ಕನ್ನಡಪ್ರಭ ವಾರ್ತೆ ದಾವಣಗೆರೆ
ಸಾಮಾಜಿಕ ಭದ್ರತಾ ಯೋಜನೆಗಳಾದ ಸಂಧ್ಯಾ ಸುರಕ್ಷಾ, ವೃದ್ಧಾಪ್ಯ, ವಿಧವಾ, ಅಂಗವಿಕಲರ ಮಾಸಾಶನ ಸೇರಿ ಇನ್ನಿತರೆ ಮಾಸಾಶನಗಳ ಅಂಚೆ ಇಲಾಖೆಯಿಂದ ನಿಗದಿತ ಸಮಯಕ್ಕೆ ತಲುಪಿಸಬೇಕೆಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ ಅಧಿಕಾರಿಗಳಿಗೆ ಸೂಚಿಸಿದರು.ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಅಂಚೆ ಇಲಾಖೆ ಅಧಿಕಾರಿಗಳು ಹಾಗೂ ಸಾಮಾಜಿಕ ಭದ್ರತಾ ಯೋಜನೆ ಅನುಷ್ಠಾನಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿ ತಿಂಗಳು ಸಾಮಾಜಿಕ ಭದ್ರತಾ ಯೋಜನೆ ಮಾಸಾಶನ ಸಕಾಲದಲ್ಲಿ ತಲುಪದ ಕಾರಣ ವೃದ್ಧರಿಗೆ ಜೀವನ ನಿರ್ವಹಣೆ ಹಾಗೂ ದಿನನಿತ್ಯದ ಖರ್ಚುವೆಚ್ಚಗಳಿಗೆ ಸಮಸ್ಯೆಯಾಗಿದೆ. ಈ ಬಗ್ಗೆ ಸಾಕಷ್ಟು ಫಲಾನುಭವಿಗಳು ದೂರು ನೀಡಿದ್ದಾರೆ ಎಂದರು
ಅಂಚೆ ಇಲಾಖೆಯಿಂದ ಮಾಸಾಶನ ಸಕಾಲದಲ್ಲಿ ವಿತರಣೆಯಾಗಿದೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ಪರಿಶೀಲಿಸಬೇಕು. ಮಾಸಾಶನದ ಮಾಹಿತಿ ಕೇಳಲು ಬರುವವರಿಗೆ ಅಂಚೆ ಕಚೇರಿಯಲ್ಲಿ ಸೌಜನ್ಯತೆಯಿಂದ ವರ್ತನೆ ಮಾಡುವ ಜೊತೆಗೆ ಫಲಾನುಭವಿಗಳ ಖಾತೆಯಲ್ಲಿ ಹಣ ಜಮಾ ಆದ ಬಗ್ಗೆ ನಿಖರ ಮಾಹಿತಿ ನೀಡಬೇಕು. ಕೆಲವೊಂದು ವೇಳೆ ಅಂಚೆ ಇಲಾಖೆ ನೌಕರರು ವಿತರಣೆ ವೇಳೆ ವಿಳಂಬ ಮಾಡುವ ಸಂಭವವಿದ್ದು, ಇದನ್ನು ಪೋಸ್ಟ್ ಮಾಸ್ಟರ್ ಪ್ರತಿನಿತ್ಯ ಪರಿಶೀಲಿಸಬೇಕು. ಮುಂದಿನ ದಿನಗಳಲ್ಲಿ ಸರ್ಕಾರದಿಂದ ಜಮಾ ಮಾಡಿದ್ದರೂ ಮಾಸಾಶನ ತಲುಪದಿದ್ದಲ್ಲಿ ಅಂತಹ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.ಅಂಚೆ ಮೂಲಕ ಪಡೆಯುತ್ತಿರುವ ಸಾಮಾಜಿಕ ಭದ್ರತಾ ಮಾಸಾಶನ ಆಧಾರ್ ಬೇಸ್ಡ್ ಡಿಬಿಟಿ ಮೂಲಕ ನೇರ ಫಲಾನುಭವಿ ಖಾತೆಗೆ ಜಮಾ ಮಾಡಲಾಗುತ್ತದೆ. ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಮತ್ತು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಖಾತೆ ಇರುತ್ತದೆ. ಅಂಚೆ ಎಸ್.ಬಿ.ಖಾತೆಯಿಂದ ಮಾಸಾಶನ ಪಾವತಿಗೆ ಅವರ ಮನೆ ಬಾಗಿಲಲ್ಲಿ ಪಾವತಿಸಲು ಹಿಂಪಡೆಯುವ ನಮೂನೆಗೆ ಸಹಿ ಮತ್ತು ಇದಕ್ಕೆ ಗೆಜಿಟೆಡ್ ಅಧಿಕಾರಿಗಳ ಸಹಿ, ಸಾಕ್ಷಿಗಳ ಸಹಿ ಪಡೆದು ಮನೆ ಬಾಗಿಲಲ್ಲಿ ವಿತರಣೆ ಮಾಡಲಾಗುತ್ತದೆ ಎಂದು ಹೇಳಿದರು.
ಇಂಡಿಯಾ ಪೋಸ್ಟ್ ಪೇಮೆಂಟ್ ವ್ಯವಸ್ಥೆಯಡಿ ಅಂಚೆ ಕಚೇರಿಯಲ್ಲಿ ಹಾಗೂ ಮನೆ ಬಾಗಿಲಲ್ಲಿ ಬಯೋಮೆಟ್ರಿಕ್ ಮೂಲಕ ಅಂಚೆಯಣ್ಣ ಪಾವತಿಸುವರು. ಮಾಸಾಶನ ಸರ್ಕಾರದಿಂದ ಖಾತೆಗೆ ಜಮೆಯಾದ ಬಗ್ಗೆ ಮೊಬೈಲ್‍ಗೆ ಮೆಸೇಜ್ ಹೋಗುತ್ತದೆ. ಫಲಾನುಭವಿಗಳು ಬಯೋ ಮೆಟ್ರಿಕ್ ನೀಡುವಾಗ ಮತ್ತು ವಿತ್‍ಡ್ರಾ ನಮೂನೆಗೆ ಸಹಿ ಮಾಡುವಾಗ ಖಾತರಿ ಮಾಡಿಕೊಳ್ಳಬೇಕು ಸೂಚಿಸಿದರು.ಅಂಚೆ ಅಧೀಕ್ಷಕ ಚಂದ್ರಶೇಖರ, ಸಾಮಾಜಿಕ ಭದ್ರತಾ ಯೋಜನೆ ಸಹಾಯಕ ನಿರ್ದೇಶಕರಾದ ಪುಷ್ಪಾ, ಅಂಚೆ ಇಲಾಖೆ ವಿವಿಧ ಅಧಿಕಾರಿಗಳಿದ್ದರು.