ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಬಳಿ ಸಭೆ ಮಾಡಿದರು. ನೋಂದಾಯಿತ ಸಂಘಗಳಿಗೆ ಕಟ್ಟಡ ಕಾರ್ಮಿಕರನ್ನು ನೋಂದಣಿ ಮಾಡಲು ಆದೇಶಿಸಬೇಕು. ಸೆಸ್ ವಸೂಲಿ ಪ್ರಾಧಿಕಾರ ರಚನೆ ಮಾಡಬೇಕು. ಈ ಹಿಂದೆ ರಾಜ್ಯದಲ್ಲಿ ನಿರ್ಮಾಣ ಮಾಡಿರುವ ಎಲ್ಲ ಕಾಮಗಾರಿಗಳ ಮೌಲ್ಯಮಾಪನ ಮಾಡಲು ತಕ್ಷಣ ಅಧಿಕಾರಿಗಳ ನೇಮಕ ಮಾಡಿ ಶೇ.2ರಂತೆ ಬಡ್ಡಿ ಸಹಿತ ಸೆಸ್ ವಸೂಲಿ ಮಾಡಬೇಕೆಂದು ಆಗ್ರಹಿಸಿದರು.
ಸಂಘದ ರಾಜ್ಯ ಕಾರ್ಯದರ್ಶಿ ವೈ ಕುಮಾರ್ ಮಾತನಾಡಿ, ನೋಂದಾಯಿತ ಕಟ್ಟಡ ಕಾರ್ಮಿಕರಿಗಾಗಿ ಹಿಂದಿನ ರಾಜ್ಯ ಸರ್ಕಾರಗಳು ಹರಸಾಹಸಪಟ್ಟು ಮಂಡಳಿ ರಚನೆ ಮಾಡಿದ್ದು ಕಳೆದ 13 ವರ್ಷದಿಂದ ಕಾರ್ಯ ನಿರ್ವಹಿಸುತ್ತಿದೆ. ನೊಂದಾಯಿತ ಕಟ್ಟಡ ಕಾರ್ಮಿಕರ ಭದ್ರತೆ ಮತ್ತು ಏಳಿಗೆಗಾಗಿ ಶ್ರಮಿಸುವಂತಹ ಕೆಲಸ ಆಗುತ್ತಿಲ್ಲ. ಬಿಜೆಪಿ ಮತ್ತು ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರಗಳು ಕಾರ್ಮಿಕರ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿವೆ ಎಂದು ದೂರಿದರು.ನೋಂದಣಿ ನವೀಕರಣ ಅರ್ಜಿಗಳನ್ನು ಸಲ್ಲಿಸಲು ಬೇಕಾಬಿಟ್ಟಿ ಮಾನದಂಡಗಳನ್ನು ವಿಧಿಸಿದ್ದು, ಅವುಗಳ ಸರಳೀಕರಣಗೊಳಿಸಿ 3 ವರ್ಷಗಳಿಗೊಮ್ಮೆ ನವೀಕರಣ ಮಾಡುವಂತೆ ಆದೇಶಿಸಬೇಕು. ಕಟ್ಟಡ ಕಾರ್ಮಿಕರ ಮನೆಗಳ ನಿರ್ಮಾಣಕ್ಕೆ 5 ಲಕ್ಷ ರು. ನೀಡಬೇಕು. ಮಾಸಿಕ ಪಿಂಚಣಿಯ 5 ಸಾವಿರ ರು. ಗಳಿಗೆ ಹೆಚ್ಚಿಸಬೇಕು. ಹೆರಿಗೆ ಭತ್ಯೆ ನಗದು ನೇರ ವರ್ಗಾವಣೆ 50 ಸಾವಿರ ರು, ಮದುವೆಗೆ 1 ಲಕ್ಷ ನೀಡಬೇಕು. ರಕ್ತ ತಪಾಸಣೆಯಲ್ಲಿ ಕಂಡು ಬಂದ ಖಾಯಿಲೆಗೆ ಆರೋಗ್ಯ ಭಾಗ್ಯ ಯೋಜನೆಜಾರಿ ಮಾಡಿ, ವೈದ್ಯಕೀಯ ಸೌಲಭ್ಯ ಕಲ್ಬಿಸಬೇಕೆಂದು ಒತ್ತಾಯಿಸಿದರು.