ಗದಗ: ಜಿಲ್ಲೆಯ ಸ್ಲಂ ಪ್ರದೇಶಗಳಲ್ಲಿ ನಿರ್ಮಿಸಲಾಗುತ್ತಿರುವ ಪ್ರಧಾನ ಮಂತ್ರಿಗಳ ಆವಾಸ್ ಯೋಜನೆಯಡಿ ಮನೆಗಳು ಕಳಪೆ ಕಾಮಗಾರಿ ಹಾಗೂ ವಸತಿ ಯೋಜನೆಯ ಅನುದಾನದಲ್ಲಿ ಭಾರೀ ಭ್ರಷ್ಟಾಚಾರ ನಡೆಸಿರುವ ಸ್ಲಂ ಬೋರ್ಡ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಕೂಡಲೇ ಅಮಾನತು ಮಾಡುವಂತೆ ಆಗ್ರಹಿಸಿ ಸ್ಲಂ ಜನಾಂದೋಲನ-ಕರ್ನಾಟಕ ಹಾಗೂ ಗದಗ ಜಿಲ್ಲಾ ಸ್ಲಂ ಸಮಿತಿಯ ನೇತೃತ್ವದಲ್ಲಿ ಸೋಮವಾರ ಸ್ಲಂ ನಿವಾಸಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತ ಪಡಿಸಿದರು.
ಪ್ರಧಾನ ಮಂತ್ರಿಗಳ ಆವಾಸ್ ಯೋಜನೆಯಡಿಯಲ್ಲಿ ಗದಗ-ಬೆಟಗೇರಿ ನಗರದಲ್ಲಿ 863 ಮನೆ ಹಾಗೂ ಗದಗ ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಲ್ಲಿ ನೂರಾರು ಮನೆಗಳನ್ನು ಈ ಯೋಜನೆಯಡಿಯಲ್ಲಿ ನಿರ್ಮಿಸಲಾಗುತ್ತಿದೆ, ಪ್ರಧಾನ ಮಂತ್ರಿಗಳ ಆವಾಸ್ ಯೋಜನೆಯಡಿಯಲ್ಲಿ ನಿರ್ಮಿಸಲಾಗುತ್ತಿರುವ ಮನೆಗಳ ಕಾಮಾಗಾರಿಯ ಅನುದಾನದಲ್ಲಿ ಸ್ಲಂ ಬೋರ್ಡ್ ಅಧಿಕಾರಿಗಳು, ಕೆಲ ಸಿಬ್ಬಂದಿ ಮತ್ತು ಗುತ್ತಿಗೆದಾರರು ಸೇರಿ ಭಾರಿ ಭ್ರಷ್ಟಾಚಾರ ನಡೆಸಿದ್ದಾರೆ.
ಕಳೆದ 17 ವರ್ಷಗಳಿಂದ ಗದಗ ಜಿಲ್ಲೆ ಮತ್ತು ಗದಗ-ಬೆಟಗೇರಿ ನಗರ ಹಾಗೂ ಗದಗ ಜಿಲ್ಲೆಯ ವಿವಿಧ ತಾಲೂಕುಗಳ ಪಟ್ಟಣದಲ್ಲಿರುವ ಸ್ಲಂ ಪ್ರದೇಶದ ಕುಟುಂಬಗಳ ವಸತಿ,ಮೂಲಭೂತ ಸೌಲಭ್ಯ, ಹಕ್ಕುಪತ್ರ, ಪರಿಚಯ ಪತ್ರ, ಅಘೋಷಿತ ಗುಡಿಸಲು ಪ್ರದೇಶಗಳ ಘೋಷಣೆ ಮತ್ತು ಇನ್ನು ಹಲವಾರು ಹಕ್ಕೋತ್ತಾಯಗಳಿಗೆ ಆಗ್ರಹಿಸಿ ಹೋರಾಟ ನಡೆಸಲಾಗಿದೆ.ಆದರೆ ಸ್ಲಂ ಪ್ರದೇಶಗಳ ಜನರ ಜ್ವಲಂತ ಸಮಸ್ಯೆಗಳಿಗೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ, ಸ್ಲಂ ಪ್ರದೇಶದ ಮುಗ್ದ ಜನರಿಗೆ ಮೋಸ ಮಾಡುತ್ತಿರುವ ಸ್ಲಂ ಬೋರ್ಡ್ ಅಧಿಕಾರಿಗಳು ಸರ್ಕಾರದ ಸುತ್ತೋಲೆಯಂತೆ ಮನೆ ನಿರ್ಮಿಸುವುದನ್ನು ಬಿಟ್ಟು ಗುತ್ತಿಗೆದಾರನ ಜತೆಗೆ ಶಾಮೀಲಾಗಿ ವಸತಿ ಯೋಜನೆಯ ನೂರಾರು ಕೋಟಿ ಅನುದಾನ ದುರ್ಬಳಕ್ಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.ಜಿಲ್ಲಾ ಸ್ಲಂ ಸಮಿತಿ ಉಪಾಧ್ಯಕ್ಷ ರವಿಕುಮಾರ ಬೆಳಮಕರ, ಕಾರ್ಯದರ್ಶಿ ಅಶೋಕ ಕುಸಬಿ, ಸ್ಲಂ ಸಮಿತಿ ಮುಖಂಡ ದುರ್ಗಪ್ಪ ನವಲಗುಂದ, ಮಹಿಳಾ ಸಮಿತಿ ಸಂಚಾಲಕಿ ಮೆಹರುನಿಸಾ ಢಾಲಾಯತ, ಶಂಕ್ರಪ್ಪ ರೋಣ, ಮೆಹರುನಿಸಾ ಡಂಬಳ, ಮೈಮುನ ಬೈರಕದಾರ, ಮಕ್ತುಮ ಮುಲ್ಲಾನವರ, ಇಬ್ರಾಹಿಂ ಮುಲ್ಲಾ, ಮಲೇಶಪ್ಪ ಕಲಾಲ, ಪ್ರಕಾಶ ಹಡಗಲಿ, ಮೌಲಾಸಾಬ್ ಗಚ್ಚಿ,ಗೌಸಸಾಬ್ ಅಕ್ಕಿ,ಮೆಹಬೂಸಾಬ್ ಬಳ್ಳಾರಿ,ರೇವಣಪ್ಪ ಲಕ್ಕುಂಡಿ, ಖಾಜಾಸಾಬ್ ಬಳ್ಳಾರಿ, ನಜಮುನಿಸಾ ಮುರಗೋಡ, ಸಾಕ್ರುಬಾಯಿ ಗೋಸಾವಿ, ದಾದು ಗೋಸಾವಿ, ಖಾಜೇಸಾಬ ಇಸ್ಮಾಯಿಲನವರ, ದುರ್ಗಪ್ಪ ಮಣ್ಣವಡ್ಡರ, ರವಿ ಗೋಸಾವಿ, ಮಂಜುನಾಥ ಶ್ರೀಗಿರಿ, ಶಿವಾನಂದ ಶಿಗ್ಲಿ, ಸಲೀಮ ಬೈರಕದಾರ, ದಾವಲ್ ಯಾದಗೇರಿ, ಮಮ್ತಾಜ ಕರಮುಡಿ ಹಾಗೂ ಗದಗ ಜಿಲ್ಲೆಯ ನೂರಾರು ಸ್ಲಂ ನಿವಾಸಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದರು.