ಕೈಕೊಟ್ಟ ಮುಂಗಾರು: ಬೆಳೆ ನಷ್ಟದ ಆತಂಕದಲ್ಲಿ ರೈತರು

KannadaprabhaNewsNetwork |  
Published : Jun 30, 2025, 12:34 AM IST
ಕೈಕೊಟ್ಟ ಮುಂಗಾರು : ಆತಂಕದಲ್ಲಿ ರೈತರು | Kannada Prabha

ಸಾರಾಂಶ

ಕಾಳು ಕಟ್ಟುವ ಹಂತದಲ್ಲಿ ಮಳೆ ಬಾರದೆ ಬೆಳೆಗಳು ಬಾಡಿ ಒಣಗಿಹೋಗುತ್ತಿವೆ. ಒಂದು ಹದ ಮಳೆ ಬಂದಿದ್ದರೂ ರೈತರ ಕೈ ತಪ್ಪಿ ಹೋಗುತ್ತಿರುವ ಬೆಳೆಗಳ ಜೀವ ಉಳಿದು ಮನೆ ಬಳಕೆಗಾದರೂ ಆಗುತ್ತಿದ್ದವು. ಒಂದು ಕಡೆ ಮಳೆ ಇಲ್ಲ.

ಕನ್ನಡಪ್ರಭ ವಾರ್ತೆ ತಿಪಟೂರು

ತಾಲೂಕಿನಲ್ಲಿ ಬಿದ್ದ ಪೂರ್ವ ಮುಂಗಾರು ಮಳೆಗೆ ರೈತರು ಖುಷಿಯಿಂದ ಬಿತ್ತಿದ್ದ ಹೆಸರು, ಉದ್ದು, ಎಳ್ಳು, ಅಲಸಂದೆ ಸೇರಿದಂತೆ ಇತ್ಯಾದಿ ಪೂರ್ವ ಮುಂಗಾರು ಬೆಳೆಗಳು ಪ್ರಾರಂಭದ ಅವಧಿಯಲ್ಲಿ ಅತ್ಯಂತ ಹುಲುಸಾಗಿ ಬೆಳೆದು ಬಂಪರ್ ಬೆಳೆ ನಿರೀಕ್ಷೆಯಲ್ಲಿದ್ದ ರೈತರಲ್ಲಿ ಇನ್ನಿಲ್ಲದ ಆಸೆಕನಸುಗಳನ್ನು ಬಿತ್ತಿದ್ದವಾದರೂ ನಂತರದ ದಿನಗಳಲ್ಲಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದ್ದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುವಂತಾಗಿದೆ.

ಏಪ್ರಿಲ್ ತಿಂಗಳ ಅಂತ್ಯ ಅಥವಾ ಮೇ ತಿಂಗಳ ಮೊದಲ ವಾರದಿಂದ ಆರಂಭಗೊಳ್ಳಬೇಕಾಗಿದ್ದ ಪೂರ್ವ ಮುಂಗಾರು ಮಳೆ ಈ ಬಾರಿ ಮಾರ್ಚ್ ತಿಂಗಳ ಅಂತ್ಯದಲ್ಲಿಯೇ ಸುರಿದಿದ್ದರಿಂದ ಹರ್ಷಗೊಂಡ ರೈತರು ಉಳುಮೆ ಮಾಡಿ ಪೂರ್ವ ಮುಂಗಾರು ಬೆಳೆ ಬಿತ್ತನೆ ಮಾಡಿದ್ದರು. ನಂತರದಲ್ಲಿ ಕಾಳುಗಳು ಚೆನ್ನಾಗಿ ಮೊಳಕೆಯೊಡೆದು ಹುಲುಸಾಗಿ ಬೆಳೆಯುತ್ತಿದ್ದ ಹೆಸರು, ಉದ್ದು, ಎಳ್ಳು, ಅಲಸಂದೆ ಇತ್ಯಾದಿ ಪೂರ್ವ ಮುಂಗಾರು ಬೆಳೆಗಳು ಹುಲುಸಾಗಿ ರೈತರಲ್ಲಿ ಹರ್ಷ ಮೂಡಿಸಿದ್ದವು.

