ಹೊಳಲ್ಕೆರೆ: ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 10 ವರ್ಷಗಳಲ್ಲಿ ನೀಡಿರುವ ಮಹತ್ವಾಕಾಂಕ್ಷಿ ಯೋಜನೆಗಳನ್ನು ಬೂತ್ ಮಟ್ಟದಲ್ಲಿ ಪ್ರತಿ ಮನೆ ಮನೆಗೆ ತಿಳಿಸುವ ಜವಾಬ್ದಾರಿ ಪಕ್ಷದ ಕಾರ್ಯಕರ್ತರ ಮೇಲಿದೆ ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಪ್ರಪಂಚದಲ್ಲಿ ಎಲ್ಲಿಯೇ ಹೋಗಲಿ ಅಗ್ರಗಣ್ಯ ಸ್ಥಾನ ನೀಡಿ ಗೌರವಿಸಲಾಗುತ್ತಿದೆ. ಇದು ಭಾರತದ 140 ಕೋಟಿ ಜನರಿಗೆ ಹೆಮ್ಮೆ ತರುವ ವಿಚಾರ. ಶ್ರೀಲಂಕಾ, ಪಾಕಿಸ್ತಾನದಲ್ಲಿ ಒಂದು ಕೆಜಿ ಅಕ್ಕಿಗೆ ನಾಲ್ಕುನೂರ ಐವತ್ತು ರು.ಗಳನ್ನು ನೀಡಿದರೂ ಸುಲಭವಾಗಿ ಸಿಗುತ್ತಿಲ್ಲ. ಗಂಟೆಗಟ್ಟ ಲೆ ಸಾಲಿನಲ್ಲಿ ನಿಲ್ಲಬೇಕಾದಂಥ ಪರಿಸ್ಥಿತಿ ಎದುರಾಗಿದೆ. ದೇಶದಲ್ಲಿ 15 ಕೋಟಿ ಜನರನ್ನು ಬಡತನದಿಂದ ಮೇಲೆತ್ತುವ ಕೆಲಸ ಪ್ರಧಾನಿ ಮೋದಿ ಅವರಿಂದ ಆಗಿದೆ. 11 ದಿನ ವ್ರತ ಮಾಡಿ ಮೋದಿ ಅವರು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟಿಸಿ ಐದುನೂರು ವರ್ಷಗಳ ಭಾರತೀಯರ ಕನಸನ್ನು ಸಾಕಾರಗೊಳಿಸಿದ್ದಾರೆ. ಇವೆಲ್ಲವನ್ನು ಜನರಿಗೆ ತಿಳಿಸುವ ಚಾಣಾಕ್ಷತನ ನಿಮ್ಮಲ್ಲಿರಬೇಕೆಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ ಮಾತನಾಡಿ, ಪ್ರಧಾನಿ ಮೋದಿ ಅವರು ರಾಮ ಮಂದಿರ ಉದ್ಘಾಟಿಸಿ ಎಲ್ಲರೂ ರಾಮನನ್ನು ದರ್ಶನ ಮಾಡುವ ಭಾಗ್ಯ ಕೊಟ್ಟಿದ್ದಾರೆ. ಭಾರತ ದೇಶ ಸುಭದ್ರ, ಸ್ವಾಭಿಮಾನ, ಸುರಕ್ಷಿತವಾಗಿರಬೇಕಾದರೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಅದಕ್ಕಾಗಿ ಕೇಂದ್ರ ಸರ್ಕಾರ ಕೊಟ್ಟಿರುವ ಯೋಜನೆಗಳನ್ನು ಪ್ರತಿ ಮನೆ ಮನೆಗೆ ತಲುಪಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.60 ವರ್ಷದಲ್ಲಿ ಆಗದ ಸಾಧನೆ ಪ್ರಧಾನಿ ಮೋದಿ 10 ವರ್ಷಗಳಲ್ಲಿ ಮಾಡಿ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ದಿದ್ದಾರೆ. ಕಾಂಗ್ರೆಸ್ ಮತ್ತಿತರೆ ಪಕ್ಷಗಳು ಸೇರಿಕೊಂಡು ಇಂಡಿಯಾ ಒಕ್ಕೂಟ ಎಂದು ಮಾಡಿಕೊಂಡಿರುವುದರ ವಿರುದ್ಧ ಕಾರ್ಯಕರ್ತರು ಹೋರಾಡಬೇಕಿದೆ. ಭ್ರಷ್ಟ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿದೆ. ಹಳ್ಳಿಗಳಿಗೆ ಬಸ್ ಸೌಕರ್ಯವಿಲ್ಲ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಹೊಸ ಬಸ್‍ಗಳನ್ನು ಖರೀದಿಸಲು ಆಗುತ್ತಿಲ್ಲ. ಗೃಹಲಕ್ಷ್ಮಿ ಯೋಜನೆಯಡಿ ಎಲ್ಲಾ ಮಹಿಳೆಯರಿಗೂ ಪ್ರತಿ ತಿಂಗಳು ಹಣ ಕೈಸೇರುತ್ತಿಲ್ಲ. ಒಂದು ತಿಂಗಳು ಒಬ್ಬರಿಗೆ ಮತ್ತೊಂದು ತಿಂಗಳು ಇನ್ನೊಬ್ಬರಿಗೆ ಹಣ ಜಮಾ ಮಾಡಿ ಮೂಗಿಗೆ ತುಪ್ಪು ಸವರುವ ಕೆಲಸ ಮಾಡುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕಾಗಿರುವುದರಿಂದ ಕಾರ್ಯಕರ್ತರು ಮನೆಯಲ್ಲಿ ಮೈಮರೆತು ಕುಳಿತುಕೊಳ್ಳಬೇಡಿ. ಪ್ರತಿ ಬೂತ್‍ನಲ್ಲಿ ಶೇ.60ರಷ್ಟು ಮತ ಸಿಗಬೇಕು. ಯಾಮಾರಿದರೆ ಮತ್ತೆ ಭ್ರಷ್ಟ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತೆ ಎನ್ನುವ ಎಚ್ಚರಿಕೆ ನಿಮ್ಮಲ್ಲಿರಬೇಕು ಎಂದು ಜಾಗೃತಿಗೊಳಿಸಿದರು.
ಮಂಡಲ ಅಧ್ಯಕ್ಷ ಸಿದ್ದೇಶ್, ಜಿಲ್ಲಾ ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ಕಾರ್ಯದರ್ಶಿ ರೂಪ ಸುರೇಶ್, ಮಾಜಿ ಅಧ್ಯಕ್ಷ ಮಹೇಶ್, ಪುರಸಭೆ ಮಾಜಿ ಅಧ್ಯಕ್ಷ ಎ.ಆರ್.ಅಶೋಕ್, ಪಟ್ಟಣ ಪಂಚಾಯಿತಿ ಸದಸ್ಯ ಮುರುಗೇಶ್, ಮುಖಂಡರಾದ ಡಿ.ಸಿ.ಮೋಹನ್, ನುಲೇನೂರು ಈಶ್ವರಪ್ಪ, ಪ್ರವೀಣ್, ಮಾರುತೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತಿಪ್ಪೇಸ್ವಾಮಿ ವೇದಿಕೆಯಲ್ಲಿದ್ದರು.