಲ್ಲದ ಕಾರಣ ಈ ರೀತಿಯಾಗಿದೆ. ತಾಂತ್ರಿಕ ಇಲಾಖೆ, ನಗರ ಯೋಜನಾ ಇಲಾಖೆ, ಭೂಸ್ವಾಧೀನ ಇಲಾಖೆಯ ಅಧಿಕಾರಿಗಳಲ್ಲಿ ಸಮನ್ವಯ ಕೊರತೆ ಇರುವುದರಿಂದ ಸಾರ್ವಜನಿಕರ ಸಮಸ್ಯೆ ಬಗೆಹರಿಸುವಲ್ಲಿ ವಿಳಂಬವಾಗುತ್ತಿದೆ ಎಂದು ಅವರು ಹೇಳಿದರು.

ಎಂಡಿಎ ವ್ಯಾಪ್ತಿಯಲ್ಲಿ ಇರುವ ಬಿಡಿ ನಿವೇಶನಗಳು, ವಾಸವಿರುವ ಮನೆಗಳು, ನಿವೇಶನಗಳು, ತುಂಡು ಭೂಮಿ, ಬಾಡಿಗೆ ಕೊಟ್ಟಿರುವಂತಹ ಜಾಗಗಳು ಇವೆಲ್ಲವನ್ನೂ ಅಧಿಕಾರಿಗಳು ಶೀಘ್ರವೇ ಸ್ಥಳ ಪರಿಶೀಲಿಸಿ ಮಾಹಿತಿ ನೀಡಬೇಕು. ಸಿಎ ನಿವೇಶನಗಳನ್ನು ಸಮುದಾಯದ ಅವಶ್ಯಕತೆಗೆ ಮಂಜೂರು ಮಾಡುವಾಗ ಯಾವ ಮಾನದಂಡದ ಆಧಾರದ ಮೇಲೆ ಮಂಜೂರು ಮಾಡಬೇಕು ಹಾಗೂ ಅರ್ಜಿ ಹಾಕಿರುವ ಸಂಸ್ಥೆಗಳ ಆರ್ಥಿಕ ಸ್ಥಿತಿಗತಿಗಳು ಹಾಗೂ ಉದ್ದೇಶಗಳ ಪೂರ್ಣ ಪ್ರಮಾಣದ ಮಾಹಿತಿಯನ್ನು ಸಮರ್ಪಕವಾಗಿ ನೀಡಬೇಕು ಎಂದು ಅವರು ತಿಳಿಸಿದರು.

ಮೈಸೂರಿನ ನಿವೇಶನ ಹಂಚಿಕೆ ಸಮಸ್ಯೆಯನ್ನು ಅದಷ್ಟು ಬಗೆಹರಿಸಲು ಬಲ್ಲಹಳ್ಳಿಯಲ್ಲಿ 485 ಎಕರೆ ಹಾಗೂ ಬೊಮ್ಮೇನಹಳ್ಳಿಯಲ್ಲಿ 165 ಎಕರೆ ಜಮೀನನ್ನು ಭೂ ಸ್ವಾಧೀನ ಮಾಡಿಕೊಳ್ಳಬೇಕು. ಇದಕ್ಕಾಗಿ ಹೆಚ್ಚು ಅನುದಾನಬೇಕಾಗಿದೆ. ಹೀಗಾಗಿ, ಪ್ರಾಧಿಕಾರದ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಭೂಸ್ವಾಧೀನಕ್ಕಾಗಿ ಅನುದಾನ ಮಂಜೂರು ಮಾಡಿಸುವಂತೆ ಮನವಿ ಸಲ್ಲಿಸಬೇಕು ಎಂದು ಅವರು ಹೇಳಿದರು.

ಎಂಡಿಎ ಆಯುಕ್ತ ದಿನೇಶ್ ಕುಮಾರ್, ಅಧಿಕಾರಿಗಳಾದ ಶಿವರಾಂ, ಧರ್ಮೇಂದ್ರ , ಶೇಖರ್ ಮೊದಲಾದಲರು ಇದ್ದರು.

Share this article