ಮಂಡ್ಯ ಜಿಲ್ಲೆಗೆ ೨ ಸಾವಿರ ಕೋಟಿ ರು. ವಿಶೇಷ ಪ್ಯಾಕೇಜ್‌ ನೀಡಲು ಸಿಐಟಿಯು ಆಗ್ರಹ

KannadaprabhaNewsNetwork |  
Published : Aug 21, 2026, 01:30 AM IST
೨೦ಕೆಎಂಎನ್‌ಡಿ-೧ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಿಐಟಿಯು ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ ಮಾತನಾಡಿದರು. | Kannada Prabha

ಸಾರಾಂಶ

ಮಳೆ ಕೊರತೆಯಿಂದ ಜಿಲ್ಲೆ ಬರಗಾಲಕ್ಕೆ ತುತ್ತಾಗಿದೆ. ರಾಜ್ಯ ಸರ್ಕಾರದ ನೀರಾವರಿ ಸಲಹಾ ಸಮಿತಿ ಬೆಳೆಗಳಿಗೆ ಕೇವಲ ನಾಲ್ಕುಕಟ್ಟು ನೀರನ್ನು ನೀಡುವುದಾಗಿ ಘೋಷಿಸಿರುವುದು ರೈತರಲ್ಲಿ ಆತಂಕವನ್ನು ಸೃಷ್ಟಿಸಿದೆ. ಕೆಆರ್‌ಎಸ್ ಅಣೆಕಟ್ಟೆಯಲ್ಲೂ ನಿರೀಕ್ಷಿತ ಪ್ರಮಾಣದ ನೀರು ಸಂಗ್ರಹವಾಗಿಲ್ಲ. ಜಲಾಶಯ ಭರ್ತಿಯಾಗುವ ಖಚಿತವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕಾವೇರಿ ನೀರಿನ ಕೊರತೆ ಮತ್ತು ಬರ ನಿರ್ವಹಣೆ ಮಾಡಲು ರಾಜ್ಯ ಸರ್ಕಾರ ಜಿಲ್ಲೆಗೆ ೨ ಸಾವಿರ ಕೋಟಿ ರು. ಅನುದಾನ ನೀಡಬೇಕು ಎಂದು ಸಿಐಟಿಯು ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ ಒತ್ತಾಯಿಸಿದರು.

ಮಳೆ ತೀವ್ರ ಕೊರತೆ ಹಿನ್ನೆಲೆಯಲ್ಲಿ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಬೇಕು. ರೈತರಿಗೆ ಬೆಳೆ ಪರಿಹಾರ ಮತ್ತು ಕೂಲಿಕಾರರಿಗೆ ಉದ್ಯೋಗ ನೀಡುವಂತೆ ಆಗ್ರಹಿಸಿ ಆ.೨೮ ಮತ್ತು ೨೯ರಂದು ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಎಲ್ಲಾ ತಾಲೂಕು ಕಚೇರಿಗಳ ಎದುರು ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮಳೆ ಕೊರತೆಯಿಂದ ಜಿಲ್ಲೆ ಬರಗಾಲಕ್ಕೆ ತುತ್ತಾಗಿದೆ. ರಾಜ್ಯ ಸರ್ಕಾರದ ನೀರಾವರಿ ಸಲಹಾ ಸಮಿತಿ ಬೆಳೆಗಳಿಗೆ ಕೇವಲ ನಾಲ್ಕುಕಟ್ಟು ನೀರನ್ನು ನೀಡುವುದಾಗಿ ಘೋಷಿಸಿರುವುದು ರೈತರಲ್ಲಿ ಆತಂಕವನ್ನು ಸೃಷ್ಟಿಸಿದೆ. ಕೆಆರ್‌ಎಸ್ ಅಣೆಕಟ್ಟೆಯಲ್ಲೂ ನಿರೀಕ್ಷಿತ ಪ್ರಮಾಣದ ನೀರು ಸಂಗ್ರಹವಾಗಿಲ್ಲ. ಜಲಾಶಯ ಭರ್ತಿಯಾಗುವ ಖಚಿತವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಅತ್ತ ತಮಿಳುನಾಡಿಗೆ ಕೊಡಬೇಕಾದ ಪಾಲಿನ ನೀರನ್ನು ಕೊಡಲು ಕಷ್ಟವಾಗಿದ್ದು, ನ್ಯಾಯಾಲಯ, ನೀರು ನಿರ್ವಹಣಾ ಪ್ರಾಧಿಕಾರದ ಮಧ್ಯಪ್ರವೇಶದ ನಂತರ ನೀರು ಹರಿಸಲಾಗುತ್ತಿದೆ. ಇದು ರೈತರು ಮತ್ತು ಕೂಲಿಕಾರರ ಬದುಕು ಮತ್ತು ಭಾವನಾತ್ಮಕ ಆತಂಕ ಸೃಷ್ಟಿಸಿದೆ ಎಂದರು.

