ಹೊಸಪೇಟೆ: ನಗರದಲ್ಲಿ ಶುಕ್ರವಾರ ನಡೆದ ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾನ ಕೇಂದ್ರಕ್ಕೆ ಮತದಾನದ ವೇಳೆ ಕಾಂಗ್ರೆಸ್ ಮುಖಂಡರು ಹಾಗೂ ಅಂಗರಕ್ಷಕರು ನಿಯಮ ಬಾಹಿರವಾಗಿ ಮತಗಟ್ಟೆ ಪ್ರವೇಶ ಮಾಡಿದ್ದಾರೆ. ಕಾಂಗ್ರೆಸ್ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಿಜೆಪಿ ಸ್ಥಳೀಯ ಮುಖಂಡರು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹಾಗೂ ಎಸ್ಪಿ ಎಸ್.ಜಾಹ್ನವಿಗೆ ದೂರು ಸಲ್ಲಿಸಿದ್ದಾರೆ.
ಮತದಾನ ಕೇಂದ್ರದಲ್ಲಿ ಚುನಾವಣಾ ಆಯೋಗ ನಿಗದಿಪಡಿಸಿರುವ ಸಿಬ್ಬಂದಿ ಹೊರತಾಗಿ ಕೇವಲ ಮತದಾರರಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿರುತ್ತದೆ. ಆದರೆ ಕಾಂಗ್ರೆಸ್ ಮುಖಂಡರು ಅತಿಕ್ರಮ ಪ್ರವೇಶಿಸಿ ಚುನಾವಣಾ ಆಯೋಗದ ನಿಯಮ ಉಲ್ಲಂಘಿಸಿದ್ದಾರೆ. ಇದಕ್ಕೆ ಸಾಕ್ಷಿ ಚುನಾವಣಾ ಆಯೋಗವು ಮತದಾನ ಕೇಂದ್ರದಲ್ಲಿ ಅಳವಡಿಸಿದ ಸಿಸಿ ಕ್ಯಾಮೆರಾ ಪರಿಶೀಲಿಸಿ ಅತಿಕ್ರಮ ಪ್ರವೇಶ ಮಾಡಿದವರ ವಿರುದ್ಧ ಮತ್ತು ಮತದಾನ ಕೇಂದ್ರದ ಒಳಗಡೆ ಪ್ರವೇಶ ಮಾಡಲು ಅವಕಾಶ ಮಾಡಿಕೊಟ್ಟ ಸಿಬ್ಬಂದಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಬಿಜೆಪಿಯಿಂದ ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ಮಂಡಲದ ಅಧ್ಯಕ್ಷ ಮೇಟಿ ಶಂಕರ್, ಮಂಡಲ ಪ್ರಧಾನ ಕಾರ್ಯದರ್ಶಿ ಮಧುರಚನ್ನ ಶಾಸ್ತ್ರಿ ಹಿರೇಮಠ, ಎಚ್.ನಟರಾಜ ಸೇರಿದಂತೆ ಬಿಜೆಪಿ ಮುಖಂಡ ಸಂದೀಪ್ ಸಿಂಗ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು ದೂರಿನಲ್ಲಿ ತಿಳಿಸಿದ್ದಾರೆ.