- ಸರ್ಕಾರದ ಯೋಜನೆಗಳ ಕುರಿತು ಪ್ರತಿ ಹಳ್ಳಿಯಲ್ಲಿಯೂ ಬ್ಯಾನರ್ ಕಟ್ಟಿ, ಜಾಗೃತಿ ಮೂಡಿಸಿ
ಕನ್ನಡಪ್ರಭ ವಾರ್ತೆ ಕೊಪ್ಪಳ
ಸರ್ಕಾರದ ಯೋಜನೆಗಳು ಸಾಕಷ್ಟು ಇದ್ದು, ಅವುಗಳನ್ನು ರೈತರಿಗೆ ತಲುಪುವಂತೆ ಜಾಗೃತಿ ಮೂಡಿಸಬೇಕು. ಇದಕ್ಕಾಗಿ ಕೊಪ್ಪಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರತಿ ಹಳ್ಳಿಯಲ್ಲಿಯೂ ಸಹ ಬ್ಯಾನರ್ ಕಟ್ಟಿ, ಜಾಗೃತಿ ಮೂಡಿಸಿ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ.ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸೋಲಾರ್ ಪಂಪ್‌ಸೆಟ್‌ಗಳಿಗೆ ಸರ್ಕಾರ ಸಾಕಷ್ಟು ಸಹಾಯಧನ ನೀಡುತ್ತಿದೆ. ರೈತರು ಕೇವಲ ₹60 ಸಾವಿರ ಪಾವತಿ ಮಾಡಿದರೇ ರೈತರಿಗೆ ₹6 ಲಕ್ಷ ಮೌಲ್ಯದ ಪಂಪ್‌ಸೆಟ್ ನೀಡುತ್ತಾರೆ. ಅಷ್ಟೇ ವಿದ್ಯುತ್ ಸಮಸ್ಯೆಯಿಂದ ಬಳಲುತ್ತಿರುವ ರೈತರಿಗೆ ಇದು ಸಾಕಷ್ಟು ಅನುಕೂಲವಾಗುತ್ತದೆ. ನಿತ್ಯವೂ ಹತ್ತು ಗಂಟೆ ಸೋಲಾರ್ ಪಂಪ್ ರನ್ ಆಗುತ್ತದೆ ಎನ್ನುವುದು ಬಹಳ ಅತ್ಯುಪಯುಕ್ತ ಯೋಜನೆಯಾಗಿದೆ. ಇದನ್ನು ಯಾಕೆ ನೀವು ರೈತರಿಗೆ ಮನವರಿಕೆ ಮಾಡಿಕೊಡುತ್ತಿಲ್ಲ ಎಂದು ಪ್ರಶ್ನೆ ಮಾಡಿದರು.
ಮಣ್ಣು ಪರೀಕ್ಷೆಯನ್ನು ಮಾಡಲು ರೈತರ ಹೊಲಗಳಿಗೆ ತೆರಳಲು ವಾಹನ ಬಿಡಲಾಗಿತ್ತು. ಈಗ ಅವು ಕಾಣುತ್ತಲೇ ಇಲ್ಲ. ಯಾರಾದರೂ ನೋಡಿದ್ದಿರಾ ಎಂದು ಶಾಸಕರು ಪ್ರಶ್ನೆ ಮಾಡಿದರು. ಆಗ ಮಧ್ಯೆ ಪ್ರವೇಶ ಮಾಡಿದ ಕೃಷಿ ಇಲಾಖೆ ಅಧಿಕಾರಿ, ಎಲ್ಲಾ ವಾಹನಗಳು ಸುಸಜ್ಜಿತವಾಗಿವೆ. ಅವುಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದರು. ಹಾಗಾದರೇ ಈ ಬಾರಿ ನನ್ನ ಗ್ರಾಮಗಳ ಕಾರ್ಯಕ್ರಮಗಳಿಗೆ ಅವುಗನ್ನು ತರಿಸಿ ಎಂದು ಸೂಚನೆ ನೀಡಿದರು.
ತೋಟಗಾರಿಕಾ ಇಲಾಖೆಯ ಅಧಿಕಾರಿ ಮಾಹಿತಿ ನೀಡಿ, ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ತೋಟಗಾರಿಕಾ ಬೆಳೆಗಳ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ. ನಿರೀಕ್ಷೆ ಮೀರಿ ರೈತರು ತೋಟಗಾರಿಕಾ ಬೆಳೆಯತ್ತ ಬರುತ್ತಿದ್ದಾರೆ. ಹೀಗಾಗಿ, ನಮ್ಮ ಗುರಿಗಳನ್ನು ಮೀರಿ ಹೆಚ್ಚುವರಿ ಗುರಿಗಳನ್ನು ನಿಗದಿ ಮಾಡಿಕೊಂಡು ರೈತರಿಗೆ ಸಹಾಯ ಮಾಡುತ್ತಿದ್ದೇವೆ ಎಂದರು.
ವಿಳಂಬವಾದ ಸಭೆ:
ಉಪವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ, ತಹಸೀಲ್ದಾರ ವಿಠ್ಠಲ ಚೌಗಲೆ, ತಾಪಂ ಇಒ ದುಂಡಪ್ಪ ತುರಾದಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕೊಪ್ಪಳ ತಾಲೂಕು ಅಧ್ಯಕ್ಷ ಬಾಲಚಂದ್ರ ಇದ್ದರು.