ಬರ ನಿರ್ವಹಣೆಗೆ ರಾಜ್ಯಸರ್ಕಾರ ಜಿಲ್ಲೆಗೆ ೨ ಸಾವಿರ ಕೋಟಿ ರು. ಅನುದಾನ ನೀಡಬೇಕು. ರೈತರಿಗೆ ಬೆಳೆ ನಷ್ಟ, ಕೂಲಿಕಾರರಿಗೆ ಕೂಲಿ ನಷ್ಟಕ್ಕೆ ಪರಿಹಾರ ನೀಡಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ೨೦೦ ದಿನ ಕೆಲಸ ನೀಡುವುದು. ರೈತರ ಸಾಲ ಹಾಗೂ ಕೂಲಿಕಾರರ ಮೈಕ್ರೋಫೈನಾನ್ಸ್ ಸಾಲ ಮನ್ನಾ, ಕಾವೇರಿ ನೀರಿನ ಅಭಾವ ಸನ್ನಿವೇಶದಲ್ಲಿ ಮಧ್ಯಪ್ರವೇಶ ಮಾಡಲು ೫ ಸಾವಿರ ಕೋಟಿ ರು. ಶಾಶ್ವತ ಪರಿಹಾರ ನಿಧಿ ಸ್ಥಾಪಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿ ಜವಾಬ್ದಾರಿ ಹೊರುವಂತೆ ಆಗ್ರಹಿಸಿದರು.

ಬರಗಾಲದ ಸಮಯದಲ್ಲಿ ರೈತರಿಗೆ ಉಂಟಾಗುವ ಆರ್ಥಿಕ ನಷ್ಟ ತುಂಬಿಕೊಡುವ ಮತ್ತು ಅವಲಂಬಿತರಿಗೆ ಉದ್ಯೋಗವಕಾಶಗಳನ್ನು ಸೃಷ್ಟಿಸುವ ಪ್ರಯತ್ನವನ್ನು ರಾಜ್ಯಸರ್ಕಾರ ಮಾಡುತ್ತಿಲ್ಲ. ವಿಪಕ್ಷಗಳೂ ಯಾವುದೇ ಬೇಡಿಕೆ ಮಂಡಿಸದಿರುವ ಬೇಜವಾಬ್ದಾರಿ ನಡೆಯನ್ನು ಖಂಡಿಸಿದರು.

ಸಂಕಷ್ಟ ಸಮಯದಲ್ಲಿ ಉಂಟಾಗುತ್ತಿರುವ ಆತಂಕ ಮತ್ತು ಅಭದ್ರತೆಯನ್ನು ದೂರ ಮಾಡಲು ಸಂಬಂಧಿಸಿದ ಪ್ರಾಧಿಕಾರಗಳು ಮತ್ತು ಕೇಂದ್ರ ಸರ್ಕಾರ ಕೂಡಲೇ ಶಾಶ್ವತ ಸಂಕಷ್ಟ ಪರಿಹಾರ ಸೂತ್ರವನ್ನು ರೂಪಿಸುವಂತೆ ಒತ್ತಾಯಿಸಿದರು.

ಗೋಷ್ಠಿಯಲ್ಲಿ ಎನ್.ಎಲ್.ಭರತ್‌ರಾಜ್, ಸಿ.ಕುಮಾರಿ, ಹನುಮೇಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಡಕೆ ತೋಟದ ಹಳ್ಳಕ್ಕೆ ನುಗ್ಗಿದ ಖಾಸಗಿ ಬಸ್
ಹತ್ತಿ ಬೆಳೆಗೆ ಮುಟುರು ರೋಗ ಗಿಡಹೇನು ಬಾಧೆ: ರೈತರ ಆತಂಕ