ಆದರೆ ಕಾಳು ಕಟ್ಟುವ ಹಂತದಲ್ಲಿ ಮಳೆ ಬಾರದೆ ಬೆಳೆಗಳು ಬಾಡಿ ಒಣಗಿಹೋಗುತ್ತಿವೆ. ಒಂದು ಹದ ಮಳೆ ಬಂದಿದ್ದರೂ ರೈತರ ಕೈ ತಪ್ಪಿ ಹೋಗುತ್ತಿರುವ ಬೆಳೆಗಳ ಜೀವ ಉಳಿದು ಮನೆ ಬಳಕೆಗಾದರೂ ಆಗುತ್ತಿದ್ದವು. ಒಂದು ಕಡೆ ಮಳೆ ಇಲ್ಲ. ಇನ್ನೊಂದು ಕಡೆ ಪ್ರಕೃತಿ ಬಾದೆಯಿಂದ ಈ ವರ್ಷವೂ ಸಹ ಮುಂಗಾರು ಬೆಳೆಗಳು ರೈತರ ಕೈಸೇರುತ್ತಿಲ್ಲ. ಸಾವಿರಾರು ರುಪಾಯಿ ಸಾಲಶೂಲ ಮಾಡಿಕೊಂಡು ಬಿತ್ತನೆ ಮಾಡಿರುವ ಬೆಳೆಗಳು ಜಾನುವಾರುಗಳ ಪಾಲಾಗಿದ್ದು ರಾಗಿ ಬೆಳೆಗೂ ಇದೇ ರೀತಿ ಮಳೆರಾಯ ಕೈಕೊಟ್ಟರೆ ಮುಂದೇನು ಎಂಬ ಚಿಂತೆ ರೈತರಲ್ಲಿ ಈಗಾಗಲೇ ಕಾಡತೊಡಗಿದೆ. ಒಟ್ಟಾರೆ ರೈತ ಸಮುದ್ರ ಹೊಕ್ಕರೂ ಮೊಳಕಾಲುದ್ದ ನೀರು ಎಂಬಂತೆ ರೈತನ ಸ್ಥಿತಿ ಶೋಚನೀಯವಾಗಿದೆ.

ಕೋಟ್‌......

ಮಳೆ ಬಾರದೆ ರೈತರು ನಷ್ಟ ಅನುಭವಿಸುವಂತಾಗಿದೆ. ರೈತರಿಗೆ ಅನುಕೂಲವಾಗಲೆಂದೆ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರಿಗೆ ಬೆಳೆ ವಿಮೆ ಬಗ್ಗೆ ಸಂಚಾರಿ ವಾಹನದ ಮೂಲಕ ಅರಿವು ಮೂಡಿಸಲಾಗುತ್ತಿದ್ದು, ರೈತರು ಪ್ರಯೋಜನ ಪಡೆದುಕೊಳ್ಳಬೇಕು.

ಡಾ.ಎಂ.ಪಿ. ಪವನ್, ಸಹಾಯಕ ಕೃಷಿ ನಿರ್ದೇಶಕರು, ತಿಪಟೂರು.

......ಪೂರ್ವ ಮುಂಗಾರು ಬೆಳೆಗಳಾದ ಹೆಸರು, ಉದ್ದು, ಎಳ್ಳು, ಅಲಸಂದಿ ಮತ್ತಿತರೆ ಬೆಳೆಗಳು ಸಂಪೂರ್ಣ ಕೈಕೊಟ್ಟಿದ್ದು, ಬಂಪರ್ ಬೆಳೆ ಸಿಗಲಿದೆ ಎಂಬ ಆಸೆಯಲ್ಲಿದ್ದ ನಮಗೆ ನಿರಾಸೆ ಉಂಟಾಗಿದೆ. ನಾವು ಬಿತ್ತಿದ್ದಷ್ಟು ಬಿತ್ತನೆ ಬೀಜಗಳು ಸಹ ವಾಪಸ್ ಸಿಗುತ್ತಿಲ್ಲವೆಂಬುದು ನಮ್ಮ ಕೊರಗಾಗಿದೆ. ಸರ್ಕಾರ ಇದಕ್ಕೆ ಕೂಡಲೇ ಸೂಕ್ತ ಪರಿಹಾರ ನೀಡಬೇಕೆಂಬುದು ನಮ್ಮ ಒತ್ತಾಯ.

- ಬಿಸಲೇಹಳ್ಳಿ ಜಗದೀಶ್, ರೈತ ಫೋಟೋ ೨೯-ಟಿಪಿಟಿ೩ರಲ್ಲಿ ಕಳುಹಿಸಲಾಗಿದೆ. ಶೀರ್ಷಿಕೆ : ಮಳೆ ಇಲ್ಲದೆ ಹೊಲದಲ್ಲಿ ಒಣಗುತ್ತಿರುವ ಪೂರ್ವ ಮುಂಗಾರು ಬೆಳೆಗಳು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